Advertisement

ಚೀನಕ್ಕೆ ವಿಮಾನ ಸಂಚಾರ ಬಂದ್‌ ; ಭಾರತ ಸಹಿತ ಪ್ರಮುಖ ರಾಷ್ಟ್ರಗಳ ವಿಮಾನ ಸಂಸ್ಥೆಗಳ ನಿರ್ಧಾರ

07:12 PM Mar 20, 2020 | Hari Prasad |

ಬೀಜಿಂಗ್‌/ಹೊಸದಿಲ್ಲಿ: ಚೀನಗೆ ಮಾರಕ ವೆನಿಸಿರುವ, ತ್ವರಿತಗತಿಯಲ್ಲಿ ಜಗತ್ತಿನಾದ್ಯಂತ ಹಬ್ಬುತ್ತಿರುವ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 132ಕ್ಕೆ ಏರಿದೆ. ಜತೆಗೆ, ಸೋಂಕಿತರ ಸಂಖ್ಯೆಯೂ 6 ಸಾವಿರಕ್ಕೇರಿಕೆಯಾಗಿದೆ. ಮುಂದಿನ 10 ದಿನಗಳಲ್ಲಿ ಈ ಸಾವು ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚ ಬಹುದು ಎಂದು ಚೀನದ ಆರೋಗ್ಯ ಪ್ರಾಧಿ ಕಾರದ ಅಧಿಕಾರಿಗಳು ಹೇಳಿದ್ದಾರೆ. ಇದರ ನಡುವೆಯೇ ಹಲವಾರು ದೇಶಗಳ ವಿಮಾನ ಯಾನ ಸಂಸ್ಥೆಗಳು, ಚೀನದತ್ತ ವಿಮಾನ ಸಂಚಾರವನ್ನೇ ಸ್ಥಗಿತ ಮಾಡಿವೆ.

Advertisement

ಸದ್ಯ 1,239 ಮಂದಿಯ ಸ್ಥಿತಿ ತೀರಾ ಗಂಭೀರವಾಗಿದೆ ಎಂದಿರುವ ಅಧಿಕಾರಿಗಳು, ಇನ್ನೂ 9,239 ಮಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದರ ನಡುವೆಯೇ ಸೋಂಕಿನಿಂದ ಗುಣಮುಖರಾದ 103 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.


ಚೀನದ ವುಹಾನ್‌ನಲ್ಲಿ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ಸಾಗಿರುವುದು.

ಚೀನ ಸಂಚಾರ ಬಂದ್‌: ಕೊರೊನಾ ವೈರಸ್‌ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನ ಹಲವಾರು ದೇಶಗಳ ವಿಮಾನಯಾನ ಸಂಸ್ಥೆಗಳು, ಚೀನಕ್ಕೆ ವಿಮಾನ ಹಾರಾಟವನ್ನೇ ನಿಲ್ಲಿಸುವ ನಿರ್ಧಾರ ಮಾಡಿವೆ. ಇಂಡಿಗೋ ಸಂಸ್ಥೆ ಭಾರತ-ಚೀನ ನಡುವಿನ ಹಾರಾಟ ಸ್ಥಗಿತ ಮಾಡಿದೆ.

ಇದರಲ್ಲಿ ಬೆಂಗಳೂರು – ಹಾಂಗ್‌ಕಾಂಗ್‌, ದಿಲ್ಲಿ – ಚೆಂಗ್ಡು ಮಾರ್ಗ ಸೇರಿದೆ. ಆದರೆ ಕೋಲ್ಕತಾ – ಗ್ವಾಂಜೌ ನಡುವಿನ ಹಾರಾಟ ಯಥಾಸ್ಥಿತಿಯಲ್ಲಿರಲಿದೆ ಎಂದು ಇಂಡಿಗೋ ಸಂಸ್ಥೆ ಹೇಳಿದೆ. ಇನ್ನು ಏರ್‌ ಇಂಡಿಯಾ ದಿಲ್ಲಿ – ಶಾಂಘೈ ನಡುವಿನ ವಿಮಾನ ಸಂಚಾರವನ್ನು ನಿರ್ಬಂಧಿಸಿದೆ. ಈ ಎಲ್ಲ ಹಾರಾಟಗಳು ಫೆ. 1ರಿಂದ ಜಾರಿಗೆ ಬರಲಿವೆ.

ಅತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುನೈಟೆಡ್‌ ಏರ್‌ಲೈನ್ಸ್‌, ಬ್ರಿಟಿಷ್‌ ಏರ್‌ಲೈನ್ಸ್‌ ಕೂಡ ಚೀನಕ್ಕೆ ಹಾರಾಟ ನಿರ್ಬಂಧಿಸಿವೆ. ಜತೆಗೆ ತನ್ನ ನಾಗರಿಕರಿಗೆ ಚೀನ ಭೇಟಿ ಮುಂದೂಡಿಕೆ ಬಗ್ಗೆಯೂ ಸಲಹೆ ನೀಡಿವೆ.

Advertisement

ಸಂಸ್ಥೆಗಳಿಂದಲೂ ನಿರ್ಬಂಧ
ಫೇಸ್‌ಬುಕ್‌ ಸಂಸ್ಥೆ ಸದ್ಯಕ್ಕೆ ತನ್ನ ನೌಕರರನ್ನು ಚೀನಕ್ಕೆ ಕಳುಹಿಸದಿರಲು ನಿರ್ಧರಿಸಿದೆ. ಇಂಥ ನಿರ್ಧಾರ ತೆಗೆದುಕೊಂಡ ಅಮೆರಿಕದ ಮೊದಲ ಸಂಸ್ಥೆ ಫೇಸ್‌ಬುಕ್‌ ಆಗಿದೆ. ಅಂತೆಯೇ ಯುರೋಪ್‌ನ ಅತಿ ದೊಡ್ಡ ಬ್ಯಾಂಕ್‌ ಎಚ್‌.ಎಸ್‌.ಬಿ.ಸಿ. ಕೂಡ ತನ್ನ ಸಿಬಂದಿಯನ್ನು ಚೀನಗೆ ಕಳುಹಿಸದೇ ಇರಲು ತೀರ್ಮಾನಿಸಿದೆ. ಇದರ ಜತೆಯಲ್ಲಿ ಅಮೆರಿಕದ ಗೋಲ್ಡ್‌ ಮನ್‌ ಸಾಚೆ ಗ್ರೂಪ್‌, ದ. ಕೊರಿಯಾದ ಎಲ್‌ಜಿ, ಸ್ಟಾಂಡರ್ಡ್‌ ಚಾರ್ಟರ್ಡ್‌ ಗ್ರೂಪ್‌ಗ್ಳೂ ತಮ್ಮ ಸಿಬಂದಿಯ ಚೀನ ಪ್ರವಾಸವನ್ನು ಸದ್ಯಕ್ಕೆ ಮುಂದೂಡಿಕೆ ಮಾಡಿವೆ.

ಜರ್ಮನಿಯ ವೆಬಾಸ್ಟೋ, ಜಪಾನ್‌ನ ಹೊಂಡಾ ಮೋಟಾರ್ಸ್‌ ಕೂಡ ಇಂಥದ್ದೇ ನಿರ್ಧಾರ ತೆಗೆದುಕೊಂಡಿವೆ. ನಿಸಾನ್‌ ಸಂಸ್ಥೆ ಚೀನದ ವುಹಾನ್‌ನಲ್ಲಿ ರುವ ತಮ್ಮ ಸಿಬಂದಿ, ಮತ್ತವರ ಕುಟುಂಬ ಸದಸ್ಯರನ್ನು ವಾಪಸ್‌ ಕರೆಸಿಕೊಳ್ಳಲು ಯತ್ನಿಸುತ್ತಿದೆ. ಇನ್ನು ಟೊಯೋಟಾ ಮೋಟಾರ್ಸ್‌ ಫೆ. 9ರವರೆಗೆ ಚೀನದಲ್ಲಿನ ತನ್ನ ಎಲ್ಲ ಕಾರ್ಯಾಚರಣೆಯನ್ನು ಸ್ಥಗಿತ ಮಾಡಿದೆ.

ಭಾರತೀಯರಿಗೆ ಸಹಾಯ: ವುಹಾನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್‌ ಕಳುಹಿಸಲು ಎಲ್ಲ ರೀತಿಯ ಸಹಾಯ ಮಾಡುವುದಾಗಿ ಚೀನ ಹೇಳಿದೆ. ಭಾರತ ಸರಕಾರದ ಮನವಿಗೆ ಸಬಂಧಿಸಿರುವ ಅದು, ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದೆ.

