ಚೀನಾ: ಎರಡು ದಶಕಗಳ ಹಿಂದೆ ಕಾಣಿಸಿಕೊಂಡು 700ಕ್ಕಿಂತಲೂ ಹೆಚ್ಚು ಜನರನ್ನು ಬಲಿ ಪಡೆದಿದ್ದ ಸಾರ್ಸ್ ವೈರಸ್ ಗಿಂತಲೂ, ಕೊರೊನಾ ಭೀಕರವಾಗುವತ್ತ ಮುನ್ನುಗ್ಗುತ್ತಿದೆ. ಶನಿವಾರದ ವೇಳೆಗೆ ಜಗತ್ತಿನಾದ್ಯಂತ ಮೃತರ ಸಂಖ್ಯೆ 724 ತಲುಪಿದ್ದು ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ.
ಹುಬೈ ಪ್ರಾಂತ್ಯವೊಂದರಲ್ಲೆ ಶುಕ್ರವಾರ 81 ಜನರು ಮೃತರಾಗಿದ್ದಾರೆ. ಇದುವರೆಗೂ ಚೀನಾದಲ್ಲಿ 34,546 ಜನರಿಗೆ ಸೋಂಕು ತಗುಲಿದ್ದು ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಚೀನಾ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ.
2002-03ರಲ್ಲಿ ಚೀನಾದಲ್ಲಿ ಸಾರ್ಸ್ ಹೆಸರಿನ ವೈರಸ್ 774ಕ್ಕಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಮಾತ್ರವಲ್ಲದೆ ಇತರೆ ದೇಶಗಳಿಗೂ ಹರಡಿ ಮಾರಣಹೋಮ ಸೃಷ್ಟಿಸಿತ್ತು.
ಕೊರೊನಾ ವೈರಸ್ ಚೀನಾದಿಂದ ಇತರೆ 20 ದೇಶಗಳಿಗೆ ಹರಡಿದೆ. ಈ ಭಯಾನಕ ವೈರಸ್ ಗೆ ಸಾವನ್ನಪ್ಪುವರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಈ ಹಿನ್ನಲೆಯಲ್ಲಿ ಭಾರತದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಿಂದ ಬರುವ ಪ್ರಯಾಣಿಕರರು ಮತ್ತು ಚೀನಾಗೆ ತೆರಳುವ ಪ್ರಯಾಣಿಕರಿಗೂ ನಿರ್ಬಂಧ ವಿಧಿಸಲಾಗಿದೆ.