Advertisement

“ಕೊರೊನಾ ರಾಜಕೀಯ’ಟ್ವೀಟ್‌ ಮೂಲಕ ವಾಗ್ವಾದ

12:44 AM Mar 16, 2020 | Lakshmi GovindaRaj |

ಬೆಂಗಳೂರು: ಕೊರೊನಾ ವೈರಸ್‌ ವಿರುದ್ಧ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವ ವಿಚಾರದಲ್ಲಿನ ಗೊಂದಲ ಇದೀಗ ರಾಜಕೀಯ ನಾಯಕರ ಕೆಸರೆರಚಾಟಕ್ಕೂ ಕಾರಣವಾಗಿದೆ. ಕೊರೊನಾ ಸೋಂಕು ನಿಯಂತ್ರಣ ಕುರಿತು ಜನರಿಗೆ ಮಾಹಿತಿ ನೀಡುವ ವಿಚಾರದಲ್ಲಿನ ಗೊಂದಲದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಇದಕ್ಕೆ ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಟ್ವಿಟ್ಟರ್‌ನಲ್ಲೇ ತಿರುಗೇಟು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಮಧ್ಯಾಹ್ನ ಟ್ವೀಟ್‌ ಮಾಡಿದ್ದು, “ಕೊರೊನಾ ವೈರಸ್‌ ವಿರುದ್ಧ ಕೈಗೊಂಡ ಕ್ರಮಗಳ ಕುರಿತ ಸುದ್ದಿಯನ್ನು ಜನರಿಗೆ ತಿಳಿಸುವ ವಿಚಾರದಲ್ಲಿ ಸರ್ಕಾರದಲ್ಲಿ ಎರಡು ಧ್ರುವಗಳು ಸೃಷ್ಟಿಯಾದಂತಿವೆ.

ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಒಮ್ಮತದಿಂದ ಕಾರ್ಯ ನಿರ್ವಹಿಸಲಿ. ಪರಸ್ಪರರ ನಡುವೆ ಸಹಕಾರವಿರಲಿ. ಇದು ಪ್ರಚಾರ ಪಡೆಯುವ ಪ್ರಹಸನವಾಗಬಾರದು. ಜನರಲ್ಲಿ ಗೊಂದಲ ಮೂಡದಿರಲಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್‌ ಮೂಲಕವೇ ತಿರುಗೇಟು ನೀಡಿದ್ದಾರೆ.

“ಕೊರೊನಾ ನಿರ್ವಹಣೆ ವಿಚಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿಯವರ ಬಾಲಿಷ ಹೇಳಿಕೆ ಗಮನಿಸಿದ್ದೇನೆ. ವಿಪತ್ತನ್ನು ಎದುರಿಸಲು ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆದೇಶದಂತೆ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ಆರೋಗ್ಯ ಸಚಿವ ಶ್ರೀರಾಮುಲು ಮತ್ತು ನಾನು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ.

“ಜನರಲ್ಲಿ ಕೊರೊನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸುವುದು, ಸೋಂಕಿತರ ಪತ್ತೆಗೆ ಸರ್ವ ಪ್ರಯತ್ನ, ಸೋಂಕಿತರ ಚಿಕಿತ್ಸೆಗೆ ಎಲ್ಲ ಸೌಕರ್ಯ, ಪ್ರತ್ಯೇಕ ನಿಗಾ ಘಟಕಗಳು, ತಜ್ಞ ವೈದ್ಯರು ಮತ್ತು ಇತರೆ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದು, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಇದನ್ನು ಜನರೂ ಮೆಚ್ಚಿಕೊಂಡಿದ್ದಾರೆ’ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

Advertisement

“ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಲ್ಲಿ ನನ್ನ ವಿನಂತಿಯೇನೆಂದರೆ, ಈ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ರಾಜಕೀಯ ಬದಿಗಿಟ್ಟು, ಜಾಗೃತಿ ಮೂಡಿಸುವ ಕೆಲಸದಲ್ಲಿ ಆದಷ್ಟು ಸಹಕರಿಸಿ. ತಾವು ಕೂಡ ಎಚ್ಚರಿಕೆಯಿಂದ ಇದ್ದು ಸುರಕ್ಷಿತವಾಗಿರಿ. ಇಂತಹ ಸಂದರ್ಭಗಳಲ್ಲಿ ಜನರಲ್ಲಿ ಆತಂಕ ಹೆಚ್ಚಿಸುವ ಯಾವುದೇ ಪ್ರಯತ್ನ ಅಪೇಕ್ಷಣೀಯವಲ್ಲ’ ಎಂದು ತಿಳಿಸಿದ್ದಾರೆ.

