Advertisement

65 ಮಂದಿ ಮೇಲೆ ಕೊರೊನಾ ನಿಗಾ : ರಾಜ್ಯಾದ್ಯಂತ ಕಟ್ಟೆಚ್ಚರ!

09:10 AM Mar 05, 2020 | sudhir |

ಬೆಂಗಳೂರು: ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿ ಪ್ರಸ್ತುತ ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಂಗಳೂರಿನ ಟೆಕ್ಕಿ ಜತೆ ಸಂಪರ್ಕ ಹೊಂದಿದ್ದ 65 ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಮುಂಜಾಗ್ರತೆಯ ಕ್ರಮವಾಗಿ ಆತ ವಾಸವಿದ್ದ ಅಪಾರ್ಟ್‌ಮೆಂಟ್‌ನ ಎಲ್ಲ ನಿವಾಸಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ವೈದ್ಯಾಧಿಕಾರಿಗಳ ಸಭೆಯ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಮುಂಜಾಗ್ರತೆಯ ಕ್ರಮವಾಗಿ ಸೋಂಕುಪೀಡಿತ ಟೆಕ್ಕಿಯ ಸುತ್ತಮುತ್ತ ಇದ್ದ ವ್ಯಕ್ತಿಗಳ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ ಎಂದರು. ಜತೆಗೆ ಟೆಕ್ಕಿ ಸಂಪರ್ಕಕ್ಕೆ ಬಂದ ಶಂಕೆಯ ಮೇಲೆ 65 ಮಂದಿಯನ್ನು ಮುಂದಿನ 28 ದಿನಗಳ ಕಾಲ ನಿಗಾದಡಿ ಇರಿಸಲಾಗುವುದು. ಸೋಂಕುಪೀಡಿತ ವ್ಯಕ್ತಿ ವಾಸವಿದ್ದ ಅಪಾರ್ಟ್‌ಮೆಂಟ್‌ನ 80ಕ್ಕೂ ಹೆಚ್ಚು ಮನೆಗಳ ನಿವಾಸಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌
ರಾಜ್ಯದ ಎಲ್ಲ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಆಸ್ಪತ್ರೆಗಳು, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಶಂಕಿತರು ಮತ್ತು ಸೋಂಕುಪೀಡಿತರ ಚಿಕಿತ್ಸೆಗಾಗಿ ಪ್ರತ್ಯೇಕ ನಿಗಾ ವಾರ್ಡ್‌ಗಳನ್ನು ಮಾಡಲಾಗಿದೆ.

ಶಂಕಿತರ ಮೇಲೆ ತೀವ್ರ ನಿಗಾ
ಸಚಿವ ಡಾ| ಸುಧಾಕರ್‌ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಸೂಚನೆಯಂತೆ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಎಲ್ಲ ಬಗೆಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ನಿಯಮಗಳ ಪ್ರಕಾರ ಶಂಕಿತರನ್ನು 14 ದಿನಗಳ ಕಾಲ ನಿಗಾದಲ್ಲಿರಿಸಬೇಕು. ಆದರೆ ಈ ಬಗ್ಗೆ ಹೆಚ್ಚಿನ ಮುಂಜಾಗ್ರತೆ ವಹಿಸಿರುವ ಆರೋಗ್ಯ ಇಲಾಖೆಯು ಅವರನ್ನು 28 ದಿನಗಳ ಕಾಲ ನಿಗಾ ದಲ್ಲಿರಿಸುತ್ತಿದೆ ಎಂದರು.

ರಾಜ್ಯದೆಲ್ಲೆಡೆ ಮುನ್ನೆಚ್ಚರಿಕೆ ಕ್ರಮ
ಕೊರೊನಾ ವೈರಸ್‌ ಸೋಂಕು ರಾಜ್ಯವನ್ನು ಪ್ರವೇಶಿಸದಂತೆ ಆರೋಗ್ಯ ಇಲಾಖೆ ವತಿಯಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಥರ್ಮಲ್‌ ಸ್ಕ್ಯಾನರ್‌ ಮೂಲಕ ಹೊರಗಿನಿಂದ ಆಗಮಿಸುವವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬೆಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈವರೆಗೆ 40 ಸಾವಿರ ಪ್ರಯಾಣಿಕರನ್ನು ತಪಾಸಿಸ ಲಾಗಿದ್ದು, ಶಂಕಿತ 245 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದೆ. ಯಾರಲ್ಲೂ ಸೋಂಕು ದೃಢಪಟ್ಟಿಲ್ಲ ಎಂದು ಶ್ರೀರಾಮುಲು ತಿಳಿಸಿದರು.

Advertisement

ಸದ್ಯ ರಾಜ್ಯಕ್ಕೆ ಕೊರೊನಾ ಭೀತಿ ಇಲ್ಲ. ಮುಂದೆಯೂ ಬಾರದಂತೆ ತಡೆಯಲು ಆರೋಗ್ಯ ಇಲಾಖೆ 24 ತಾಸು ಕೂಡ ಕೆಲಸ ಮಾಡಲಿದೆ ಎಂದು ಸಚಿವರು ಹೇಳಿದರು.

