ನವದೆಹಲಿ: ಕೋವಿಡ್ 19 ವೈರಸ್ ದೇಶಾದ್ಯಂತ 430 ಜಿಲ್ಲೆಗಳಲ್ಲಿ ಹರಡಿದ್ದು, ಏಪ್ರಿಲ್ 2ರಂದು 211 ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದ ಸೋಂಕು ಇದೀಗ ಏರಿಕೆಯಾಗಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ದೇಶದ ಪ್ರಮುಖ ಆರು ನಗರಗಳಲ್ಲಿ ಈವರೆಗೆ 500ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, ದೇಶದ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಆರು ನಗರಗಳಲ್ಲಿ ಶೇ.45ರಷ್ಟು ಪತ್ತೆಯಾಗಿದೆ ಎಂದು ವಿವರಿಸಿದೆ.
ಮುಂಬೈ ನಂಬರ್ ಒನ್ ಸ್ಥಾನದಲ್ಲಿದ್ದು 3000ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದೆ, ದಿಲ್ಲಿಯಲ್ಲಿ 2,081 ಪ್ರಕರಣ, ಗುಜರಾತ್ ನ ಅಹ್ಮದಾಬಾದ್ ನಲ್ಲಿ 1,298 ಪ್ರಕರಣ, ಮಧ್ಯಪ್ರದೇಶದ ಇಂದೋರ್ ನಲ್ಲಿ 915, ಪುಣೆಯಲ್ಲಿ 660 ಹಾಗೂ ಜೈಪುರದಲ್ಲಿ 537 ಪ್ರಕರಣಗಳು ಪತ್ತೆಯಾಗಿದೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ದೃಢಪಟ್ಟಿರುವ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಸರ್ಕಾರದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ ಮಾರ್ಚ್ 25ರಿಂದ ಆರಂಭಗೊಂಡಿರುವ ಲಾಕ್ ಡೌನ್ ನಿಂದಾಗಿ ವೇಗವಾಗಿ ಹಬ್ಬುತ್ತಿದ್ದ ಸೋಂಕು ಕಡಿಮೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.
ಲಾಕ್ ಡೌನ್ ಗಿಂತ ಮೊದಲು ಸೋಂಕು ಹರಡಲು 3.4 ದಿನಗಳು ಬೇಕಾಗಿದ್ದು, ಇದೀಗ ಸೋಂಕು ಹರಡಲು 7.5 ದಿನಕ್ಕೆ ಏರಿಕೆಯಾಗಿದೆ ವರದಿ ತಿಳಿಸಿದೆ. ನಿಜಕ್ಕೂ ಇದೊಂದು ಉತ್ತಮ ಫಲಿತಾಂಶವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅವರ್ವಾಲ್ ತಿಳಿಸಿದ್ದಾರೆ.