Advertisement

ಕೊರೊನಾ ಸೋಂಕು: ಶಿವಮೊಗ್ಗದಲ್ಲಿ 10 ಜನರ ಮೇಲೆ ನಿಗಾ

11:24 PM Mar 03, 2020 | Lakshmi GovindaRaj |

ಶಿವಮೊಗ್ಗ: ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಆರು ಬೆಡ್‌ಗಳ ಕೊರೊನಾ ವಾರ್ಡ್‌ ತೆರೆಯಲಾಗಿದ್ದು, ಶಂಕಿತ ಪ್ರಕರಣಗಳು ಕಂಡು ಬಂದಲ್ಲಿ ಅವರಿಗೆ ಇದೇ ವಾರ್ಡ್‌ ನಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನವರಿ ತಿಂಗಳಿನಲ್ಲಿ ನಾಲ್ಕು ವಿದ್ಯಾರ್ಥಿಗಳು ಚೀನಾದಿಂದ ಶಿವಮೊಗ್ಗಕ್ಕೆ ಬಂದಿದ್ದು, ಅವರನ್ನು ನಾಲ್ಕು ವಾರಗಳ ಕಾಲ ಆರೋಗ್ಯ ಇಲಾಖೆ ನಿಗಾದಲ್ಲಿರಿಸಿತ್ತು. ಆದರೆ, ಅವರಲ್ಲಿ ಯಾವುದೇ ಸೋಂಕು ಇಲ್ಲ ಎಂದು ಕಂಡು ಬಂದಿದೆ. ಇದಾದ ಬಳಿಕ ಫೆಬ್ರವರಿ ತಿಂಗಳಿನಲ್ಲಿ ಆರು ಮಂದಿ ಕೊರೊನಾ ಪೀಡಿತ ದೇಶಗಳಿಂದ ಶಿವಮೊಗ್ಗಕ್ಕೆ ಬಂದಿದ್ದು, ಅವರನ್ನು ಅವರ ಮನೆಯಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾದಲ್ಲಿ ಇರಿಸಿದ್ದಾರೆ.

Advertisement

ಚಿಕನ್‌ ಮೇಲೂ ವಕ್ರದೃಷ್ಟಿ!
ಮಂಡ್ಯ/ದೇವದುರ್ಗ: ಚಿಕನ್‌ ತಿಂದರೆ ಕೊರೊನಾ ತಗುಲುತ್ತದೆ ಎಂಬ ಭೀತಿಯಿಂದ ಮಾಂಸ ಮಾರಾಟದ ಮೇಲೆ ಭಾರೀ ಪ್ರಮಾಣದ ಹೊಡೆತ ಬಿದ್ದಿದೆ. ದೇವದುರ್ಗ ದಲ್ಲಿ ತಿಂಗಳ ಹಿಂದೆ ಪ್ರತಿ ಕೆಜಿ ಚಿಕನ್‌ಗೆ 180 ರೂ.ಇತ್ತು. ಕೊರೊನಾ ಭೀತಿ ಹಿನ್ನೆಲೆ ಯಲ್ಲಿ ಇದೀಗ 80ರಿಂದ 120 ರೂ.ಗೆ ಕುಸಿದಿದೆ. ಈಗ ಜನ ಚಿಕನ್‌ಗಿಂತ ಕುರಿ ಮಾಂಸ ಖರೀದಿಗೆ ಮುಂದಾಗಿದ್ದರಿಂದ ಕುರಿ ಮಾಂಸ ಕೆಜಿಗೆ 500 ರೂ. ತಲುಪಿದೆ. ಮಂಡ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಕೋಳಿ ಮಾಂಸದ ಬೆಲೆ 180 ರೂ.ನಿಂದ 110 ರೂ.ಗೆ ಇಳಿಕೆಯಾದರೆ, ಮೊಟ್ಟೆ ಕೋಳಿ ಬೆಲೆ 89 ರೂ.ಗೆ ಕುಸಿತವಾಗಿದೆ.

