Advertisement
ಕೊರೊನಾ ವೈರಸ್‌ಗೆ ಕಡಿವಾಣ ಹಾಕಲು ಚೀನ ಸತತ ಪ್ರಯತ್ನ ನಡೆಸಿದರೂ ಅದು ಈಗಾಗಲೇ ಹಲವು ದೇಶಗಳಿಗೆ ವ್ಯಾಪಿಸಿಯಾಗಿದೆ. ಥಾಲಂಡ್‌ನಲ್ಲಿ 7, ಸಿಂಗಾಪುರ, ಆಸ್ಟ್ರೇಲಿಯಾಗಳಲ್ಲಿ ತಲಾ 4, ಜಪಾನ್, ದ. ಕೊರಿಯಾ, ಅಮೆರಿಕ, ಮಲೇಷ್ಯಾ, ಫ್ರಾನ್ಸ್ ಗಳಲ್ಲಿ ತಲಾ 3, ವಿಯೆಟ್ನಾಂ 2, ನೇಪಾಲ, ಶ್ರೀಲಂಕಾಗಳಲ್ಲಿ ತಲಾ 1 ಪ್ರಕರಣ ಪತ್ತೆ ಯಾಗಿವೆ. ಅದೃಷ್ಟವಶಾತ್ ಭಾರತದಲ್ಲಿ ಈವರೆಗೆ ಸೋಂಕು ತಗುಲಿರುವ ಪ್ರಕರಣ ದೃಢಪಟ್ಟಿಲ್ಲ.
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಚೀನದಿಂದ ಆಗಮಿಸುವ ಪ್ರಯಾಣಿಕರಿಗೆ ನೀಡಲಾಗುತ್ತಿದ್ದ ವೀಸಾ ಆನ್ ಅರೈವಲ್ ವ್ಯವಸ್ಥೆಯನ್ನು ಶ್ರೀಲಂಕಾ ಸರಕಾರ ಮಂಗಳವಾರ ರದ್ದು ಮಾಡಿದೆ. ಭಾರತೀಯರ ಸ್ಥಳಾಂತರಕ್ಕೆ ಸಿದ್ಧತೆ
ವೈರಸ್‌ನಿಂದಾಗಿ ಚೀನದ ಹಲವು ನಗರಗಳು ಬಹುತೇಕ ಸ್ತಬ್ಧವಾಗಿದ್ದು, ಅಲ್ಲಿರುವ ಭಾರತೀಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತೀಯರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ಮಂಗಳ ವಾರ ತಿಳಿಸಿದೆ. ಈ ಕುರಿತು ಬೀಜಿಂಗ್ ನಲ್ಲಿರುವ ಭಾರತೀಯ ರಾಯ ಭಾರ ಕಚೇರಿಯು ಚೀನ ಸರಕಾರದೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ ಎಂದಿದೆ. ವುಹಾನ್‌ನಲ್ಲಿರುವ ಭಾರತೀಯರನ್ನು ಕರೆ ತರಲು ವಿಮಾನವೊಂದನ್ನು ಕಳುಹಿ ಸುವುದಕ್ಕೂ ಸರಕಾರ ಮುಂದಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ. ಕೊರೊನಾ ವೈರಸ್‌ನ ಕೇಂದ್ರಬಿಂದುವಾದ ವುಹಾನ್ ನಗರದಲ್ಲಿ 250ರಿಂದ 300 ಭಾರತೀಯ ವಿದ್ಯಾರ್ಥಿಗಳಿದ್ದಾರೆ.
Related Articles
ಚೀನಕ್ಕೆ ಪ್ರಯಾಣ ಬೆಳೆಸಿ ಹಿಂದಿರುಗಿದ್ದ ಮೂವರನ್ನು ದಿಲ್ಲಿಯ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 24ರಿಂದ 48ರ ವಯೋಮಾನದ ಈ ಮೂವರಲ್ಲೂ ಕೊರೊನಾ ವೈರಸ್ ರೋಗ ಲಕ್ಷಣವಾದ ಶೀತ ಮತ್ತು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೊಂದೆಡೆ, ಚೀನದ ವುಹಾನ್‌ನಿಂದ ಆಗಮಿಸಿರುವ ಭಾರತೀಯ ವಿದ್ಯಾರ್ಥಿ ಮತ್ತು ಆತನ ತಾಯಿಯನ್ನು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಕೊರೊನಾಗೆ ಔಷಧ ಕಂಡುಹಿಡಿದ ತ.ನಾಡಿನ ವೈದ್ಯ?ತಮಿಳುನಾಡಿನ ಸಿದ್ಧ ವೈದ್ಯರೊಬ್ಬರು, ತಾನು ಕೊರೊನಾವೈರಸ್‌ಗೆ ಗಿಡಮೂಲಿಕೆಗಳಿಂದಲೇ ಔಷಧ ಕಂಡುಹಿಡಿದಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ. ಸಿದ್ಧ ಮತ್ತು ಆಯುರ್ವೇದ ವೈದ್ಯ ಪದ್ಧತಿಯಲ್ಲಿ 25 ವರ್ಷಗಳ ಅನುಭವ ಹೊಂದಿರುವ ಚೆನ್ನೈಯ ರತ್ನ ಸಿದ್ಧ ಆಸ್ಪತ್ರೆಯ ವೈದ್ಯರಾದ ಡಾ| ಥನಿಕಾಸಲಮ್ ವೇಣಿ ಅವರೇ ಔಷಧ ಕಂಡುಕೊಂಡವರು. ಗಿಡಮೂಲಿಕೆಗಳಿಂದಲೇ ನಾವು ಔಷಧಯೊಂದನ್ನು ತಯಾರಿಸಿದ್ದೇವೆ. ಅದು ಯಾವುದೇ ರೀತಿಯ ವೈರಲ್ ಜ್ವರವನ್ನು ವಾಸಿ ಮಾಡ ಬಲ್ಲದು. ಕೊರೊನಾ ಜ್ವರ ಬಂದವರಿಗೂ ಬಹುಅಂಗ ವೈಫಲ್ಯಕ್ಕೂ ನಮ್ಮ ಔಷಧ ಪರಿಣಾಮಕಾರಿಯಾದದ್ದು ಎಂದು ನಾವು ಚೀನ ಸರಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿಸಲು ಇಚ್ಛಿಸುತ್ತೇವೆ ಎಂದು ವೇಣಿ ಹೇಳಿದ್ದಾರೆ. ಜತೆಗೆ, ಚೀನ ಸರಕಾರ ಬಯಸಿದಲ್ಲಿ, ಕೂಡಲೇ ವುಹಾನ್‌ಗೆ ತೆರಳಿ ಔಷಧ ಒದಗಿಸಲು ಸಿದ್ಧ ಎಂದೂ ಅವರು ತಿಳಿಸಿದ್ದಾರೆ.