Advertisement
ಸೂರ್ಯಕಾಂತ್ ನಟ್ವಾನಿ (ಸೂರಿ) ಕೋವಿಡ್ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. 88 ವರ್ಷದ ಇವರಿಂದ ಸೋಂಕು ಹರಡಿರಬಹುದೆಂದು ಮನೆಯವರನ್ನೆಲ್ಲಾ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಲಂಡನ್‌ನ ಹೊರವಲಯದಲ್ಲಿರುವ ವಾರ್ಟೋರ್ಡ್ ಜನರಲ್ ಆಸ್ಪತ್ರೆಯಲ್ಲಿದ್ದ ಸೂರಿ ಅವರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಅವರಿಗೆ ಇಷ್ಟವಿರಲಿಲ್ಲ.
ಮಾರ್ಚ್ 25ರಂದು ತಂದೆ ಸೂರಿ ಅವರ ಆರೋಗ್ಯ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ಶ್ವಾಸಕೋಶ ತುಂಬಾ ಸುಸ್ತಾಗಿರುವಂತೆ ಕಂಡುಬಂತು. ದೇಹದ ತಾಪಮಾನವೂ ಹೆಚ್ಚುತ್ತಿತ್ತು. ಕೆಮ್ಮು ಬಿಡಲಿಲ್ಲ. ಬಳಿಕ ಕೋವಿಡ್ -19 ಇರುವುದು ಖಾತ್ರಿಯಾದ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ರಾಜ್ ಅವರನ್ನು ಕರೆದು ತಂದೆಯ ಆರೋಗ್ಯ ತೀವ್ರ ಹದಗೆಟ್ಟಿದೆ ಇಳಿವಯಸ್ಸಿನಲ್ಲಿ ಬದುಕುಳಿಯುವ ಸಾಧ್ಯತೆ ಕಡಿಮೆ. ಮನೆಗೆ ಕರೆದುಕೊಂಡು ಹೋಗಿ ಎಂದಿದ್ದರು. ಕೂಡಲೇ ರಾಜ್ ತಂದೆಯವರನ್ನು ಮನೆಗೆ ಕರೆ ತಂದರು. ಕೋವಿಡ್ ಸೋಂಕಿತರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಬೇಕು. ಆದರೆ ಇಳಿವಯಸ್ಸಿನವರಿಗೆ ವೆಂಟಿಲೇಟರ್ ಈ ಸಮಯದಲ್ಲಿ ಪ್ರಯೋಜನವಾಗದು ಎಂದಿದ್ದರು. ಎಲ್ಲವನ್ನೂ ತಲೆಯಲ್ಲಿಟ್ಟುಕೊಂಡು ತಂದೆಯನ್ನು ಆ್ಯಂಬುಲೆನ್ಸ್ ಲಭ್ಯವಿಲ್ಲದ ಕಾರಣ ಸ್ಥಳೀಯ ಟ್ಯಾಕ್ಸಿಯಲ್ಲಿ ಮನೆಗೆ ಕರೆ ತಂದರು.
Related Articles
Advertisement
ಇಳಿ ವಯಸ್ಸಿನ ತಂದೆಗೆ ಕೋವಿಡ್ ತಗುಲಿದ್ದು ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ರಾಜ್‌ಗೆ ತಿಳಿದಿತ್ತು. ಆದರೂ ನೆಗೆಟಿವ್ ಆಗಿ ಯೋಚಿಸಲಿಲ್ಲ ; ಪ್ರಯತ್ನ ಮುಂದುವರಿಸಿದರು.
ತಂದೆಯ ಆಸೆಯುನ್ನು ಮನ್ನಿಸಿ ರಾಜ್ ಮಲಗಲು ಪ್ರತ್ಯೇಕ ಕೋಣೆಯನ್ನು ಆಸ್ಪತ್ರೆಯ ಕೊಠಡಿಯನ್ನಾಗಿ ಮಾಡಿದ್ದರು. ಆಸ್ಪತ್ರೆಯ ಸಲಹೆಯ ಜತೆಗೆ ಹೆಚ್ಚಿನ ಕಾಳಜಿಯೊಂದಿಗೆ ತಂದೆಯನ್ನು ನೋಡಿಕೊಂಡರು. ತಂದೆಯ ತಾಪಮಾನ, ರಕ್ತದೊತ್ತಡ ಮತ್ತು ಆಮ್ಲಜನಕದ ಸ್ಯಾಚುರೇಶನ್ ಮೊದಲಾದ ಮಾಹಿತಿಯನ್ನು ಗೂಗಲ್ ಸ್ಪ್ರೆಡ್‌ಶೀಟ್‌ನಲ್ಲಿ ದಾಖಲಿಸಿದರು. ತಂದೆಯ ಕೊಠಡಿಯಲ್ಲೇ ಇರುವ ಬದಲು ಬೇಬಿ ಮಾನಿಟರ್ ಅಪ್ಲಿಕೇಶನ್ ಮೂಲಕ ತಂದೆಯ ಚಟುವಟಿಕೆಯನ್ನು ಟ್ಯಾಬ್ ಮೂಲಕ ಗಮನಿಸುತ್ತಿದ್ದರು. ಅಗತ್ಯ ಬಿದ್ದರೆ ಮಾತ್ರ ಒಳಗೆ ಹೋಗುತ್ತಿದ್ದರು. ಎಲ್ಲಾ ಚಿಕಿತ್ಸೆಯನ್ನು ಮನೆಯಿಂದಲೇ ನೀಡಲಾಗುತ್ತಿತ್ತು. ತಂದೆಯ ಆರೋಗ್ಯದ ಕುರಿತು ಪರೀಕ್ಷಿಸಲು ಡಾ| ಭರತ್ ಥಾಕರ್ ಅವರ ಸಹಾಯ ಕೋರಲಾಯಿತು.
