Advertisement

ಕೆಎಫ್‌ಡಿ ನಿಯಂತ್ರಣಕ್ಕೆ ಕೊರೊನಾ ಲಸಿಕೆ ಅಡ್ಡಿ

04:30 PM Dec 02, 2021 | Vishnudas Patil |

ಶಿವಮೊಗ್ಗ: ಮಲೆನಾಡನ್ನೇ ತಲ್ಲಣಗೊಳಿಸುವ ಕೆಎಫ್‌ಡಿ ವೈರಸ್‌ ಕಡಿವಾಣಕ್ಕೆ ಈಗ ಕೊರೊನಾ ವ್ಯಾಕ್ಸಿನೇಷನ್‌ ಅಡ್ಡಿಯಾಗಿದೆ. ಕೋವಿಡ್‌ ಲಸಿಕೆ ಪಡೆದವರು ಮಂಗನಕಾಯಿಲೆ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು ಲಸಿಕಾಕರಣ ಗುರಿ ತಲುಪುತ್ತಿಲ್ಲ.

Advertisement

ಸಾಮಾನ್ಯವಾಗಿ ಡಿಸೆಂ ಬರ್‌ನಿಂದ ಜೂನ್‌ವರೆಗೆ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌) ಅಥವಾ ಮಂಗನ ಕಾಯಿಲೆ ಇರುತ್ತದೆ. 2019ರಲ್ಲಿ ಕೆಎಫ್‌ಡಿ ಪ್ರಕರಣಗಳು ಉಲ½ಣಗೊಂಡು ಅಪಾರ ಸಾವು- ನೋವು ಸಂಭವಿಸಿದ್ದವು. ನಂತರ ಹಲವು ಉಪಕ್ರಮಗಳು ವೈರಸ್‌ ಕಡಿವಾಣಕ್ಕೆ ಕಾರಣವಾಗಿತ್ತು. ಅದರಲ್ಲಿ ವ್ಯಾಕ್ಸಿನೇಷನ್‌ ಕೂಡ ಒಂದು. ಕೆಎಫ್‌ಡಿ ಬಾಧಿತ ಗ್ರಾಮಗಳಲ್ಲಿ ಮೊದಲಿನಿಂದಲೂ ಲಸಿಕೆ ನೀಡಲಾಗುತ್ತಿದೆ. ಎರಡು ಡೋಸ್‌ ಲಸಿಕೆ ಹಾಗೂ ಒಂದು ಬೂಸ್ಟರ್‌ ಡೋಸ್‌ ಪಡೆದ ವ್ಯಕ್ತಿಗಳು ಕೆಎಫ್‌ಡಿ ಸೋಂಕಿಗೆ ಒಳಗಾಗುತ್ತಿರಲಿಲ್ಲ. ಮೊದಲು ಸಾಕಷ್ಟು ಹಿಂಜರಿಕೆ ಕಾರಣ ಗುರಿ ಮುಟ್ಟಲು ಆಗುತ್ತಿರಲಿಲ್ಲ. 2019ರ ಭೀಕರತೆ ನಂತರ ಜನರು ಲಸಿಕೆ ಪಡೆಯಲು ಮುಂದಾಗಿದ್ದರು. ಆದರೆ ಈ ವರ್ಷ ಕೋವಿಡ್‌ ಲಸಿಕೆ ನೀಡುತ್ತಿರುವ ಪರಿಣಾಮ ಜನರು ಕೆಎಫ್ಡಿ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ.

ಕೋವಿಡ್‌ ಲಸಿಕೆ ಪಡೆದವರಲ್ಲಿ ಹಲವು ದಿನಗಳವರೆಗೆ ಮೈ ಕೈ ನೋವು ಕಾಣಿಸಿಕೊಳ್ಳುತ್ತಿದೆ. ಕೋವಿಡ್‌ ಲಸಿಕೆ ಪಡೆದ ಮೇಲೆ ಎರಡನೇ ಡೋಸ್‌ ಪಡೆಯಲೇಬೇಕು. ಇತ್ತ ಕೆಎಫ್‌ಡಿ ಲಸಿಕೆ ಕೂಡ ತಿಂಗಳ ಅಂತರದಲ್ಲಿ ಮೂರು ಬಾರಿ ಪಡೆಯಬೇಕು. ಕೆಎಫ್‌ಡಿ ಲಸಿಕೆ ಪಡೆದವರಲ್ಲೂ ಉರಿ ಕಾಣಿಸಿಕೊಳ್ಳುವುದು ಸಾಮಾನ್ಯ. ಸರಕಾರ ಕೋವಿಡ್‌ ಲಸಿಕೆ ಪಡೆಯಲು ಜಾಗೃತಿ ಮೂಡಿಸುತ್ತಿದ್ದು ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ಲಸಿಕಾಕರಣ ಕಾರ್ಯಕ್ರಮ ನಡೆಯುತ್ತಿರುವುದರಿಂದ ಕೆಎಫ್‌ಡಿ ಲಸಿಕೆ ಪಡೆಯಬೇಕಿದ್ದ ಜನರು ಕೋವಿಡ್‌ ಲಸಿಕೆ ಪಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ಕೆಎಫ್‌ಡಿ ಲಸಿಕೆ ಗುರಿ ಮುಟ್ಟುತ್ತಿಲ್ಲ. ಕೋವಿಡ್‌ ಲಸಿಕೆ ಪಡೆದ 14 ದಿನಗಳ ನಂತರ ಕೆಎಫ್‌ಡಿ ಲಸಿಕೆ ಹಾಕಿಸಿಕೊಳ್ಳಬಹುದು. ಯಾವುದೇ ಆರೋಗ್ಯ ತೊಂದರೆ ಕಾಣಿಸಿಕೊಳ್ಳಲ್ಲ ಎಂದು ತಜ್ಞರು ಮನವರಿಕೆ ಮಾಡುತ್ತಿದ್ದರೂ ಜನರಿಂದ ಸ್ಪಂದನೆ ವ್ಯಕ್ತವಾಗುತ್ತಿಲ್ಲ. ಡಿಸೆಂಬರ್‌ದೊಳಗೆ ಗುರಿ ತಲುಪಿದರೆ ಮುಂಬರುವ ದಿನಗಳಲ್ಲಿ ಪ್ರತಿಕಾಯ ವೃದ್ಧಿಯಾಗುತ್ತದೆ. ಡಿಸೆಂಬರ್‌ದೊಳಗೆ ಗುರಿ ತಲುಪಲು ಅರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಪ್ರಕರಣ ಕುಸಿತ

