ಬೀದರ: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕು ಪಕ್ಕದ ತೆಲಂಗಾಣಕ್ಕೆ ಪ್ರವೇಶದಿಂದ ಗಡಿ ಜಿಲ್ಲೆ ಬೀದರನಲ್ಲಿ ರೋಗದ ಆತಂಕ ಹೆಚ್ಚಿದ್ದು, ಇದರ ಪರಿಣಾಮ ಬಣ್ಣದೋಕುಳಿ ಮೇಲೂ ಬಿದ್ದಿದೆ. ಇದರಿಂದ ನಗರದಲ್ಲಿ ಈ ಬಾರಿಯ ಹೋಳಿ ಆಚರಣೆಯು “ರಂಗು’ ಕಳೆದುಕೊಂಡಿದೆ. ಇತ್ತ ಬಂಡವಾಳ ಹಾಕಿರುವ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಭಾರತೀಯ ಹಬ್ಬಗಳಲ್ಲಿ ಹೋಳಿ ಆಚರಣೆ ವಿಭಿನ್ನ. ಮಹಾಮರಿ ಕೊರೊನಾ ಸೋಂಕು ಹೋಳಿಯನ್ನೂ ಆವರಿಸಿಕೊಂಡಿದೆ. ಜಿಲ್ಲೆಯ ಮೂವರಲ್ಲಿ ವೈರಸ್‌ನ ಶಂಕೆ ವ್ಯಕ್ತವಾಗಿತ್ತಾದರೂ ಪರೀಕ್ಷೆ ಫಲಿತಾಂಶದಲ್ಲಿ ನೆಗೆಟಿವ್ ಬಂದಿದೆ. ಆದರೂ ವೈರಸ್‌ನ ಆತಂಕ ಮಾತ್ರ ದೂರವಾಗಿಲ್ಲ.
ಹೋಳಿ ವೇಳೆ ಬಣ್ಣ ಎರಚಾಟದಿಂದ ಕೊರೊನಾ ವೈರಸ್ ಹರಡಿ, ಪ್ರಾಣಕ್ಕೆ ಮಾರಕವಾಗಲಿದೆ ಎಂಬ ಭೀತಿ ಹೆಚ್ಚಳದಿಂದ ಹಬ್ಬ ಆಚರಿಸಲು ಬಹಳ ಜನರು ಮುಂದೆ ಬರುತ್ತಿಲ್ಲ. ಹಬ್ಬ ಸರಳವಾಗಿ ಆಚರಣೆ ಆದರೆ ಉತ್ತಮ ಎಂಬ ಸರ್ಕಾರ, ಆರೋಗ್ಯ ಇಲಾಖೆಯ ಸಲಹೆ ಮತ್ತು ಸಾಮಾಜಿ ಜಾಲತಾಣದಲ್ಲಿನ ಸಂದೇಶಗಳಿಂದ ಹೋಳಿ ಆಚರಣೆಗೆ ಬ್ರೇಕ್ ಬೀಳುವಂತೆ ಮಾಡಿದೆ. ಇದರಿಂದ ಬಣ್ಣದ ಅಂಗಡಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ವ್ಯಾಪಾರ ಕುಸಿದಿದ್ದು, ನಗರದಲ್ಲಿ ಓಕುಳಿ ಆಚರಣೆಯ ಚಿತ್ರಣವೇ ಮಾಯವಾಗಿದೆ.
ಕೊರೊನಾ ಭೀತಿ ನಡುವೆಯೂ ಮಾರುಕಟ್ಟೆಯಲ್ಲಿ ವಿವಿಧ ಬಣ್ಣಗಳು, ಬಗೆ ಬಗೆಯ ಪಿಚಕಾರಿಗಳು ಬಂದಿವೆ. ನಗರದ ಅಂಬೇಡ್ಕರ್ ವೃತ್ತ, ಮಡಿವಾಳ ವೃತ್ತ, ಮೋಹನ ಮಾರ್ಕೆಟ್, ಓಲ್ಡ್ ಸಿಟಿ, ಗುಂಪಾ, ಕೆಇಬಿ ರಸ್ತೆ ಸೇರಿದಂತೆ ಹಲವೆಡೆ ಮಳಿಗೆಗಳು ತಲೆ ಎತ್ತಿವೆ. 10ರಿಂದ 100 ರೂ. ವರೆಗೆ ಬಣ್ಣದ ಪ್ಯಾಕೆಟ್ ಗಳು, 20 ರಿಂದ 800 ರೂ. ವರೆಗೆ ಪಿಚಕಾರಿಗಳು ಮಾರಾಟಕ್ಕಿವೆ. ಆದರೆ, ಮಳಿಗೆಗಳಲ್ಲಿ ಖರೀದಿ ಇಲ್ಲದೇ ಬಿಕೋ ಎನ್ನುತ್ತಿದ್ದವು.