ಹೆಚ್ಚು ಆತಂಕ ಬೇಡ
ಜ್ವರ, ಕೆಮ್ಮು, ನೆಗಡಿಯಂತಹ ಆರೋಗ್ಯ ಸಮಸ್ಯೆ ಬಂದ ಕೂಡಲೇ ಜನಸಾಮಾನ್ಯರು ಆತಂಕಕ್ಕೆ ಒಳಗಾಗುವ ಆವಶ್ಯಕತೆ ಇಲ್ಲ. ತಿಂಗಳಿಂದೀಚೆಗೆ ಚೀನ ಸೇರಿದಂತೆ ಕೊರೊನಾ ಸೋಂಕು ಪೀಡಿತ ದೇಶಗಳಿಗೆ ಭೇಟಿ ನೀಡಿದ ವ್ಯಕ್ತಿಗಳು ಅಥವಾ ಅವರ ಜತೆ ನಿಕಟ ಸಂಪರ್ಕ ಹೊಂದಿದ್ದರೆ ಮಾತ್ರ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಇಂಥವರು ಜ್ವರ, ಉಸಿರಾಟದ ತೊಂದರೆ, ನೆಗಡಿ, ಕೆಮ್ಮು, ಗಂಟಲು ಕೆರೆತದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಮುಂಜಾಗ್ರತೆ ಕ್ರಮವಾಗಿ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ತಪಾಸಣೆ ವೇಳೆ ಕಡ್ಡಾಯ ವಾಗಿ ವಿದೇಶಕ್ಕೆ ಭೇಟಿ ನೀಡಿರುವುದನ್ನು ವೈದ್ಯರಿಗೆ ತಿಳಿಸಬೇಕು ಎಂದು ರಾಜೀವ್‌ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ| ನಾಗರಾಜ್‌ ಸಲಹೆ ನೀಡಿದ್ದಾರೆ.

ಯಾರ ಮೇಲೆ ನಿಗಾ?
– ಟೆಕ್ಕಿ ಜತೆ ವಿಮಾನದಲ್ಲಿ ಪ್ರಯಾಣಿಸಿದ 15 ಮಂದಿ
– ವಿಮಾನ ನಿಲ್ದಾಣದಿಂದ ಬಂದ ಕ್ಯಾಬ್‌ನ ಚಾಲಕ
– ರೂಮ್‌ಮೇಟ್‌
– ಆತನ ಜತೆ ಕೆಲಸ ಮಾಡು ತ್ತಿದ್ದ ಖಾಸಗಿ ಸಂಸ್ಥೆ ಯ 25 ಸಿಬಂದಿ
– ಹೈದರಾಬಾದ್‌ಗೆ ಪ್ರಯಾಣಿಸಿದ ಕರ್ನಾಟಕ ಮೂಲದ 23 ಪ್ರಯಾಣಿಕರು

26 ಅಗತ್ಯ ಔಷಧ ರಫ್ತಿನ ಮೇಲೆ ನಿಯಂತ್ರಣ
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಿಂದ ಇತರೆಡೆಗೆ ರಫ್ತು ಮಾಡುವ 26 ವಿಧಗಳ ಔಷಧಗಳು ಮತ್ತು ಔಷಧ ಸಂಬಂಧಿ ವಸ್ತುಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರಕಾರ ನಿರ್ಧರಿಸಿದೆ. ಅದರಲ್ಲಿ ಪ್ಯಾರಸಿಟಮಾಲ್‌, ವಿಟಮಿನ್‌ ಬಿ 1, ವಿಟಮಿನ್‌ ಬಿ 12 ಮಾತ್ರೆಗಳು ಸೇರಿವೆ ಎಂದು ವಿದೇಶ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್ಟಿ) ಹೇಳಿದೆ. ಇದಲ್ಲದೆ ಟಿನಿಡಾಝೋಲ್‌, ಮೆಟ್ರೋನಿಡಾಝೋಲ್‌, ಆರ್ನಿಡಾಝೋಲ್‌, ನಿಯಾಮೈಸಿನ್‌ಗಳನ್ನೂ ನಿಯಂತ್ರಿತ ಔಷಧಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಹೆಚ್ಚಿದ ಸೋಂಕುಪೀಡಿತರ ಸಂಖ್ಯೆ
ದೇಶದಲ್ಲಿ ಕೊರೊನಾ ಸೋಂಕುಪೀಡಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಸೋಮವಾರ ದಿಲ್ಲಿ, ಜೈಪುರ ಮತ್ತು ಹೈದರಾಬಾದ್‌ಗಳಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದ್ದವು. ಮಂಗಳವಾರ ಜೈಪುರದ ಪ್ರವಾಸಿಗನ ಪತ್ನಿಯಲ್ಲೂ ಸೋಂಕು ಪತ್ತೆಯಾಗಿದೆ. ಜತೆಗೆ ಉತ್ತರ ಪ್ರದೇಶದ ಆಗ್ರಾದಲ್ಲಿ ಆರು ಮಂದಿಗೆ ತಗುಲಿರುವ ಶಂಕೆ ವ್ಯಕ್ತವಾಗಿದೆ. ಇವರ ರಕ್ತ ಮಾದರಿಯನ್ನು ಪುಣೆಗೆ ಕಳುಹಿಸಲಾಗಿದ್ದು, ದೃಢವಾಗಬೇಕಿದೆ.

