ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಲಗ್ಗೆರೆ ವಾರ್ಡ್‌ನಲ್ಲಿ ಶುಕ್ರವಾರ ಮಳೆ ನೀರುಗಾಲುವೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಸಿಎಂ ಕಾರ್ಯಕ್ರಮದಲ್ಲೇ ಲಗ್ಗೆರೆ ಕಾರ್ಪೊರೇಟರ್ ಮಂಜುಳಾ ನಾರಾಯಣಸ್ವಾಮಿ ಅವರ ಮೇಲೆ ಮುನಿರತ್ನ ಬೆಂಬಲಿಗರು ಎನ್ನಲಾದ ಕೆಲ ಮಂದಿ ಹಲ್ಲೆ ಮಾಡಿದ್ದಾರೆ.
ಶಂಕುಸ್ಥಾಪನೆ ನೆರವೇರಿಸುವ ವೇದಿಕೆ ಕಾರ್ಯಕ್ರಮದಲ್ಲಿ ತಮಗೆ ಮಾತನಾಡಲು ಅವಕಾಶ ನೀಡುವಂತೆ ಕಾರ್ಪೊರೇಟರ್ ಮಂಜುಳಾ ನಾರಾಯಣಸ್ವಾಮಿ ಆಯೋಜಕರನ್ನು ಕೇಳಿದ್ದಾರೆ. ಆದರೆ, ಆಯೋಜಕರು ಅದಕ್ಕೆ ಅವಕಾಶ ನೀಡಲಿಲ್ಲ. ಮುಖ್ಯಮಂತ್ರಿಗಳು ಹೊರಟ ಕಾರಣ ಕೂಡಲೇ ಅವರು ವೇದಿಕೆಯಲ್ಲಿ ಮಾತನಾಡಲು ಮುಂದಾಗಿದ್ದಾರೆ. ಈ ವೇಳೆ ಮೇಯರ್ ಜಿ.ಪದ್ಮಾವತಿ ಅವರೂ ಮಂಜುಳಾ ಅವರನ್ನು ತಡೆದು ಮಾತನಾಡದಂತೆ ಎಚ್ಚರಿಸಿದರು.
ಮುಖ್ಯಮಂತ್ರಿಗಳು ಹೊರಟ ನಂತರ ತಮ್ಮ ದೂರುಗಳನ್ನು ಹೇಳಿಕೊಳ್ಳಲು ಅವರು ಮಾಧ್ಯಮದವರ ಬಳಿಗೆ ಬಂದರು. ಕಾರ್ಯಕ್ರಮದಲ್ಲಿ ತಮಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಹೇಳಿಕೊಳ್ಳುವ ವೇಳೆಯೇ, ಪಾಲಿಕೆ ನಾಮನಿರ್ದೇಶಿತ ಸದಸ್ಯೆ ಸುನಂದಾ ಮತ್ತು ಶಾಸಕ ಮುನಿರತ್ನ ಅವರ ಬೆಂಬಲಿಗರ ಗುಂಪು ಮುನಿರತ್ನ ಅವರಿಗೆ ಜೈಕಾರ ಕೂಗಲು ಆರಂಭಿಸಿತು.
ಈ ವೇಳೆ ಸುನಂದಾ ಮತ್ತು ಮಂಜುಳಾ ಬೆಂಬಲಿಗರ ನಡುವೆ ಜಗಳ ಉಂಟಾಗಿದೆ. ನಂತರ ಸುನಂದಾ ಮತ್ತು ಮಂಜುಳಾ ಅವರ ನಡುವೆ ತಳ್ಳಾಟ – ನೂಕಾಟ ನಡೆದಿದೆ. ಪರಸ್ಪರ ಜಡೆ ಎಳೆದಾಡುಕೊಂಡಿದ್ದಾರೆ. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತೀವ್ರ ಸ್ವರೂಪ ಪಡೆಯದಂತೆ ಕ್ರಮಕೈಗೊಂಡರು.
ಶಾಸಕ ಮುನಿರತ್ನ ಅವರ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಬೀದಿಯಲ್ಲಿಯೇ ಸೀರೆ ಸೆಳೆದರು. ಸ್ಥಳೀಯ ಸದಸ್ಯೆ ನಾನಾದರೂ ಕಾರ್ಯಕ್ರಮದ ಯಾವುದೇ ಒಂದು ಬ್ಯಾನರಿನಲ್ಲಿಯೂ ನನ್ನ ಫೋಟೋ ಹಾಕಿಸದೆ ಸದಸ್ಯರಲ್ಲದವರನ್ನು ಹಾಕಿಸಿಕೊಂಡಿದ್ದಾರೆ. ಈ ಮೂಲಕ ಶಿಷ್ಟಾಚಾರ ಉಲ್ಲಂ ಸಿದ್ದಾರೆ. ಜತೆಗೆ ನನಗಾಗುತ್ತಿರುವ ಕಿರುಕುಳದ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಲು ಮುಂದಾದರೆ ಹಲ್ಲೆ ನಡೆಸಿದ್ದಾರೆ. ನನ್ನ ಮಾಂಗಲ್ಯ ಸರ ಎಳೆದಿದ್ದಾರೆ. ನನ್ನ ಮೇಲಿನ ಹಲ್ಲೆ ಕುರಿತು ಪೊಲೀಸರಿಗೆ ದೂರು ನೀಡುತ್ತೇನೆ
-ಮಂಜುಳಾ ನಾರಾಯಣಸ್ವಾಮಿ, ಲಗ್ಗೆರೆ ಕಾರ್ಪೊರೇಟರ್
ಘಟನೆ ನಡೆದ ವೇಳೆ ನಾನು ಸ್ಥಳದಲ್ಲಿ ಇರಲಿಲ್ಲ. ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಕಾರ್ಯಕ್ರಮದ ಮಹತ್ವನ್ನು ಕುಗ್ಗಿಸುವ ಉದ್ದೇಶದಿಂದ ಕೆಲವರು ಸುಮ್ಮನೆ ಆರೋಪಿಸುತ್ತಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮಕ್ಕೆ ಮುಂದಾಗುತ್ತೇನೆ
-ಶಾಸಕ ಮುನಿರತ್ನ, ಶಾಸಕ (ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ್ದು)