Advertisement
ಕಾರ್ಪೊರೇಟ್ ತೆರಿಗೆ ಏನು? ಎಷ್ಟು? ಒಂದು ಕಂಪನಿಯ ಒಟ್ಟೂ ಲಾಭದ ಮೇಲೆ ಏನು ತೆರಿಗೆ ಅನ್ವಯಿಸುತ್ತದೆಯೋ ಅದನ್ನು ಕಾರ್ಪೊರೇಟ್ ತೆರಿಗೆ ಎನ್ನುತ್ತಾರೆ. ಉದಾಹರಣೆಗೆ, ಒಂದು ಕಂಪನಿ ಒಂದು ಕೋಟಿ ರೂಪಾಯಿ ಲಾಭ ಮಾಡಿದರೆ ತೆರಿಗೆ, ಮೇಲೆ¤ರಿಗೆ, ಎಜ್ಯುಕೇಷನ್ ಸೆಸ್ ಎಲ್ಲ ಸೇರಿ 35.41 ಲಕ್ಷ ರೂಪಾಯಿ ತೆರಿಗೆ ಕೊಡಬೇಕಿತ್ತು. ಈಗ ಅದನ್ನು ಹತ್ತು ಪ್ರತಿಶತ ಕಡಿಮೆ ಮಾಡಿ 25.41 ಲಕ್ಷಕ್ಕೆ ಇಳಿಸಿದ್ದಾರೆ. ಇಷ್ಟು ಸರಳವಾಗಿಲ್ಲ ಲೆಕ್ಕಾಚಾರ. ಅದರಲ್ಲಿ ಹಲವು ಪದರಗಳಿವೆ. ತೆರಿಗೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ. ಪ್ರತಿ ವರ್ಷ ಕಂಪನಿ ಗಳಿಸುವ ಲಾಭಕ್ಕೆ ಅನುಸಾರವಾಗಿ, ದೇಶಿಯ ಹಾಗೂ ಅಥವಾ ವಿದೇಶದ ಕಂಪನಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಕಾರ್ಪೊರೇಟ್ ತೆರಿಗೆಯ ವಿನಾಯತಿಯು ನಮ್ಮ ದೇಶದ ಬೊಕ್ಕಸದ ಸುಮಾರು 1.45 ಲಕ್ಷ ಕೋಟಿ ಹಣವನ್ನು ಕಡಿಮೆ ಮಾಡಲಿದೆ.
ಇಂದು ಸಾಮಾನ್ಯರು ಕೂಡ ಮ್ಯೂಚುಯಲ್ ಫಂಡ್, ಎಸ್‌ಐಪಿ ಅಂತ ತಾವು ಗಳಿಸಿದ ಆದಾಯದಲ್ಲಿ ಸ್ವಲ್ಪ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುತ್ತಾರೆ. ಒಬ್ಬರು 4-5 ಸಾವಿರ, ಇನ್ನೊಬ್ಬರು 10-15 ಸಾವಿರ ಹೀಗೆ, ಅವರವರ ದೈನಂದಿನ ಬದುಕಿನ ಖರ್ಚಿನಲ್ಲಿ ಉಳಿಸಿದ ಹಣ ಅದು. ಕಳೆದ ಎರಡು ವರ್ಷಗಳಲ್ಲಿ ಇಂತಹ ಸುಮಾರು ಮೂರು ಲಕ್ಷ ಕೋಟಿ ಹಣ ಮಾರುಕಟ್ಟೆಯಲ್ಲಿ ಹೂಡಿಕೆಯಾಗಿದೆ. ದಿನವೂ ಷೇರು ಮಾರುಕಟ್ಟೆ ಕುಸಿಯುತ್ತಿದ್ದರೆ, ಎಕನಾಮಿ ದುರ್ಬಲವಾಗುತ್ತಿದ್ದರೆ ನಷ್ಟ ಯಾರಿಗೆ? ಸಾಮಾನ್ಯ ಜನರಿಗೆ ತಾನೇ? ಕಳೆದ ಎರಡು ವರ್ಷಗಳಲ್ಲಿ ಸಾಮಾನ್ಯ ಜನರ ಹೂಡಿಕೆ 3 ಲಕ್ಷ ಕೋಟಿ. ಇದಕ್ಕೆ ಹೋಲಿಸಿದರೆ ವಿದೇಶಿ ಬಂಡವಾಳ, ದೊಡ್ಡ ದೊಡ್ಡ ಹೂಡಿಕೆದಾರರಿಂದ ಬಂದ ಹಣ ಕೇವಲ 20,000 ಕೋಟಿ ಮಾತ್ರ. ಇಂಥ ಸಂದರ್ಭದಲ್ಲಿ, ಹಣಕಾಸು ಸಚಿವರು ತಂದ ತೆರಿಗೆ ವಿನಾಯಿತಿ ಸಾಮಾನ್ಯರಲ್ಲಿ ವಿಶ್ವಾಸ ಹೆಚ್ಚಿಸುತ್ತದೆ, ಅವರು ಹೂಡಿದ ಹಣಕ್ಕೆ ಡಿವಿಡೆಂಡ್ ಮೂಲಕ, ಷೇರಿನ ಬೆಲೆ ಏರುವುದರ ಮೂಲಕ ಲಾಭ ಸಿಗುತ್ತದೆ. – ವಿಕ್ರಮ್ ಜೋಶಿ