ವೈದ್ಯರು ಗೂಗಲ್ ಸ್ಪ್ರೆಡ್ ಶೀಟ್ ಅನ್ನು ಪರಿಶೀಲಿಸಿದರು. ದಿನಕ್ಕೆ ಕೆಲವು ತಾಸು ಸೂರಿ ಅವರನ್ನು ಹೊಟ್ಟೆಯ ಮೇಲೆ ಮಲಗಲು (ಕವುಚಿ) ಸಲಹೆ ನೀಡಿದರು. ಕೋವಿಡ್ ವೈರಸ್ ರೋಗಿಗಳನ್ನು ಹೊಟ್ಟೆಯ ಮೇಲೆ ಮಲಗಲು ಸೂಚಿಸುವುದರಿಂದ ಶ್ವಾಸಕೋಶಕ್ಕೆ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಮಗ ಮಾತ್ರ ತುಂಬಾ ಕಾಳಜಿಯಿಂದ ಚಿಕಿತ್ಸೆಯನ್ನು ಮುಂದುವರಿಸಿದ್ದರು. ಕೊನೆಗೂ ಕೆಲವೇ ದಿನಗಳಲ್ಲಿ ಚಿಕಿತ್ಸೆಗೆ ಸೂರಿಯವರು ಸ್ಪಂದಿಸತೊಡಗಿದರು. ನಿಧಾನವಾಗಿ ಎಲ್ಲವೂ ತಹಬದಿಗೆ ಬರತೊಡಗಿತು. ಮಗನ ಪರಿಶ್ರಮದ ಸಹಾಯದಿಂದ ಸೂರಿ ಅವರು ಕ್ರಮೇಣ ಚೇತರಿಸಿಕೊಳ್ಳಲು ಪ್ರಾರಂಭಿಸಿದರು. ರುಚಿಯನ್ನು ಗುರುತಿಸಲು ಪ್ರಾರಂಭಿಸಿದರು. ಪಿಜ್ಜಾ ಮತ್ತು ಚಿಪ್ಸ್ ತಿನ್ನಲು ಕೇಳಿದರು. ವಾರಗಳ ಬಳಿಕ ಅವರು ಉದ್ಯಾನಕ್ಕೆ ಜಿಮ್ಮರ್ ಫ್ರೆಮ್‌ನ ಸಹಾಯದಿಂದ ತೆರಳಿದರು. ಎಲ್ಲರ ಬದುಕು ಬದಲಿಸಿಬಿಟ್ಟಿತು.
ಆಪ್ಪನಿಗೆ ಮಗ ಮತ್ತಷ್ಟು ಪ್ರೀತಿ ಪಾತ್ರನಾದ ; ಮಗನಿಗೆ ಅಪ್ಪ ಇನ್ನಷ್ಟು ಅಮೂಲ್ಯವೆನಿಸಿದರು. ಕುಟುಂಬಕ್ಕೆ ಒಬ್ಬ ಒಳ್ಳೆಯ ಸ್ಟ್ರಾಟೆಜಿಸ್ಟ್ ಸಿಕ್ಕಿದ. ನಿಜಕ್ಕೂ ಬದುಕು ಬಹಳ ಸುಂದರವೆನಿಸತೊಡಗಿತು.
ಹಾಗೆ ನೋಡಿದರೆ ಸೂರಿಯವರದ್ದು ಅದೃಷ್ಟವೂ ಎನ್ನಬೇಕು. ಬದುಕು ಮತ್ತೆ ಸಿಕ್ಕಿದ್ದು ಹಾಗೂ ರಾಜ್‌ನಂಥ ಮಗನು ಸಿಕ್ಕಿದ್ದು ಎರಡೂ ಸಹ. ಬ್ರಿಟನ್‌ನಲ್ಲಿ ಸಾವಿರಾರು ಮಂದಿ ಸೂಕ್ತ ಚಿಕಿತ್ಸೆ ಸಿಕ್ಕಿಯೂ ಸಾವಿಗೀಡಾಗಿದ್ದಾರೆ. ಅಂಥದ್ದರ ಮಧ್ಯೆ ಸೂರಿಯವರು ಬದುಕು ಗೆದ್ದು ಬಂದದ್ದು ಪವಾಡದಂತೆಯೇ ತೋರುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.