ಕೇವಲ ಭಾರತವಷ್ಟೇ ಅಲ್ಲ, ಅಮೆರಿಕ, ಫ್ರಾನ್ಸ್‌, ಜಪಾನ್‌, ದಕ್ಷಿಣ ಕೊರಿಯಾ ಕೂಡ ತನ್ನ ನಾಗರಿಕರನ್ನು ವಾಪಸ್‌ ಕಳುಹಿಸಲು ಮನವಿ ಮಾಡಿದ್ದು, ಇದಕ್ಕೂ ಚೀನ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಕೊರೊನಾ ವೈರಸ್‌ ಇದೇ ಮೊದಲ ಬಾರಿಗೆ ಮಧ್ಯಪ್ರಾಚ್ಯ ದೇಶಗಳಿಗೆ ಕಾಲಿಟ್ಟಿದೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿದೆ.

ಆಸ್ಟ್ರೇಲಿಯಾದಿಂದ ಪ್ರತಿ ವೈರಸ್‌ ಸೃಷ್ಟಿ
ನಾವೆಲ್‌ ಕೊರೊನಾ ವೈರಸ್‌ ಅನ್ನು ಸೃಷ್ಟಿಸಿರುವುದಾಗಿ ಆಸ್ಟ್ರೇಲಿಯಾ ವಿಜ್ಞಾನಿಗಳು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಚೀನದಿಂದ ಹೊರಗೆ ಈ ವೈರಸ್‌ ಅನ್ನು ಸೃಷ್ಟಿಸಲಾಗಿದೆ. ವೈದ್ಯಕೀಯ ದೃಷ್ಟಿಯಲ್ಲಿ ಹೇಳುವುದಾದರೆ ಇದು ಮೈಲುಗಲ್ಲಾಗಿದೆ. ಈ ವೈರಸ್‌ ಸೃಷ್ಟಿಯಿಂದಾಗಿ, ಇದನ್ನು ಹೋಗಲಾಡಿಸಲು ಯಾವ ರೀತಿಯ ಚಿಕಿತ್ಸಾ ಕ್ರಮ ಅನುಸರಿಸಬಹುದು ಎಂಬುದೂ ಗೊತ್ತಾಗಲಿದೆ.

ಭಾರತಕ್ಕೆ ಹೈ ರಿಸ್ಕ್ ಪಟ್ಟಿ
ಕೊರೊನಾ ವೈರಸ್‌ ಹರಡಬಹುದಾದ ಹೈ ರಿಸ್ಕ್ ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ ಎಂದು ಅಧ್ಯಯನವೊಂದು ಹೇಳಿದೆ. ಚೀನ ಜತೆಗೆ ಸಂಪರ್ಕ ಇರಿಸಿಕೊಂಡಿರುವ ದೇಶಗಳ ಪಟ್ಟಿಯಲ್ಲಿ ಭಾರತವೂ ಇದ್ದು, ಹೀಗಾಗಿ ಇಲ್ಲೂ ರೋಗ ಹರಡಬಹುದಾಗಿದೆ ಎಂದು ಬ್ರಿಟನ್‌ನ ಸೌತಾಂಪ್ಟನ್‌ ವಿವಿ ಯ ಸಂಶೋಧಕರ ತಂಡ ಹೇಳಿದೆ. ಈ ಪಟ್ಟಿಯಲ್ಲಿ ಥೈಲ್ಯಾಂಡ್‌ಗೆ ಮೊದಲ ಸ್ಥಾನವಿದ್ದರೆ ಜಪಾನ್‌ಗೆ 2ನೇ ಸ್ಥಾನ, ಹಾಂಗ್‌ಕಾಂಗ್‌ಗೆ 3ನೇ ಸ್ಥಾನ, ಅಮೆ ರಿಕಕ್ಕೆ 6, ಆಸ್ಟ್ರೇಲಿಯಾ 10, ಬ್ರಿಟನ್‌ 17 ಮತ್ತು ಭಾರತ 23ನೇ ಸ್ಥಾನದಲ್ಲಿದೆ.

– ಸಾವಿನ ಸಂಖ್ಯೆ 132ಕ್ಕೆ ಏರಿಕೆ, 6,000ಕ್ಕೇರಿದ ಸೋಂಕಿತರ ಸಂಖ್ಯೆ

– ಮುಂದಿನ 10 ದಿನಗಳಲ್ಲಿ ಇನ್ನೂ ಹೆಚ್ಚಲಿದೆ ಸಾವಿನ ಸಂಖ್ಯೆ

– 1,239 ಮಂದಿಯ ಸ್ಥಿತಿ ಗಂಭೀರ, ಇನ್ನೂ 9,239 ಮಂದಿಗೆ ತಗುಲಿರುವ ಸಾಧ್ಯತೆ

Advertisement

Udayavani is now on Telegram. Click here to join our channel and stay updated with the latest news.

Next