Advertisement

ಕೊರೊನಾ ಸೋಂಕು ಪತ್ತೆ ಬೇಡ ಅನಗತ್ಯ ಭೀತಿ, ಅಸಡ್ಡೆ

09:12 AM Mar 05, 2020 | mahesh |

ಮನೆ ಮದ್ದುಗಳಿಂದ ಕೊರೊನಾ ವೈರಸ್‌ ನಾಶವಾಗುತ್ತದೆ ಎಂಬುದಕ್ಕೆ ಯಾವ ಪುರಾವೆಗಳೂ ಇಲ್ಲ. ಈ ರೀತಿ ಮನೆಮದ್ದುಗಳಿಂದ ಅದು ಶಮನವಾಗುವುದೂ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ತಜ್ಞರು ಎಚ್ಚರಿಸುತ್ತಿದ್ದಾರೆ. ಹೀಗಾಗಿ, ವಾಟ್ಸ್‌ಆಪ್‌, ಫೇಸ್‌ಬುಕ್‌ ಹಾಗೂ ಯೂಟ್ಯೂಬ್‌ನಲ್ಲಿ ತಜ್ಞರಲ್ಲದವರು ಹೇಳುವ ಮಾತುಗಳಿಗೆ, ವದಂತಿಗಳಿಗೆ ಕಿವಿಗೊಡದಿರಿ.

Advertisement

ಕೆಲವು ತಿಂಗಳ ಹಿಂದೆ ಚೀನಾದ ವುಹಾನ್‌ನಲ್ಲಿ ಆರಂಭವಾದ ಕೊರೊನಾ ವೈರಸ್‌ನ ಹಾವಳಿ ಈಗ ಜಗತ್ತಿನ ಅನೇಕ ರಾಷ್ಟ್ರಗಳಿಗೆ ವ್ಯಾಪಿಸಿ ಆತಂಕ ಸೃಷ್ಟಿಸಿದೆ. ಚೀನಾದಲ್ಲಂತೂ ಈಗಾಗಲೇ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಶ್ಲಾಘನೀಯ ಸಂಗತಿಯೆಂದರೆ, ಈ ವಿಷಯದಲ್ಲಿ ಭಾರತವು ಆರಂಭದಿಂದಲೇ ಬಹಳ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದು. ಆದರೆ ಇದರ ಹೊರತಾಗಿಯೂ ಸೋಮವಾರ ದೇಶದಲ್ಲಿ ಎರಡು ಕೊರೊನಾ ಪ್ರಕರಣಗಳು ದೃಢಪಟ್ಟಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.

ರೋಗ ದೃಢಪಟ್ಟವರಲ್ಲಿ ಒಬ್ಬ ವ್ಯಕ್ತಿ ದೆಹಲಿಯವನಾದರೆ, ಮತ್ತೂಬ್ಬ ವ್ಯಕ್ತಿ ಬೆಂಗಳೂರಿನ ಕಂಪನಿಯೊಂದರ ಉದ್ಯೋಗಿ. ಬೆಂಗಳೂರಿನ ಕೊರೊನಾ ಸೋಂಕಿತ ಟೆಕ್ಕಿ ದುಬೈನಿಂದ ಆಗಮಿಸಿದ್ದ. ಈತನ ರೂಮ್‌ಮೇಟ್‌, ಇದ್ದ ಅಪಾರ್ಟ್‌ಮೆಂಟ್‌, ಓಡಾಡಿದ್ದ ಪ್ರದೇಶಗಳು, ಭೇಟಿಯಾದ ಜನರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ಮೇಲೂ 14 ದಿನಗಳ ಕಾಲ ನಿಗಾ ಇಡಲಾಗಿದೆ. ಈಗ ಕೊರೊನಾ ವಿರುದ್ಧದ ಹೋರಾಟಕ್ಕೆ ನಮ್ಮ ರಾಜ್ಯ ಎಷ್ಟು ಸಜ್ಜಾಗಿದೆ ಎನ್ನುವ ಪ್ರಶ್ನೆ ಉದ್ಭವವಾಗುತ್ತಿರುವುದು ಸಹಜವೇ. ನಾವಂತೂ ಸಕಲ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳುತ್ತಿದ್ದೇವೆ, ಹೆದರುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಭರವಸೆಯ ಮಾತನಾಡುತ್ತಿದೆ.

