ಬಾಗಲಕೋಟೆ: ಚೀನಾ ದೇಶವನ್ನೇ ತಲ್ಲಣಗೊಳಿಸಿದ ಕೊರೊನಾ ಸೋಂಕು ಭಾರತ ದೇಶಕ್ಕೂ ಹಬ್ಬಿದ್ದು, ಪಕ್ಕದ ಹೈದ್ರಾಬಾದ್‌ನಲ್ಲಿ ಹಲವರಿಗೆ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲೂ ಅಲರ್ಟ್ ಘೋಷಿಸಲಾಗಿದೆ.
ಹೌದು, ಜಿಲ್ಲೆಯಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳಿದ್ದು, ಈ ತಾಣಗಳಿಗೆ ದೇಶ ಅಷ್ಟೇ ಅಲ್ಲ, ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಇನ್ನು ಬಾಗಲಕೋಟೆ ಮತ್ತು ಬಾದಾಮಿಯ ಕೆಲವು ಹೊಟೇಲ್‌ಗಳಲ್ಲಿ ಉತ್ತರ ಭಾರತ ಸಹಿತ ಬೇರೆ ಬೇರೆ ಕಡೆಯಿಂದ ಬಂದಿರುವ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅವರೆಲ್ಲ ಚೀನಾ ದೇಶಕ್ಕೆ ಹೊಂದಿಕೊಂಡಿರುವ ಭಾರತದ ವಿವಿಧ ರಾಜ್ಯದವರಾಗಿದ್ದಾರೆ. ಹೀಗಾಗಿ ಅವರಿಗೂ ಸದ್ಯ ತಮ್ಮ ರಾಜ್ಯಕ್ಕೆ ಹೋಗಿ ಬರದಂತೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಲಕ್ಷಾಂತರ ಪ್ರವಾಸಿಗರು: ಜಿಲ್ಲೆಯ ಪ್ರವಾಸಿ ತಾಣಗಳಿಗೆ ದೇಶದ ನಾನಾ ರಾಜ್ಯಗಳು ಸಹಿತ ಆಸ್ಟ್ರೇಲಿಯಾ, ರಷ್ಯಾ, ಅಮೆರಿಕಾ, ಬ್ರಿಟನ್, ಫ್ರಾನ್ಸ್ ಸೇರಿದಂತೆ ಹಲವು ದೇಶಗಳ ಪ್ರವಾಸಿರು ಭೇಟಿ ನೀಡುತ್ತಾರೆ. 2015ರಲ್ಲಿ 26,94,115 ಜನ, 2016ರಲ್ಲಿ 31,25,803, 2017ರಲ್ಲಿ 25,07,799 ಹಾಗೂ 2018ರಲ್ಲಿ 35,30,584 ಸೇರಿದಂತೆ ಒಟ್ಟು 93,12,943 ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದಾರೆ. 2019ರ ಜನವರಿವರೆಗೆ 12,95,412 ಜನ ಭೇಟಿ ನೀಡಿದ್ದು, ಒಟ್ಟಾರೆ ಭೇಟಿ ನೀಡಿದ ಪ್ರವಾಸಿಗರಲ್ಲಿ ಶೇ.12ರಷ್ಟು ವಿದೇಶಿಗರೂ ಒಳಗೊಂಡಿದ್ದಾರೆ. ಹೀಗಾಗಿ ಹೊಸ ವರ್ಷದ ಆರಂಭದಲ್ಲೇ ಕೊರೋನಾ ಸೋಂಕು ರೋಗದ ಭೀತಿ ಎಲ್ಲೆಡೆ ಕಾಡುತ್ತಿದ್ದು, ಕಳೆದ ಒಂದು ತಿಂಗಳಿಂದ ವಿದೇಶಿ ಪ್ರವಾಸಿಗರು ಬರುವ ಸಂಖ್ಯೆಯೂ ಕಡಿಮೆಯಾಗಿದೆ ಎನ್ನಲಾಗಿದೆ.