14 ಜನರ ತಪಾಸಣೆ
ದಾವಣಗೆರೆ: ಜಿಲ್ಲೆಯಿಂದ ವಿದೇಶ ಪ್ರವಾಸ ಕೈಗೊಂಡ ಪ್ರವಾ ಸಿಗರನ್ನು ಆರೋಗ್ಯ ಇಲಾಖೆ ನಿರ್ದೇಶನದಂತೆ ಮಂಗಳವಾರ ಚೀಗಟೇರಿ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಒಟ್ಟು 12 ದೇಶಗಳಿಗೆ ಪ್ರವಾಸ ಕೈಗೊಂಡಿದ್ದ 14 ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸ ಲಾಯಿತು. ವಿದೇಶ ಪ್ರವಾಸ ಕೈಗೊಂಡಿದ್ದ ಪ್ರವಾಸಿಗರ ಪಟ್ಟಿಯನ್ನಾಧರಿಸಿ ಅವರ ಮನೆಗಳಿಗೆ ಭೇಟಿ ನೀಡಿ, ಕೊರೊನಾ ಸೋಂಕಿನ ತಪಾಸಣೆಗೆ ಒಳಪಡಿಸಲಾಗಿದೆ. ಚಿಗಟೇರಿ ಜಿಲ್ಲಾಸ್ಪತ್ರೆ, ಬಾಪೂಜಿ ಆಸ್ಪತ್ರೆ ಮತ್ತು ಎಸ್‌ಎಸ್‌ಐಎಂ ಮತ್ತು ಆರ್‌ಸಿ ಆಸ್ಪತ್ರೆಗಳಲ್ಲಿ ತಲಾ 5 ಬೆಡ್‌ಗಳನ್ನು ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ. ಅಲ್ಲದೆ ತಜ್ಞರನ್ನು ಸಹ ನೇಮಿಸಲಾಗಿದೆ.

ಕೊರೊನಾ ಸೋಂಕಿಲ್ಲ
ಬೆಳಗಾವಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಚೀನಾ, ಮಲೇಷ್ಯಾ ಸೇರಿ ವಿವಿಧ ದೇಶಗಳಿಂದ ಎರಡು ತಿಂಗಳ ಅವಧಿಯಲ್ಲಿ ಬಂದಿರುವ ಬೆಳಗಾವಿಯ 9 ಜನರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಯಾರೊಬ್ಬರಿಗೂ ಕೊರೊನಾ ಸೋಂಕಿಲ್ಲ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ. ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುತ್ತಿದ್ದ ವಿದ್ಯಾರ್ಥಿಗಳು ನಗರಕ್ಕೆ ವಾಪಸ್ಸಾಗಿದ್ದಾರೆ. ಇವರಿಗೆ ದೆಹಲಿ, ಮುಂಬೈ, ಹೈದ್ರಾಬಾದ್‌ನಲ್ಲಿ ತಪಾಸಣೆ ನಡೆಸಲಾಗಿದ್ದು, ನೆಗೆಟಿವ್‌ ಎಂದು ವರದಿ ಬಂದಿದೆ. ಹೀಗಿದ್ದರೂ ಬೆಳ ಗಾವಿಗೆ ಬಂದ ಇವರೆಲ್ಲರನ್ನೂ ಮತ್ತೂಮ್ಮೆ ತಪಾಸಣೆ ನಡೆಸ ಲಾಗಿದ್ದು, ವೈದ್ಯಕೀಯವಾಗಿ ನಿಗಾ ಇಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಾಂತ ಮುನ್ನಾಳ ತಿಳಿಸಿದ್ದಾರೆ.