“ಇದುವರೆಗೂ ವಿದೇಶದಿಂದ ಬಂದ 40 ಸಾವಿರಕ್ಕೂ ಅಧಿಕ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಲ್ಲೂ ಸೋಂಕು ದೃಢಪಟ್ಟಿಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡದಂತೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳ ವ್ಯವಸ್ಥೆ ಮಾಡಲಾಗಿದೆ. 630 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. 24 ಗಂಟೆ ನಿಗಾವಹಿಸಲು ಇಲಾಖೆ ಸಜ್ಜಾಗಿದೆ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಚೀನಾದಲ್ಲಿ ಕೊರೊನಾ ಯಾವ ರೀತಿಯಲ್ಲಿ ಹಾನಿ ಮಾಡಿದೆ ಎನ್ನುವುದನ್ನು ನಾವು ನೋಡಿದ್ದೇವೆ. ಅಲ್ಲಿ ರೋಗ ಈ ಪ್ರಮಾಣದಲ್ಲಿ ಹರಡುವುದಕ್ಕೆ, ಚೀನಾದ ಆಡಳಿತವೂ ಕಾರಣ.

Advertisement

ಆರಂಭದಲ್ಲಿ ರೋಗದ ಅಪಾಯವನ್ನು ಕಡೆಗಣಿಸುತ್ತಾ, ಬರೀ ಸುದ್ದಿಯನ್ನು ಮುಚ್ಚಿಡುವುದರಲ್ಲಿ, ಕೊರೊನಾ ಅಪಾಯದ ಬಗ್ಗೆ ಎಚ್ಚರಿಸುವವರನ್ನು ಹತ್ತಿಕ್ಕುವುದರಲ್ಲಿ ಚೀನಿ ಆಡಳಿತ ಸಮಯ ವ್ಯರ್ಥಮಾಡಿತು. ಇದರಿಂದಾಗಿಯೇ, ಇಂದು ಕೊರೊನಾ ವೈರಸ್‌ ಹಾವಳಿ ಜಗದಗಲ ವ್ಯಾಪಿಸಿದೆ.

ಜಾಗತಿಕ ಆರ್ಥಿಕತೆಯ ಮೇಲೂ ಇದರಿಂದ ಬಹಳ ಪೆಟ್ಟು ಬೀಳುತ್ತಿದೆ. ಏನೇ ಆದರೂ, ಈ ವಿಚಾರದಲ್ಲಿ ಭಾರತ ಆರಂಭದಿಂದಲೇ ಎಚ್ಚೆತ್ತುಕೊಂಡಿರುವುದು ಕಾಣಿಸುತ್ತಿದೆ. ರೋಗ ಪೀಡಿತ ದೇಶಗಳಿಂದ ಬಂದ ಜನರನ್ನು ಈ ಹಿಂದೆಯೇ ತಪಾಸಣೆ ಮಾಡಿ ಒಳಗೆ ಬಿಟ್ಟುಕೊಳ್ಳಲಾಗಿದೆ. ಚೀನಾದ ನಂತರ ಕೊರೊನಾ ವೈರಸ್‌ ಅತಿಹೆಚ್ಚು ಹರಡಿರುವುದು ಇರಾನ್‌, ಇಟಲಿ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನಲ್ಲಿ.