ಕೊರೊನಾ ಆವರಿಸಿರುವ ಚೀನಾದಿಂದ ಹಬ್ಬಕ್ಕೆ ಬಣ್ಣ ಮತ್ತು ಪಿಚಕಾರಿಗಳು ಆಮದು ಆಗುತ್ತವೆ ಮತ್ತು ಇದರಿಂದ ರೋಗ ಹರಡಲಿದೆ ಎಂಬ ವದಂತಿಯಿಂದ ಹೋಳಿಯಾಟಕ್ಕೆ ಬಹಳ ಜನ ಹಿಂಜರಿಯುತ್ತಿದ್ದಾರೆ. ಆರೋಗ್ಯ ದೃಷ್ಟಿಯಿಂದ ಜನ ಸಮೂಹದಲ್ಲಿ ಸೇರದೆ ಔಪಚಾರಿಕವಾಗಿ ಮನೆಯಲ್ಲೇ ಹಬ್ಬ ಆಚರಣೆಗೆ ಸಾರ್ವಜನಿಕರು ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಣ್ಣ, ಪಿಚಕಾರಿಗಳ ಮಾರಾಟ ಅರ್ಧದಷ್ಟು ಕುಸಿದಿದೆ. ಬಂಡವಾಳ ಹಾಕಿರುವ ವ್ಯಾಪಾರಿಗಳು ಖರೀದಿ ಇಲ್ಲದೇ ತಲೆ ಮೇಲೆ ಕೈ ಹೊದ್ದು ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬಣ್ಣದಾಟದಂದು ನಗರದ ಗುರುದ್ವಾರ ಪರಿಸರದಲ್ಲಿ ಪ್ರತಿ ವರ್ಷ ಯುವಕರ ತಂಡದಿಂದ ಸಂಗೀತೋತ್ಸವ ಜತೆಗೆ ಹೋಳಿ ಆಚರಣೆ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಕೊರೊನಾ ವೈರಸ್‌ನ ಭೀತಿಯ ಪರಿಣಾಮ ಆಚರಣೆಯನ್ನು ಕೈ ಬಿಡಲಾಗಿದೆ. ಬಣ್ಣದ ಬದಲು ಕುಂಕುಮ- ಅರಶಿಣ ಬಳಸಿ ಹಬ್ಬ ಆಚರಿಸಿ ಎಂಬ ಸಲಹೆಗಳು ವ್ಯಕ್ತವಾಗಿವೆ.
ಬೀದರ ಜಿಲ್ಲೆಯಲ್ಲಿ ಕೊರೊನಾ ವೈರಸ್ ಆತಂಕ ಬೇಡ. ಆದರೂ ಹೋಳಿ ಹಬ್ಬ ಈ ಬಾರಿ ಸರಳ, ಆರೋಗ್ಯಕರ ಆಚರಣೆ ಆಗಲಿ. ಕೆಮಿಕಲ್ ಯುಕ್ತ ಬಣ್ಣಗಳ ಬದಲು ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಬೇಕು. ಸಣ್ಣ ಪ್ರಮಾಣದಲ್ಲಿ ಬಳಸಿದರೆ ಉತ್ತಮ. ಜನನಿಬಿಡ ಪ್ರದೇಶದಲ್ಲಿ ಸೇರಬಾರದು. ಹ್ಯಾಂಡ್ ಶೇಕ್ ಮಾಡಬಾರದು. ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು.
-ಡಾ| ವಿ.ಜಿ. ರೆಡ್ಡಿ, ಡಿಎಚ್‌ಒ, ಬೀದರ
-ಶಶಿಕಾಂತ ಬಂಬುಳಗೆ