Advertisement

ವಸತಿ ನಿಲಯ ಅವ್ಯವಸ್ಥೆ ಸರಿಪಡಿಸಿ

12:44 PM Jul 26, 2019 | Suhan S |

ಬೀಳಗಿ: ಸ್ಥಳೀಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರ ಬಾಲಕಿಯರ ಹಾಗೂ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ನಿಲಯ ಮತ್ತು ವೃದ್ಧಾಶ್ರಮಕ್ಕೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಗುರುವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಅಲ್ಪಸಂಖ್ಯಾತ ಮೊರಾರ್ಜಿ ವಸತಿ ನಿಲಯದ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡರು. ರುಚಿಕರವಲ್ಲದ ಸಪ್ಪೆ ಅಡುಗೆಯ ಅರೆಹೊಟ್ಟೆ ಊಟ ಮಾಡುವ ಮಕ್ಕಳ ಸ್ಥಿತಿಯನ್ನು ಕಂಡು ಮಮ್ಮಲ ಮರುಗಿದರು. ವಸತಿ ನಿಲಯದ ಮಕ್ಕಳನ್ನು ಪ್ರತ್ಯೇಕವಾಗಿ ವಿಚಾರಿಸಿದರು. ಹೆಸರು ಹೇಳಲು ಇಚ್ಚಿಸದ ಹಲವಾರು ಮಕ್ಕಳು ವಸತಿ ನಿಲಯದ ಅವ್ಯವಸ್ಥೆ ಬಿಚ್ಚಿಟ್ಟರು. ಹಲವಾರು ಸಮಸ್ಯೆಗಳನ್ನು ಮಕ್ಕಳು ತಮ್ಮ ಅವ್ವನ ಎದುರು ಗೋಳು ಹೇಳಿಕೊಂಡಂತೆ ತಮ್ಮ ಸಮಸ್ಯೆ, ಅಸಹಾಯಕತೆ ಬಿಚ್ಚಿಟ್ಟರು. ಇಂತಹ ಹಲವಾರು ಸಂಗತಿ ಗಮನಿಸಿದ ಅಧ್ಯಕ್ಷರು, ಎಲ್ಲವನ್ನೂ ಸರಿಪಡಿಸುವುದಾಗಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ನಿಮಗೆ ಮತ್ತೇನಾದರೂ ಸಮಸ್ಯೆ ಮಾಡಿದರೆ ನನಗೆ ಪೋನ್‌ ಮಾಡಿ ಎಂದು ಮಕ್ಕಳಿಗೆ ತಮ್ಮ ದೂರವಾಣಿ ನಂಬರ್‌ ನೀಡಿದರು. ಅಧ್ಯಕ್ಷರ ಕಳಕಳಿಯ ನುಡಿಗೆ, ಜಿಪಂ ಅಧ್ಯಕ್ಷೆ ಹಾಗೂ ಜಿಪಂ ಸದಸ್ಯೆ ಕಸ್ತೂರಿ ಲಿಂಗಣ್ಣವರ ಅವರ ಜತೆಗೆ ಗ್ರೂಫ್‌ ಪೋಟೋ ತೆಗೆಸಿಕೊಂಡರು.

ವಸತಿ ನಿಲಯದಲ್ಲಿ ರೊಟ್ಟಿ ಮಾಡಲು ಜೋಳದೊಂದಿಗೆ ಕಾಲುಭಾಗದಷ್ಟು ಅಕ್ಕಿ ಸೇರಿಸಿದ್ದನ್ನು ಹಾಗೂ ಅಡುಗೆ ಅವ್ಯವಸ್ಥೆ ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅಧ್ಯಕ್ಷರು, ಅಲ್ಲಿನ ಸಿಬ್ಬಂದಿಯನ್ನು ತೀವ್ರ ತರಾಟೆ ತೆಗೆದುಕೊಂಡರು. ಶಿಸ್ತು ಕ್ರಮ ಜರುಗಿಸಲು ಸೂಚಿಸಿದರು.

ಮೆಟ್ರಿಕ್‌ ನಂತರ ಬಾಲಕಿಯರ ವಸತಿ ನಿಲಯದ ಸ್ವಚ್ಛತೆ ಕಂಡು ಖುಷಿ ಪಟ್ಟ ಅಧ್ಯಕ್ಷರು, ಇಲ್ಲಿಯೂ ಕೂಡ ಊಟದ ಅವ್ಯವಸ್ಥೆ ದೂರುಗಳು ಕೇಳಿಬಂದಿದ್ದು, ಜಾಗೃತಿ ವಹಿಸುವಂತೆ ಸೂಚಿಸಿದರು. ಪಟ್ಟಣದ ಕನಕದಾಸ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು.

Advertisement

ಜಿಪಂ ಸದಸ್ಯೆ ಕಸ್ತೂರಿ ಲಿಂಗಣ್ಣವರ ಅಧ್ಯಕ್ಷರಿಗೆ ಸಾಥ್‌ ನೀಡಿದರು. ಕಿರಣ ನಾಯ್ಕರ, ರವಿ ನಾಗನಗೌಡರ, ಬಸು ಕಲ್ಲಕುಟಿ, ಚಿದಾನಂದ ನಂದ್ಯಾಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next