2018-19ನೇ ಸಾಲಿನಲ್ಲಿ 445 ಮಂದಿಗೆ ಪಾಸಿಟಿವ್‌ ಬಂದಿದ್ದು 15 ಮಂದಿ ಮೃತಪಟ್ಟಿದ್ದರು. 2019-20ರಲ್ಲಿ 255 ಮಂದಿಗೆ ಪಾಸಿಟಿವ್‌ ಬಂದಿದ್ದು ಐವರು ಮೃತಪಟ್ಟಿದ್ದರು. 2020-21ರಲ್ಲಿ 25 ಮಂದಿಗೆ ಪಾಸಿಟಿವ್‌ ಬಂದಿದ್ದು ಶೂನ್ಯ ಮರಣ ದಾಖಲಾಗಿತ್ತು. ಜನರಲ್ಲಿ ಲಸಿಕೆ ಹಾಕಿಸಿಕೊಂಡರೆ ಉತ್ತಮ ಎಂಬ ಭಾವನೆ ಮೂಡುತ್ತಿಲ್ಲ. ಈವರೆಗಿನ ಕೆಎಫ್‌ಡಿ ಇತಿಹಾಸದಲ್ಲಿ 2012ರಿಂದ 2015ರವರೆಗೆ ಯಾವುದೇ ಮರಣ ಕಂಡು ಬಂದಿಲ್ಲ. ನಂತರದ ದಿನಗಳಲ್ಲಿ ವೈರಸ್‌ ಉಲ್ಬಣಗೊಂಡಿದೆ. ಹಾಗಾಗಿ ಜನರು ಉದಾಸೀನ ಮಾಡದೆ ಲಸಿಕೆ ಹಾಕಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು

Advertisement

ಲಸಿಕೆ ಪ್ರಮಾಣ ಇಳಿಕೆ
2019ರ ಹಿಂದಿನ ವರ್ಷಗಳಲ್ಲಿ ಶೇ.50 ಗುರಿ ತಲುಪುವುದು ಕಷ್ಟವಾಗಿತ್ತು. 2019ರಲ್ಲಿ ಕಂಡು ಬಂದ ಭೀಕರತೆಗೆ ಜನರು ಹೆದರಿ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದರು. ಕಳೆದ ಎರಡು ವರ್ಷಗಳಲ್ಲಿ ಶೇ.70ಕ್ಕಿಂತ ಹೆಚ್ಚು ವ್ಯಾಕ್ಸಿನೇಷನ್‌ ಅಗಿದೆ. 11 ಜಿಲ್ಲೆಗಳಲ್ಲಿ ಮೂರು ಲಸಿಕೆ ನೀಡಲಾಗಿದೆ. ಈ ಬಾರಿ ನವೆಂಬರ್‌ ಮುಗಿಯುತ್ತ ಬಂದರೂ ಲಸಿಕೆ ಗುರಿ ಶೇ.50ರಷ್ಟು ತಲುಪಿಲ್ಲ

ಕೋವಿಡ್‌ ಲಸಿಕೆ ನೀಡುತ್ತಿರುವ ಕಾರಣ ಕೆಎಫ್‌ಡಿ ಲಸಿಕೆ ನೀಡಲು ತೊಂದರೆಯಾಗುತ್ತಿದೆ. ಜನರು ಎರಡೆರಡು ಲಸಿಕೆ ಪಡೆಯಲು ನಿರಾಕರಿಸುತ್ತಿದ್ದಾರೆ. ಕೊರೊನಾ ಲಸಿಕೆ ಪಡೆದ 14 ದಿನಗಳ ನಂತರ ಕೆಎಫ್‌ಡಿ ಲಸಿಕೆ ಪಡೆದರೆ ಯಾವುದೇ ತೊಂದರೆ ಆಗಲ್ಲ. ಈ ಬಗ್ಗೆ ಜನರು ಗಾಬರಿಗೊಳ್ಳುವುದು ಬೇಡ. ಕೆಎಫ್‌ಡಿ ಲಸಿಕೆ ಕೆಎಫ್‌ಡಿ ವೈರಸ್‌ನ ನಿಷ್ಕ್ರಿಯ ಭಾಗಗಳನ್ನು ಬಳಸಿ ಮಾಡಲಾಗಿರುತ್ತದೆ. ಅದಕ್ಕೂ ಕೋವಿಡ್‌ ಲಸಿಕೆಗೂ ಸಂಬಂಧವಿಲ್ಲ. ಕೆಎಫ್‌ಡಿಗೂ ಕೋವಿಡ್‌ ಲಸಿಕೆ ಪಡೆದರೆ ಸಾಕು ಎಂಬ ಮನೋಭಾವ ಬೇಡ.
ಡಾ|ರಘುನಂದನ್‌, ಉಪ ನಿರ್ದೇಶಕ ವಿಡಿಎಲ್‌ ಲ್ಯಾಬ್‌

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next