ಹೀಗಾಗಿ ಭಾರತ ಸರ್ಕಾರ ಸೋಮವಾರ ಈ ನಾಲ್ಕೂ ರಾಷ್ಟ್ರಗಳಿಂದ ಭಾರತಕ್ಕೆ ಬರಲು ವಿಸಾ ಪಡೆದಿದ್ದವರ ವಿಸಾಗಳನ್ನು ರದ್ದುಪಡಿಸಿರುವುದು ಸರಿಯಾದ ಕ್ರಮವಾಗಿದೆ. ಏನೇ ಆದರೂ ಕೊರೊನಾ ವಿರುದ್ಧ ಸಕ್ಷಮ ಚಿಕಿತ್ಸೆಯನ್ನು ಕಂಡುಹಿಡಿಯಲು ಈಗ ಇಡೀ ಪ್ರಪಂಚವೇ ಟೊಂಕಕಟ್ಟಿ ನಿಂತಿರುವುದು ಸುಳ್ಳಲ್ಲ. ದೇಶದಲ್ಲೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆಲ್ಲ ಪಕ್ಷಭೇದ ಮರೆತು ಈ ಅಪಾಯದ ವಿರುದ್ಧ ಜತೆಯಾಗಿ ಸೆಣಸಲೇಬೇಕಿದೆ.

ಮುಖ್ಯ ಸಂಗತಿಯೆಂದರೆ, ಈ ವೇಳೆಯಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ, ಹಾಗೂ ಕೆಲವು ಸುದ್ದಿ ವಾಹಿನಿಗಳಲ್ಲಿ ಕೊರೊನಾ ಬಗ್ಗೆ ಗೊಂದಲ ಮತ್ತು ಭೀತಿ ಹರಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಜನರು ಯಾವ ಕಾರಣಕ್ಕೂ ಇಂಥ ವದಂತಿಗಳಿಗೆ ಕಿವಿಗೊಡಲೇಬಾರದು. ಇನ್ನು, ಮನೆ
ಮದ್ದುಗಳಿಂದ ಕೊರೊನಾ ವೈರಸ್‌ ನಾಶವಾಗುತ್ತದೆ ಎಂಬುದಕ್ಕೆ ಯಾವ ಪುರಾವೆಗಳೂ ಇಲ್ಲ. ಈ ರೀತಿ ಮನೆಮದ್ದುಗಳಿಂದ ಅದು ಶಮನವಾಗುವುದೂ ಇಲ್ಲ ಎಂದು ವಿಶ್ವಸಂಸ್ಥೆಯೇ ಎಚ್ಚರಿಸಿದೆ. ಹೀಗಾಗಿ, ವಾಟ್ಸ್‌ಆಪ್‌, ಫೇಸ್‌ಬುಕ್‌ ಹಾಗೂ ಯೂಟ್ಯೂಬ್‌ನಲ್ಲಿ ತಜ್ಞರಲ್ಲದವರು ಹೇಳುವ ಮಾತುಗಳಿಗೆ ಕಿವಿಗೊಡದಿರಿ. ತಜ್ಞರ ಬಳಿಯೇ ಸೂಕ್ತ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿದುಕೊಳ್ಳಿ. ಇನ್ನು ಕೊರೊನಾ ವಿರುದ್ಧದ ಸಮರದಲ್ಲಿ ಜಯ ಸಾಧಿಸಬೇಕು ಎಂದರೆ ಸರ್ಕಾರಗಳಷ್ಟೇ ಅಲ್ಲದೇ, ಜನರ ಸಹಭಾಗಿತ್ವವೂ ಅಗತ್ಯವಾದದ್ದು. ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರಿಂದ ಅಪಾಯದಿಂದ ದೂರವಿರಬಹುದು ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ. ಆ ಸಲಹೆಗಳನ್ನು ಪಾಲಿಸಿ. ಅನಗತ್ಯ ಭೀತಿಗೆ ಒಳಗಾಗದಿರಿ.

Advertisement

Udayavani is now on Telegram. Click here to join our channel and stay updated with the latest news.

Next