Advertisement

ಹೆಣ ಹೊರುವವರಿಗೆ ಹೆಣವಾಗುವ ಭಯ!

10:19 PM Sep 01, 2019 | Lakshmi GovindaRaj |

ಸಂತೆಮರಹಳ್ಳಿ: ಹರಿಯುತ್ತಿರುವ ನದಿಯಲ್ಲಿ ಎದೆಮಟ್ಟದ ನೀರಿನಲ್ಲೇ ಜೀವಭಯದಲ್ಲೇ ಹೆಜ್ಜೆಗಳನ್ನಿಟ್ಟು ರುದ್ರಭೂಮಿಗೆ ಸಾಗುವ ಹೆಂಗಸರು, ಹೆಣವನ್ನು ಹೊತ್ತುಕೊಂಡು ನೀರಿನಲ್ಲಿ ಕಾಲಿಟ್ಟರೆ ಎಲ್ಲಿ ಬೀಳುತ್ತೇವೂ, ಕೊಚ್ಚಿ ಹೋಗುತ್ತೇವೋ ಎಂಬ ಆತಂಕದಲ್ಲೇ ಎದೆಮಟ್ಟದ ನೀರಿನಲ್ಲಿ ಹೆಣದ ಭಾರವನ್ನು ಹೊರುವ ಅನಿವಾರ್ಯತೆ. ಇದು ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿನ ದುಸ್ಥಿತಿ..!

Advertisement

ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆಂದರೆ ಸುವರ್ಣಾವತಿ ನದಿ ಮಗ್ಗುಲಲ್ಲಿರುವ ಖಾಸಗಿ ಜಮೀನನ್ನೇ ಆಶ್ರಯಿಸಬೇಕು. ಕಳೆದ ಹತ್ತು ವರ್ಷಗಳಿಂದಲೂ ಸುವರ್ಣಾವತಿ ನದಿ ತುಂಬಿ ಹರಿದಿರಲಿಲ್ಲ. ಕಬಿನಿ ಕಾಲುವೆಯಲ್ಲಿ ನೀರು ಬಿಟ್ಟಿರುವುದರಿಂದ ನದಿಯಲ್ಲಿ ನೀರು ಹರಿಯುತ್ತಿದೆ.

ಭಯದಲ್ಲೇ ನದಿ ದಾಟುವ ಜನರು: ಇತ್ತೀಚೆಗೆ ಗ್ರಾಮದ ಸಿದ್ದೇಶ್ವರಪೇಟೆಯ ಚಂದ್ರು ಹಾಗೂ ಮಾಸ್ತಿ ಬೀದಿಯ ಶಿವಯ್ಯ ಎಂಬುವವರು ಮೃತಪಟ್ಟಿದ್ದರು. ಶವಸಂಸ್ಕಾರಕ್ಕೆ ನದಿ ದಾಟುವ ಸಂದರ್ಭದಲ್ಲಿ ಕಾಲು ಜಾರುವ ಭಯದಲ್ಲೇ ಇಷ್ಟೆಲ್ಲಾ ಪ್ರಯಾಸದ ನಡುವೆಯೂ ಗ್ರಾಮಸ್ಥರು ಶವ ಸಂಸ್ಕಾರ ಮಾಡಿ ಮುಗಿಸಿದ್ದಾರೆ.

ಇತರೆ ಸಮುದಾಯದವರಿಗೆ ಸ್ಮಶಾನವೇ ಇಲ್ಲ: ತಾಲೂಕಿನ ದೊಡ್ಡ ಗ್ರಾಮವಾಗಿರುವ ಮಾಂಬಳ್ಳಿ ಗ್ರಾಮವೊಂದಕ್ಕೆ ಪ್ರತ್ಯೇಕ ಗ್ರಾಮ ಪಂಚಾಯಿತಿ ಇದೆ. ಇಲ್ಲಿ ಅಧಿಕ ಸಂಖ್ಯೆಯಲ್ಲಿ ದಲಿತ ಹಾಗೂ ಮುಸ್ಲಿಂ ಜನಾಂಗ ವಾಸ ಮಾಡುತ್ತಾರೆ. ಇದರೊಂದಿಗೆ ಅನೇಕ ಹತ್ತಾರು ಜನಾಂಗದವರೂ ಇಲ್ಲಿದ್ದಾರೆ. ಆದರೆ ಮುಸ್ಲಿಮರನ್ನು ಹೊರತು ಪಡಿಸಿದರೆ ಇತರರಿಗೆ ಇಲ್ಲಿ ಸ್ಮಶಾನವೇ ಇಲ್ಲ.

