ಮುಂಬೈ: ಮಾರಣಾಂತಿಕ ಕೋವಿಡ್ 19 ವೈರಸ್ ಪೀಡಿತ ವ್ಯಕ್ತಿಯೊಬ್ಬರು ಮುಂಬೈನ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಾಪತ್ತೆಯಾಗಿರುವ ಘಟನೆ ನಡೆದಿದೆ. ಆದರೆ ರೋಗಿಯ ಕುರಿತು ಮನೆಯವರಿಗೆ ಸಿಕ್ಕ ಮಾಹಿತಿ ಮಾತ್ರ ಆಘಾತಕಾರಿಯಾಗಿತ್ತು!
ಐಸಿಯುನಿಂದ ನಾಪತ್ತೆಯಾಗಿದ್ದ ರೋಗಿ ಏನಾದ್ರು?
ಮೇ 14ರಂದು ಮುಂಬೈನ ಕೆಇಎಂ ಆಸ್ಪತ್ರೆಗೆ 67 ವರ್ಷದ ವ್ಯಕ್ತಿಯನ್ನು ದಾಖಲಿಸಲಾಗಿತ್ತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ನಂತರ ಪರೀಕ್ಷೆಯಲ್ಲಿ ಕೋವಿಡ್ 19 ವೈರಸ್ ಇದ್ದಿರುವುದು ಪತ್ತೆಯಾದ ನಂತರ ವ್ಯಕ್ತಿಯನ್ನು ಐಸಿಯುಗೆ ಸ್ಥಳಾಂತರಿಸಿದ್ದರು. ಆದರೆ ಮೇ 19ರಿಂದ ರೋಗಿ ನಾಪತ್ತೆಯಾಗಿದ್ದರು. ಅಷ್ಟೇ ಅಲ್ಲ ಆಸ್ಪತ್ರೆಯಲ್ಲಿದ್ದ ಯಾರೊಬ್ಬರಿಗೂ ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ತಿಳಿಸಿರುವುದಾಗಿ ಆರೋಪಿಸಿದ್ದಾರೆ.
ಮೇ 20ರಂದು ನಮಗೆ ಮೊಬೈಲ್ ಕರೆಯೊಂದು ಬಂದಿತ್ತು, ಆದರೆ ಅದನ್ನು ಸ್ವೀಕರಿಸಲು ಆಗಿಲ್ಲವಾಗಿತ್ತು. ನಂತರ ನಾವೇ ಆ ನಂಬರ್ ಗೆ ಕರೆ ಮಾಡಿದಾಗ, ನಮಗೆ ರೋಗಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಒಂದು ವೇಳೆ ನೀವೇನಾದರೂ ಸ್ಥಳಾಂತರಿಸಿದ್ದೀರಾ ಎಂದು ಪ್ರಶ್ನಿಸಿದ್ದರು. ನಾನು ಹೇಳಿದೆ, ನಮಗೆ ಈ ಬಗ್ಗೆ ಗೊತ್ತೆ ಇಲ್ಲ. ನಾವು ಕೂಡಾ ಕ್ವಾರಂಟೈನ್ ನಲ್ಲಿ ಇದ್ದೇವೆ ಎಂದು ತಿಳಿಸಿದ ಮೇಲೆ ಹುಡುಕಾಟ ಆರಂಭಿಸಿದ್ದರು. ನಾಲ್ಕೈದು ದಿನ ಕಳೆದರೂ ಕೂಡಾ ರೋಗಿ ಎಲ್ಲಿದ್ದಾರೆ ಎಂಬುದು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಸಂಬಂಧಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಐದು ದಿನಗಳ ಬಳಿಕ ರೋಗಿ ನಾಪತ್ತೆಯಾಗಿದ್ದಾರೆಂದು ದೂರು ದಾಖಲಿಸಿದ್ದು, ಮುಂಬೈ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದರು. ಅಂತೂ ನಾಪತ್ತೆಯಾಗಿದ್ದ ವ್ಯಕ್ತಿ ಏನಾಗಿದ್ದ ಎಂಬುದನ್ನು ಮುಂಬೈ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಕೋವಿಡ್ 19 ವ್ಯಕ್ತಿ ಸಾವನ್ನಪ್ಪಿದ್ದು, ಕುಟುಂಬದ ಸದಸ್ಯರಿಗೆ ಮಾಹಿತಿ ನೀಡದೆ ಮಹಾನಗರ ಪಾಲಿಕೆ ಅಧಿಕಾರಿಗಳು ಶವಸಂಸ್ಕಾರ ನಡೆಸಿಬಿಟ್ಟಿದ್ದರು ಎಂದು ವರದಿ ತಿಳಿಸಿದೆ.
ಕೋವಿಡ್ 19 ವ್ಯಕ್ತಿಯ ಕುಟುಂಬದ ಸದಸ್ಯರನ್ನು ಪತ್ತೆ ಹಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಶವವನ್ನು ಪೊಲೀಸ್ ಗೆ ಹಸ್ತಾಂತರಿಸಿದ್ದರು. ಇದೊಂದು ಅನಾಥ ಶವ ಎಂದು ಹೇಳಿರುವುದಾಗಿ ವರದಿ ಹೇಳಿದೆ.