ಶಾಸಕ ಅಭಯ ಗರಂ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವಿರುದ್ಧ ಶಾಸಕ ಅಭಯ ಪಾಟೀಲ ಗರಂ ಆಗಿದ್ದಾರೆ. ಪೂರ್ವಭಾವಿಯಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ವಿದೇಶದಿಂದ ಬಂದವರ ಮೇಲೆ ನಿಗಾ ಇಡಬೇಕಾದ ಕರ್ತವ್ಯ ಆರೋಗ್ಯ ಇಲಾಖೆಯದ್ದು. ವಿಮಾನ ನಿಲ್ದಾಣದಲ್ಲಿ ವಿಶೇಷ ತಂಡ ರಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

ರಾಜ್ಯ ಪ್ರವಾಸಿ ತಾಣಗಳಲ್ಲಿ ನಿಗಾ
ಮೈಸೂರು/ಬಾಗಲಕೋಟೆ/ವಿಜಯಪುರ: ರಾಜ್ಯದ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿನ ಪ್ರವಾಸಿ ತಾಣ ವೀಕ್ಷಿಸಲು ಆಸ್ಟ್ರೇಲಿಯಾ, ರಷ್ಯಾ, ಅಮೆರಿಕ, ಬ್ರಿಟನ್‌, ಫ್ರಾನ್ಸ್‌ ಸೇರಿದಂತೆ ಹಲವು ದೇಶ ಹಾಗೂ ವಿವಿಧ ರಾಜ್ಯಗಳ ಪ್ರವಾಸಿಗರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಈ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿವೆ. ಹಂಪಿ ಸೇರಿದಂತೆ ಬಳ್ಳಾರಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರಿನಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಕೆಮ್ಮು, ನೆಗಡಿ, ಜ್ವರ ಇರುವವರು ಅರಮನೆ ವೀಕ್ಷಣೆಗೆ ಬಂದರೆ ಅಂಥವರಿಗೆ ಮಾಸ್ಕ್ ನೀಡಲಾಗುತ್ತಿದೆ.

ಕೊರೊನಾ ಸೋಂಕಿತನ ವರದಿ ಆರೋಗ್ಯ ಸಚಿವಾಲಯಕ್ಕೆ
ಬೆಂಗಳೂರು: ದುಬೈನಿಂದ ಆಗಮಿಸಿದ್ದ ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ವರದಿ ನೀಡಲಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮದ (ಬಿಐಎಎಲ್) ಕಂಪನಿ ವ್ಯವಹಾರ ವಿಭಾಗದ ಉಪಾಧ್ಯಕ್ಷ ವೆಂಕಟರಮಣ ತಿಳಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವೈರಸ್‌ ಸೋಂಕಿತ ಟೆಕ್ಕಿಯೊಬ್ಬರು ಬೆಂಗಳೂರಿನಲ್ಲಿ ಇಳಿದು ಹೈದರಾಬಾದ್‌ಗೆ ಹೋಗಿರುವ ಮಾಹಿತಿಯಿದೆ. ಈ ವ್ಯಕ್ತಿ ಬಗ್ಗೆ ಈಗಾಗಲೇ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದ್ದು, ಇಲಾಖೆ ಸೂಚನೆಯಂತೆ ತಪಾಸಣೆ ಕಾರ್ಯ ಮುಂದುವರಿಸಲಾಗಿದೆ ಎಂದರು.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿದೇಶದಿಂದ ಬರುತ್ತಿರುವ ಪ್ರಯಾಣಿಕರ ತಪಾಸಣೆಗೆ ಕೇಂದ್ರ ಸರ್ಕಾರ ಸೂಚಿಸಿದೆ. ಅದರಂತೆ ವಿಶ್ವದ ಬೇರೆ ರಾಷ್ಟ್ರಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಯಾವ ದೇಶಗಳ ಪ್ರಯಾಣಿಕರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರ ಪಟ್ಟಿ ನೀಡಿದೆ. ಹೊಸದಾಗಿ ಇರಾನ್‌, ಇಟಲಿ ಹಾಗೂ ಇಂಡೋನೇಷ್ಯಾ ಹೆಸರನ್ನು ಸೇರಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next