ದಲಿತರ ಜಾಗ ಕೋರ್ಟ್‍ನಲ್ಲಿ: ದಲಿತ ಜನಾಂಗದ ರುದ್ರಭೂಮಿಯ ಜಾಗ ಕೋರ್ಟಿನಲ್ಲಿದೆ. ಆದರೆ ಪರ್ಯಾಯವಾಗಿ ಸ್ಮಶಾನಕ್ಕೆ ಸರ್ಕಾರಿ ಜಾಗವನ್ನು ನೀಡಿ ಎಂಬ ಕೂಗು ಹತ್ತಾರು ವರ್ಷಗಳಿಂದ ಇದ್ದರೂ ಯಾವ ಚುನಾಯಿತ ಜನಪ್ರತಿನಿಧಿಗಳು ಈ ಬಗ್ಗೆ ತಲೆಕಡಿಸಿಕೊಂಡಿಲ್ಲ ಎಂಬುದು ಇಲ್ಲಿನ ನಾಗರಿಕರಾದ ಕೆಂಪರಾಜು, ಶಾಂತರಾಜು, ಕಾಂತರಾಜು, ಫ‌ಲ್ಗುಣವರ ದೂರು.

Advertisement

ಮೂವರು ಶಾಸಕರನ್ನು ನೀಡಿದ ಮಾಂಬಳ್ಳಿ ಗ್ರಾಮ: ಯಳಂದೂರು ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಮಾಂಬಳ್ಳಿಯೂ ಒಂದು. ತಾಲೂಕಿನಲ್ಲೇ ಹೆಚ್ಚು ಸುಶಿಕ್ಷಿತರು, ದೊಡ್ಡ ಉದ್ಯೋಗಿಗಳು ಸಹ ಈ ಊರಲ್ಲಿದ್ದಾರೆ. ಅಲ್ಲದೆ ಗ್ರಾಮದವರೇ ಆದ ಕೆಂಪಮ್ಮ, ಸಿದ್ದಮಾದಯ್ಯ, ಜಯಣ್ಣ ಅವರು ಕೊಳ್ಳೇಗಾಲ ಕ್ಷೇತ್ರದ ಶಾಸಕರಾಗಿದ್ದರು. ಆದರೂ ಈ ಗ್ರಾಮಕ್ಕೆ ಒಂದು ಸುಸಜ್ಜಿತ ಸ್ಮಶಾನ ಭೂಮಿ ಹಾಗೂ ಸುವರ್ಣವತಿ ನದಿಗೆ ಸೇತುವೆ ನಿರ್ಮಾಣ ಮಾಡುವ ವ್ಯವಸ್ಥೆ ಮಾಡುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಫ‌ಲರಾಗಿದ್ದಾರೆ. ಈಗ ಶಾಸಕ ಎನ್‌. ಮಹೇಶ್‌ ಅವರ ಮೇಲೆ ಅಪಾರ ನಂಬಿಕೆ ಇದ್ದು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಸೇತುವೆ ನಿರ್ಮಾಣಕ್ಕೆ ಮೀನಮೇಷ: ಇಲ್ಲಿಗೆ ಸೇತುವೆ ನಿರ್ಮಾಣಕ್ಕೆ 2.4 ಕೋಟಿ ರೂ. ಹಣ ನಿಗದಿಯಾಗಿತ್ತು. ಕಾಮಗಾರಿಯೂ ಆರಂಭಗೊಂಡಿತ್ತು. ಸೇತುವೆ ನಿರ್ಮಾಣಕ್ಕೆ ನದಿಗೆ ಅಡ್ಡಲಾಗಿ ಹಳ್ಳವನ್ನೂ ತೋಡಲಾಗಿದೆ. ಆದರೆ ಕಳೆದ 6 ತಿಂಗಳಿಂದಲೂ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈಗ ನೀರು ಹರಿಯುತ್ತಿರುವುದರಿಂದ ಹೆಣ ತೆಗೆದುಕೊಂಡು ಹೋಗಲು ತತ್ಕಾಲಿಕವಾಗಿ ಸೇತುವೆ ನಿರ್ಮಿಸಿ ಸಾಗುವ ಅನಿವಾರ್ಯತೆ ಇದೆ.

ಈ ಹಿಂದೆ ಸೇತುವೆ ನಿರ್ಮಾಣ ಕಾಮಗಾರಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಇತ್ತೀ ಚೆಗೆ ಈ ವಿಭಾಗಕ್ಕೆ ಬಂದಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಸಿ ಹೊಸ ಕ್ರಿಯಾ ಯೋಜನೆ ತಯಾರಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸುತ್ತೇವೆ.
-ಶಿವಕುಮಾರ್‌, ಜೆಇ ಕೆಎಆರ್‌ಡಿಸಿಎಲ್‌, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next