ಖಾಲಿ ಕಟ್ಟಡ ಬಳಸಿಕೊಳ್ಳಿ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವಿಟ್ಟರ್‌ನಲ್ಲೇ ಇನ್ನಷ್ಟು ವಿಚಾರ ಪ್ರಸ್ತಾಪಿಸಿ ಕೆಲ ಸಲಹೆ ನೀಡಿದ್ದಾರೆ. “ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದೇ ಮುಂಜಾಗ್ರತಾ ಕ್ರಮ. ಇದಕ್ಕಾಗಿ ಕೆಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗ ತೆರೆದಿರುವುದಾಗಿ ಸರ್ಕಾರ ಹೇಳುತ್ತಿದೆ.

ಆದರೆ ಇತರ ರೋಗಿಗಳ ಜೊತೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರಿಯೇ? ಇದರ ಬದಲು ಖಾಲಿ ಉಳಿದಿರುವ ಸರ್ಕಾರಿ ಕಟ್ಟಡಗಳನ್ನು ಇದಕ್ಕಾಗಿ ಬಳಸಿಕೊಳ್ಳಬೇಕು’ ಎಂದು ಹೇಳಿದ್ದಾರೆ. “ರಾಜ್ಯದಲ್ಲಿ ಹಲವು ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು ಖಾಲಿ ಉಳಿದಿವೆ. ಅವುಗಳನ್ನು ಕೊರೊನಾ ವೈರಸ್‌ ಸೋಂಕಿತರಿಗೆ ಚಿಕಿತ್ಸೆ ನೀಡುವ “ಕ್ವಾರೆಂಟೈನ್‌ ಕೇಂದ್ರ’ಗಳಾಗಿ ಪರಿವರ್ತಿಸಬೇಕು.

ಜನನಿಬಿಡ ಪ್ರದೇಶಗಳಿಂದ ದೂರದಲ್ಲಿ ಕ್ವಾರೆಂಟೈನ್‌ ಕೇಂದ್ರ ತೆರೆಯಬೇಕು. ಸೋಂಕಿತರ ರಕ್ತ ಮಾದರಿ ಸಂಗ್ರಹಕ್ಕೆ ಅವರಿರುವಲ್ಲಿಯೇ ವ್ಯವಸ್ಥೆಯಾಗಬೇಕು. ಸುರಕ್ಷತಾ ಕ್ರಮಗಳನ್ನು ವಿವರಿಸುವ ವಿಚಾರ ಪ್ರಚಾರದ ಸರಕಾಗಬಾರದು. ಹಾಗೆ ಆಗಿದ್ದೇ ಆದರೆ ಜನರಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಆತಂಕ ಸಮೂಹ ಸನ್ನಿಯಾಗಿ ಜನಜೀವನದ ಮೇಲೆ ನೇತ್ಯಾತ್ಮಕ ಪರಿಣಾಮಗಳು ಉಂಟಾಗದಿರಲಿ’ ಎಂದು ಟ್ವಿಟ್ಟರ್‌ನಲ್ಲಿ ಆಶಿಸಿದ್ದಾರೆ.

ಶ್ರೀರಾಮುಲು ಟಾಂಗ್‌: ಸಚಿವ ಶ್ರೀರಾಮುಲು ಅವರು ಟ್ವಿಟ್ಟರ್‌ ಮೂಲಕವೇ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ. “ಕುಮಾರಸ್ವಾಮಿಯವರೇ, ನಾನು ಹಾಗೂ ಸುಧಾಕರ್‌ ಅವರು ಜೊತೆ ಜೊತೆಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ.

ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಪರಸ್ಪರ ಚರ್ಚಿಸಿ ಒಮ್ಮತದಿಂದ ತೆಗೆದುಕೊಳ್ಳುತ್ತಿದ್ದೇವೆ. ಹೆಚ್ಚಾಗಿ ಗೊಂದಲ್ಲಿರುವ ತಾವು, ಜನರನ್ನು ಗೊಂದಲಕ್ಕೆ ದೂಡುವ ಕೆಲಸಕ್ಕೆ ಕೈ ಹಾಕದಿರಿ ಎಂದು ವಿನಂತಿಸುತ್ತೇನೆ’ ಎಂದು ಶ್ರೀರಾಮುಲು ಟ್ವೀಟ್‌ನಲ್ಲಿ ಟಾಂಗ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next