ಪ್ರವಾಸಿ ತಾಣಗಳಲ್ಲಿ ಹೈಅಲರ್ಟ್: ಪಟ್ಟದಕಲ್ಲ, ವಿಶ್ವ ಪಾರಂಪರಿಕ (ಯುನೆಸ್ಕೋ) ತಾಣಗಳ ಪಟ್ಟಿಯಲ್ಲಿದ್ದು, ಇದೊಂದು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿದೆ. ಇನ್ನು ಬಾದಾಮಿ, ಐಹೊಳೆ, ಕೂಡಲಸಂಗಮ ರಾಷ್ಟ್ರೀಯ ಪ್ರವಾಸಿ ತಾಣಗಳಾಗಿದ್ದು, ಎಲ್ಲೆಡೆ ವಿದೇಶಿ ಪ್ರವಾಸಿಗರೂ ಬರುತ್ತಾರೆ. ಹೀಗಾಗಿ ಪ್ರವಾಸಿ ತಾಣಗಳಲ್ಲಿ ಇರುವ ಪ್ರವಾಸಿ ಮಾರ್ಗದರ್ಶಿಗಳು (ಸ್ಥಳೀಯ ಗೈಡ್‌ಗಳು), ಸಿಬ್ಬಂದಿ ಹಾಗೂ ಜನನಿಬಿಡವಾದ ಸ್ಥಳೀಯ ಪ್ರದೇಶಗಳಲ್ಲಿ ಈ ಕುರಿತು ಜಾಗೃತಿಯಿಂದಿರಲು ನಿರ್ದೇಶನ ನೀಡಲಾಗಿದೆ.
ಕೊರೊನಾ ಸಾಂಕ್ರಾಮಿಕ ರೋಗದ ಕುರಿತು ನಮಗೆ ಮಾಹಿತಿ ಇಲ್ಲ. ನಮ್ಮಲ್ಲಿ ಅಂತಹ ರೋಗದ ಲಕ್ಷಣಗಳೂ ಕಂಡು ಬಂದಿಲ್ಲ. ನಮ್ಮ ಪ್ರವಾಸಿ ತಾಣಗಳಿಗೆ ಚೀನಾ, ನೇಪಾಳ ಕಡೆಯಿಂದ ಪ್ರವಾಸಿಗರೂ ಬರುವುದಿಲ್ಲ. ರಷ್ಯಾ, ಫ್ರಾನ್ಸ್, ಆಸ್ಟ್ರೇಲಿಯಾ, ಅಮೆರಿಕದಿಂದ ಹೆಚ್ಚು ವಿದೇಶಿಗರು ಬರುತ್ತಾರೆ. ಆದರೂ, ಅಲರ್ಟ್ ಆಗಿರುವುದು ಉತ್ತಮ
. –ಅಶೋಕ ಮಾಯಾಚಾರಿ, ಹಿರಿಯ ಪ್ರವಾಸಿ -ಮಾರ್ಗದರ್ಶಿ, ಐಹೊಳೆ
ಪ್ರವಾಸಿ ತಾಣಗಳಿಗೆ ವಿದೇಶಿ ಪ್ರವಾಸಿಗರು ಹೆಚ್ಚು ಬರುವ ಕಾರಣ, ಸ್ವಾಭಾವಿಕವಾಗಿ ಎಚ್ಚರಿಕೆಯಿಂದ ಇರಲು ಆರೋಗ್ಯ ಇಲಾಖೆಯಿಂದ ತಿಳವಳಿಕೆ ನೀಡಲಾಗಿದೆ. ಸಧ್ಯ ಅಂತಹ ಭೀತಿಯೂ ನಮ್ಮಲ್ಲಿ ಕಂಡು ಬಂದಿಲ್ಲ. ಆರೋಗ್ಯ ಇಲಾಖೆಯಿಂದ
ಜಿಲ್ಲಾದ್ಯಂತ ಜಾಗೃತಿ ನೀಡಿದ್ದು, ಪ್ರವಾಸಿ ತಾಣಗಳಲ್ಲಿ ಸ್ವಲ್ಪ ಹೆಚ್ಚಿನ ಕಾಳಜಿಯೊಂದಿಗೆ ತಿಳಿವಳಿಕೆ ನೀಡಲಾಗುತ್ತಿದೆ. –
ಮೈಬೂಬಿ, ಪ್ರಭಾರಿ ಉಪ ನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