ಬೀಜಿಂಗ್: ಕೊರೊನಾ ವೈರಸ್ ನಿಂದ ಚೀನಾ ಕಂಗೆಟ್ಟು ಹೋಗಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಏತನ್ಮಧ್ಯೆ ಕೊರೊನಾ ವೈರಸ್ ಇದೀಗ ಜೈಲುಗಳಿಗೆ ದಾಳಿ ಇಟ್ಟಿದ್ದು ಕೈದಿಗಳಲ್ಲಿ ಭೀತಿ ಹುಟ್ಟಿಸಿದೆ ಎಂದು ವರದಿ ತಿಳಿಸಿದೆ.
ಕೊರೊನಾ ವೈರಸ್ ಗೆ ಈಗಾಗಲೇ 2,236 ಜನರು ಸಾವನ್ನಪ್ಪಿದ್ದಾರೆ. ಚೀನಾದ ಕ್ಸಿನ್ ಜಿಯಾಂಗ್ ಉಯಿಗುರ್ ಅಟೋನೋಮಸ್ ಪ್ರದೇಶ(ಎಕ್ಸ್ ಯು ಎಆರ್)ದಲ್ಲಿರುವ ಜೈಲುಗಳಲ್ಲಿ ಅಪಾರ ಸಂಖ್ಯೆಯಲ್ಲಿ ಕೈದಿಗಳಿದ್ದು ದೊಡ್ಡ ಚಿಂತೆಯ ವಿಷಯವಾಗಿದೆ ಎಂದು ವರದಿ ವಿವರಿಸಿದೆ.
ಸರ್ಕಾರದ ಮಾಹಿತಿ ಪ್ರಕಾರ, ಸುಮಾರು 450 ಕೈದಿಗಳಿಗೆ ಹಾಗೂ ಪೊಲೀಸರಿಗೆ ಕೊರೊನಾ ವೈರಸ್ ತಗುಲಿದೆ. ಹುಬೈ ಪ್ರಾಂತ್ಯದ ಜೈಲು ಸೇರಿದಂತೆ ಹಲವು ಜೈಲುಗಳಲ್ಲಿ ಕೊರೊನಾ ಭೀತಿ ಅಧಿಕವಾಗಿದೆ ಎಂದು ಹೇಳಿದೆ.
ನ್ಯಾಷನಲ್ ಹೆಲ್ತ್ ಕಮಿಷನ್ ಅಧಿಕಾರಿಗಳ ವರದಿ ಪ್ರಕಾರ, ಹುಬೈ ಪ್ರದೇಶದಲ್ಲಿ 220 ಕೋವಿಡ್ -19 ಪ್ರಕರಣಗಳು ದಾಖಲಾಗಿದೆ. ದೇಶಾದ್ಯಂತ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದವರ ಅಂಕಿಅಂಶ ತೆಗೆದುಕೊಳ್ಳಲಾಗಿದೆ. ಆದರೆ ಜೈಲುಗಳಲ್ಲಿ ಕೊರೊನಾ ವೈರಸ್ ಗೆ ತುತ್ತಾದವರು ಎಷ್ಟು ಮಂದಿ ಎಂಬ ಅಂಕಿ ಅಂಶ ಕಲೆಹಾಕಿಲ್ಲ ಎಂದು ತಿಳಿಸಿದೆ.
ಗುರುವಾರ ರಾತ್ರಿ 120 ಮಂದಿ ಸಾವನ್ನಪ್ಪಿದ್ದು ಇದರೊಂದಿಗೆ ಚೀನಾದಲ್ಲಿ ಕೊರೊನಾ ವೈರಸ್ ಗೆ ಸಾವನ್ನಪ್ಪಿದ್ದವರ ಸಂಖ್ಯೆ 2,239ಕ್ಕೆ ಏರಿಕೆಯಾಗಿದೆ. ಸುಮಾರು 75 ಸಾವಿರಕ್ಕೂ ಅಧಿಕ ಜನರು ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ ಎಂದು ವರದಿ ಹೇಳಿದೆ.