ಆಗ್ರಾದಲ್ಲಿ ಸೋಂಕಿಗೆ ತುತ್ತಾಗಿರುವವರನ್ನು ಹೊಸ ದಿಲ್ಲಿಯ ಸಫ‌ªರ್‌ಜಂಗ್‌ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಆ ವ್ಯಕ್ತಿಗಳ ಕುಟುಂಬ ಸದಸ್ಯರಿಗೂ ಎಚ್ಚರಿಕೆಯಿಂದ ಇರುವಂತೆ ಸಲಹೆ ಮಾಡಲಾಗಿದೆ. ಇದೇ ವೇಳೆ ಆಗ್ರಾದಲ್ಲಿರುವ ಹೊಟೇಲ್‌ಗ‌ಳಿಗೆ ಪ್ರವಾಸಿಗರಿಗೆ ಇಟೆಲಿ, ಇರಾನ್‌, ಚೀನದಿಂದ ಬರುವವರ ಮೇಲೆ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ. ಲಕ್ನೋಗೆ ಸೌದಿ ಅರೇಬಿಯಾದಿಂದ ಆಗಮಿಸಿದ ಹಲವರ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, ಅವರನ್ನು 14 ದಿನಗಳ ಕಾಲ ಪ್ರತ್ಯೇಕ ಇರಿಸಲಾಗುತ್ತದೆ.

104ಕ್ಕೆ ಕರೆ ಮಾಡಿ
ಯಾವುದೇ ಆರೋಗ್ಯ ಸಂಬಂಧಿ ಮಾಹಿತಿಗೆ 104 ಆರೋಗ್ಯವಾಣಿಗೆ ಕರೆ ಮಾಡಿ ಖಚಿತ ಮಾಡಿಕೊಳ್ಳಿ ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ.

ಪ್ರಧಾನಿ ಮೋದಿ ಅಭಯ
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಪ್ರಧಾನಿ ಮೋದಿ ಉನ್ನತ ಮಟ್ಟದ ಪರಿಶೀಲನೆ ನಡೆಸಿದ್ದಾರೆ. ಬಳಿಕ ಟ್ವೀಟ್‌ ಮಾಡಿ, ವೈರಸ್‌ ಬಗ್ಗೆ ಅಂಜಿಕೆ, ಆತಂಕ ಬೇಡ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮನ್ವಯದಿಂದ ಸೋಂಕು ತಡೆಗೆ ಕೆಲಸ ಮಾಡುತ್ತಿವೆ. ಇತರ ದೇಶಗಳಿಂದ ಆಗಮಿಸುತ್ತಿರುವ ಪ್ರಯಾಣಿಕರ ಸ್ಕ್ರೀನಿಂಗ್‌ ನಡೆಸಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಆತಂಕ ಬೇಡ: ಯಡಿಯೂರಪ್ಪ
ಕೊರೊನಾ ವೈರಸ್‌ ಸೋಂಕು ಹರಡದಂತೆ ಅಗತ್ಯ ವೈದ್ಯಕೀಯ ನೆರವಿಗೆ ಸರಕಾರ ಸಜ್ಜುಗೊಂಡಿದೆ. ನಾಗರಿಕರೂ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಜನರು ಊಹಾಪೋಹಗಳಿಂದ ಭಯಭೀತರಾಗಬಾರದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಮೂವರು ಆಸ್ಪತ್ರೆಯಲ್ಲಿ
ಸದ್ಯ ಮೂರು ಮಂದಿ ಬೆಂಗಳೂರಿನ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಇರಾನ್‌ ಮೂಲಕ ದಂತ ವೈದ್ಯಕೀಯ ವಿದ್ಯಾರ್ಥಿ (ಈಗಾಗಲೇ ನೆಗೆಟಿವ್‌ ಬಂದಿದೆ), ಮಂಗಳವಾರ ವಿಮಾನ ನಿಲ್ದಾಣದಿಂದ ಶಂಕಿತ ಎಂದು ಗುರುತಿಸಿ ಕಳಿಸಲಾದ ಒಬ್ಬ ಮತ್ತು ಈಗಾಗಲೇ ಸೋಂಕುಪೀಡಿತನಾಗಿರುವ ಟೆಕ್ಕಿಯ ಸಹೋದ್ಯೋಗಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next