ನವದೆಹಲಿ: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಒಲಿಂಪಿಕ್ ಅರ್ಹತಾ ಕೂಟಗಳೆಲ್ಲ ಸತತವಾಗಿ ರದ್ದಾಗುತ್ತಿವೆ. ಇದರ ನಡುವೆಯೇ ಮಾ.24ರಿಂದ 29ವರೆಗೆ ನಡೆಯಬೇಕಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಮುಖಾಮುಖೀಯನ್ನು ನಿರ್ಧರಿಸಲಾಗಿದೆ. ವಿಶ್ವವಿಖ್ಯಾತ ಆಟಗಾರ್ತಿ ಪಿ.ವಿ.ಸಿಂಧು, ಒಲಿಂಪಿಕ್ ಅರ್ಹತೆ ಪಡೆಯಲು ತುದಿಗಾಲಲ್ಲಿ ನಿಂತಿರುವ ಸೈನಾ ನೆಹ್ವಾಲ್, ಕೆ.ಶ್ರೀಕಾಂತ್ ಅವರ ಎದುರಾಳಿಗಳು ಯಾರೆಂದು ನಿರ್ಧಾರವಾಗಿದೆ.
ಪಿ.ವಿ.ಸಿಂಧು ತನ್ನ ಮೊದಲಪಂದ್ಯದಲ್ಲಿ ಚೀಯುಂಗ್ ಎನ್‌ಗಾನ್ ಯಿರನ್ನು ಎದುರಿಸಲಿದ್ದಾರೆ. ಸಿಂಧು ಈಗಾಗಲೇ ತನ್ನ ಒಲಿಂಪಿಕ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಏ.28ರೊಳಗೆ ಹೇಗಾದರೂ ಮಾಡಿ ಒಲಿಂಪಿಕ್ ಅರ್ಹತೆ ಪಡೆಯಲೇಬೇಕು ಎಂದು ಸೈನಾ ಪರದಾಡುತ್ತಿದ್ದರೂ, ಪರಿಸ್ಥಿತಿ ಅವರಿಗೆ ಬೆಂಬಲ ನೀಡುತ್ತಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಸತತವಾಗಿ ಕೂಟಗಳು ರದ್ದಾಗುತ್ತಿವೆ. ಆದ್ದರಿಂದ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಅವರ ಪಾಲಿಗೆ ಮಹತ್ವದ್ದಾಗಿದೆ.
ಅವರು ಮೊದಲ ಪಂದ್ಯದಲ್ಲಿ ಚೀನಾ ತೈಪೆಯ ಪೈ ಯು ಪೊರನ್ನು ಎದುರಿಸಲಿದ್ದಾರೆ. ಕೆ.ಶ್ರೀಕಾಂತ್, ಇನ್ನೊಬ್ಬ ಭಾರತೀಯ ಸ್ಪರ್ಧಿ ಲಕ್ಷ್ಯಸೇನ್ ವಿರುದ್ಧ ಸೆಣಸಲಿದ್ದಾರೆ. ಇಷ್ಟೆಲ್ಲ ಸಿದ್ಧತೆ ನಡೆಯುತ್ತಿದ್ದರೆ, ಕೂಟ ನಡೆಯುತ್ತಾ ಎನ್ನುವುದೇ ಇನ್ನೂ ಖಚಿತವಾಗಿಲ್ಲ. ದ.ಕೊರಿಯ, ಇಟಲಿ, ಜಪಾನ್, ಚೀನಾ ಪ್ರಜೆಗಳಿಗೆ ಭಾರತ ವೀಸಾ ನಿರಾಕರಿಸಿದೆ. ಹಾಗಾಗಿ ಸ್ಪರ್ಧಿಗಳ ಆಗಮನವೇ ಅನುಮಾನ
ಏಷ್ಯಾ ಕಪ್ ಬಿಲ್ಗಾರಿಕೆ: ಹಿಂದಕ್ಕೆ ಸರಿದ ಭಾರತ
ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್ ಗುಂಪು 1 ವಿಶ್ವ ಬಿಲ್ಗಾರಿಕಾ ಕೂಟದಿಂದ ಹಿಂದಕ್ಕೆ ಸರಿಯಲು ಭಾರತ ಬಿಲ್ಗಾರಿಕಾ ಸಂಸ್ಥೆ ನಿರ್ಧರಿಸಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಆಯೋಜನೆಗೊಂಡಿದ್ದ ಕ್ರೀಡಾ ಕೂಟಗಳು ರದ್ದಾಗುತ್ತಿವೆ.
ಒಂದೊಂದೇ ಕೂಟದಿಂದ ಭಾರತದ ವಿವಿಧ ಕ್ರೀಡಾ ಸಂಸ್ಥೆಗಳು ಹೊರ ಬರುತ್ತಿವೆ. ಆಟಗಾರರ ರಕ್ಷಣೆಯ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾ ಗುತ್ತಿವೆ. ಇದೀಗ ಈ ಸಾಲಿಗೆ ಭಾರತ ಬಿಲ್ಗಾರಿಕಾ ಸಂಸ್ಥೆ ಕೂಡ ಸೇರಿದ್ದು ಕೂಟಕ್ಕೆ ಆಗಮಿಸುವುದಿಲ್ಲ ಎನ್ನುವುದನ್ನು ಪತ್ರ ಮೂಲಕ ವಿಶ್ವ ಬಿಲ್ಗಾರಿಕಾ ಸಂಸ್ಥೆಗೆ ಸ್ಪಷ್ಟಪಡಿಸಿದೆ. ಮಾ.8 ರಿಂದ 15ರ ತನಕ ಕೂಟ ಬ್ಯಾಂಕಾಕ್‌ನಲ್ಲಿ ನಡೆಯಬೇಕಿತ್ತು. ಥಾಯ್ಲೆಂಡ್‌ಗೆ ತೆರಳಲು ಎಲ್ಲ ರೀತಿಯ ಸಿದ್ಧತೆಗಳು ಅಂತಿಮಗೊಂಡಿದ್ದವು, ಟಿಕೆಟ್ ಬುಕ್ಕಿಂಗ್ ಆಗಿತ್ತು, ಆದರೆ ಕೊನೆಯ ಕ್ಷಣದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತೆರಳದಂತೆ ಸ್ಪರ್ಧಿಗಳಿಗೆ ಸೂಚನೆ ನೀಡಿದೆ