Advertisement
ಹೃದಯ ರೋಗಗಳು, ಅದರಲ್ಲೂ ಪರಿಧಮನಿಯ ಕಾಯಿಲೆಗಳು (ಕೊರೊನರಿ ಆರ್ಟರಿ ಡಿಸೀಸಸ್ – ಸಿಎಡಿ) ಪ್ರೌಢರ ಮೃತ್ಯುವಿಗೆ ಪ್ರಧಾನ ಕಾರಣವಾಗಿರುವ ಒಂದು ಆರೋಗ್ಯ ಸಮಸ್ಯೆ. 45 ವರ್ಷಕ್ಕಿಂತ ಕಡಿಮೆ ವಯೋಮಾನದವರಲ್ಲಿ ಕಾಣಿಸಿಕೊಳ್ಳುವ ಪರಿಧಮನಿಯ ಕಾಯಿಲೆ (ಸಿಎಡಿ)ಯನ್ನು “ಯುವ ಜನತೆಯ ಕ್ಯಾಡ್’ ಎಂದು ಕರೆಯಲಾಗುತ್ತದೆ.
Related Articles
Advertisement
ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್, ಬೊಜ್ಜು ಮತ್ತು ಕೌಟುಂಬಿಕ ವೈದ್ಯಕೀಯ ಚರಿತ್ರೆ ಇವು ಹೃದಯದ ಪರಿಧಮನಿಯ ಕಾಯಿಲೆಗೆ ಸಾಂಪ್ರದಾಯಿಕ ಅಪಾಯಾಂಶಗಳು. ಯುವ ಜನತೆಯಲ್ಲಿ ಪರಿಧಮನಿಯ ಕಾಯಿಲೆ ಉಂಟಾಗುವುದಕ್ಕೂ ಹೆಚ್ಚು ಕಡಿಮೆ ಇವೇ ಅಪಾಯಾಂಶಗಳು ಕಾರಣ. ಕೆಲವೊಮ್ಮೆ ಯುವ ಜನತೆಯಲ್ಲಿ ಪರಿಧಮನಿಯ ಕಾಯಿಲೆ ಉಂಟಾಗುವುದಕ್ಕೆ ನಿರ್ದಿಷ್ಟ ಅಪಾಯಾಂಶಗಳು ಹೀಗಿವೆ:
ಕೊಲೆಸ್ಟರಾಲ್‌ನ ಅಸಹಜ ಉತ್ಪಾದನೆ ಮತ್ತು ಚಯಾಪಚಯ ಕ್ರಿಯೆಗೆ ಕಾರಣವಾಗುವ ವಂಶವಾಹಿ ವಿಚಲನೆ.
ಜನ್ಮತಃ ಹೃದಯ ಪರಿಧಮನಿಯ ಅಸಹಜತೆಗಳು; ಛೇದನ (ಗರ್ಭಸ್ಥವಾಗಿದ್ದಾಗ) ಅಥವಾ ಉರಿಯೂತ (ಕವಾಸಾಕಿ ಕಾಯಿಲೆ).
ಕೊಕೇನ್ ಮಾದಕದ್ರವ್ಯ ವ್ಯಸನ
ಯುವಜನತೆಯಲ್ಲಿ ಪರಿಧಮನಿ ಕಾಯಿಲೆಯ ಹೆಚ್ಚಳ
ಪರಿಧಮನಿಯ ಕಾಯಿಲೆಯ ಸಾಂಪ್ರದಾಯಿಕ ಅಪಾಯಾಂಶಗಳು ಉಂಟಾಗುವುದರಲ್ಲಿ ಇತ್ತೀಚೆಗೆ ಅಭೂತಪೂರ್ವ ಬದಲಾವಣೆ ಕಂಡುಬಂದಿದೆ. ಹಿಂದೆ ವಯಸ್ಕರಲ್ಲಿ ಮಾತ್ರ ಈ ಅಪಾಯಾಂಶಗಳು ಕಂಡುಬರುತ್ತವೆ ಎಂದು ತಿಳಿಯಲಾಗಿತ್ತು, ಆದರೆ ಈಗ ಯುವ ಜನತೆಯಲ್ಲಿಯೂ ಕಂಡುಬರುತ್ತಿವೆ. ಸುಲಭ ಸೌಲಭ್ಯಗಳು, ನಗರೀಕರಣ ಮತ್ತು ಯುವ ಜನತೆಯ ಬದಲಾಗುತ್ತಿರುವ ಜೀವನ ಶೈಲಿ ಈ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ಯುವ ಪೀಳಿಗೆಯಲ್ಲಿ ಈ ಸಾಂಪ್ರದಾಯಿಕ ಅಪಾಯಾಂಶಗಳ ಹೆಚ್ಚಳವು ಯುವ ಜನತೆಯಲ್ಲಿ ಪರಿಧಮನಿಯ ಕಾಯಿಲೆಯ ಏರಿಕೆಗೆ ಕಾರಣವಾಗಿದೆ.
ಜೀವನ ಶೈಲಿಯಲ್ಲಿ ಬದಲಾವಣೆ
ಜೀವನ ಶೈಲಿಯಲ್ಲಿ ಬದಲಾವಣೆಯು ಈ ಅಪಾಯಾಂಶಗಳ ಹೆಚ್ಚಳಕ್ಕೆ ಪ್ರಧಾನ ಕಾರಣವಾಗಿದೆ. ದೈಹಿಕ ಶ್ರಮ ಅಗತ್ಯ ಬೀಳದ ಉದ್ಯೋಗಗಳ ಜತೆಗೆ ದೈಹಿಕ ಚಟುವಟಿಕೆಯ ಕೊರತೆ, ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾಗುವ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು, ಧೂಮಪಾನ ಮತ್ತು ಒತ್ತಡ ಇತ್ಯಾದಿಗಳು ಯುವ ಜನತೆಯಲ್ಲಿ ಅಪಾಯಾಂಶಗಳ ಹೆಚ್ಚಳ ಮತ್ತು ಆ ಮೂಲಕ ಪರಿಧಮನಿಯ ಕಾಯಿಲೆ ಏರಿಕೆಗೆ ಪ್ರಧಾನ ಕಾರಣಗಳಾಗಿವೆ.
-ಮುಂದಿನ ವಾರಕ್ಕೆ
-ಡಾ| ರಾಜೇಶ್ ಭಟ್ ಯು., ಅಸೋಸಿಯೇಟ್ ಪ್ರೊಫೆಸರ್ ಮತ್ತು ಸೀನಿಯರ್ ಇಂಟರ್‌ವೆನ್ಶನಲ್ ಕಾರ್ಡಿಯಾಲಜಿಸ್ಟ್, ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)