Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ತುರ್ತು ಸಭೆ ನಡೆಸಿ, ರಾಜ್ಯದಲ್ಲಿ ಯಾರು ಕೂಡ ಈ ವೈರಸ್‌ನಿಂದ ಬಾಧಿತರಾದ ಮಾಹಿತಿ ಇದುವರೆಗೆ ಇಲ್ಲ. ಆದರೂ ದ.ಕ. ಜಿಲ್ಲೆಯ ಪಕ್ಕದ ಕೇರಳ ರಾಜ್ಯದಲ್ಲಿ ವೈರಸ್ ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದರು. ಸಾರ್ವಜನಿಕರು ಯಾವುದೇ ಸಂಶಯ, ಮಾಹಿತಿ ಹಾಗೂ ನೆರವಿಗೆ ಆರೋಗ್ಯ ಇಲಾಖೆಯ ಸಹಾಯ ವಾಣಿ 104ಕ್ಕೆ ಕರೆ ಮಾಡಬಹುದು. ಜಿಲ್ಲಾಡಳಿತವು ಸಂಪೂರ್ಣ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಫೆ. 4ರಂದು ಎನ್‌ಎಂಪಿಟಿಗೆ ವಿದೇಶಿ ಪ್ರವಾಸಿಗರ ಹಡಗು ಬಂದಿದ್ದು, ಅದರಲ್ಲಿದ್ದ ಚೀನದ ಮೂವರು ನಾಗರಿಕರಿಗೆ ಹೊರಗೆ ಬರಲು ಅವಕಾಶ ನೀಡಿಲ್ಲ ಎಂದು ಎನ್‌ಎಂಪಿಟಿ ಅಧಿಕಾರಿಗಳು ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಮಾತನಾಡಿ, ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಚಿಕಿತ್ಸೆಗಾಗಿ 10 ವಿಶೇಷ ಹಾಸಿಗೆ ಸಿದ್ಧತೆಯಲ್ಲಿಡಲಾಗಿದೆ. ದಿನದ 24 ಗಂಟೆಯೂ ಇದರ ನಿರ್ವಹಣೆಗೆ ವೈದ್ಯರಿಗೆ, ಸಿಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದರು.
Related Articles
Advertisement
ಫಿಲಿಫೈನ್ಸ್ ದಂಪತಿ ಬಿಡುಗಡೆಜ್ವರ, ತಲೆನೋವಿಗೆ ಚಿಕಿತ್ಸೆ ಪಡೆಯಲು ಸೋಮವಾರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಫಿಲಿಫೈನ್ಸ್‌ನ ದಂಪತಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶೀತ, ತಲೆನೋವಿಗೆ ದಾಖಲಾಗಿದ್ದ ಕೇರಳ ಮೂಲದ ಜಪಾನ್ ವಿದ್ಯಾರ್ಥಿ ಮಂಗಳವಾರವೇ ಬಿಡುಗಡೆ ಯಾಗಿದ್ದರು. ಜನಸಾಮಾನ್ಯರು ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ನವೀನ್ ಚಂದ್ರ ಕುಲಾಲ್ ತಿಳಿಸಿದ್ದಾರೆ. 1,600ಕ್ಕೂ ಹೆಚ್ಚು ಮಂದಿಯ ತಪಾಸಣೆ
ಕೇರಳದಲ್ಲಿ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮುನ್ನಚ್ಚರಿಕಾ ಕ್ರಮಗಳು ಇನ್ನಷ್ಟು ಹೆಚ್ಚಾಗಿದ್ದು, ಬುಧವಾರ ಸಂಜೆಯವರೆಗೆ ವಿಮಾನ ನಿಲ್ದಾಣ ಮತ್ತು ಎನ್‌ಎಂಪಿಟಿಯಲ್ಲಿ 1,600ಕ್ಕೂ ಹೆಚ್ಚು ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ಮಧ್ಯಪ್ರಾಚ್ಯ ಮತ್ತಿತರ ಕಡೆಗಳಿಂದ ಮಂಗಳೂರಿಗೆ ಆಗಮಿಸಿದ 405ಕ್ಕೂ ಹೆಚ್ಚು ಮಂದಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಜೆಯಿಂದ ಬುಧವಾರ ಸಂಜೆಯವರೆಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಎನ್‌ಎಂಪಿಟಿಗೆ ಬಂದ ಕ್ರೂಸ್‌ನಲ್ಲಿ ಈಗಾಗಲೇ 1,200 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಫಲಕ, ಎಲ್‌ಇಡಿ ಪರದೆ ಅಳವಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಆತಂಕವಿಲ್ಲ: ಡಾ| ಸೂಡ
ಉಡುಪಿ: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸದ್ಯದ ಸ್ಥಿತಿಯಲ್ಲಿ ಯಾವ ಆತಂಕಗಳು ಜಿಲ್ಲೆಯಲ್ಲಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ. ಸೋಂಕು ತಡೆ ಹಾಗೂ ನಿಯಂತ್ರಣಕ್ಕೆ ಜಿಲ್ಲಾ ಕೇಂದ್ರ ಹಾಗೂ ಮೂರು ತಾಲೂಕುಗಳಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತೆಯರು, ಸಿಬಂದಿ, ಜಾಗೃತಿ ಕಾರ್ಯಪಡೆ ಸಮಿತಿಯವರು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲೆಡೆ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಕಾಸರಗೋಡು ಜಿಲ್ಲೆಗೆ ಕಲ್ಲಿಕೋಟೆ ತಜ್ಞರ ತಂಡ
ಕಾಸರಗೋಡು: ಕಾಂಞಂಗಾಡ್‌ನ ವಿದ್ಯಾರ್ಥಿಯೋರ್ವನಿಗೆ ಕೊರೊನಾ ಸೋಂಕು ದೃಢೀಕರಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ತಜ್ಞ ತಂಡ ಬುಧವಾರ ಬೆಳಗ್ಗೆ ಕಾಂಞಂಗಾಡ್‌ನಲ್ಲಿರುವ ಸರಕಾರಿ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದೆ. ಇದೇ ವೇಳೆ ಜಿಲ್ಲೆಯಲ್ಲಿ ಚೀನದಿಂದ ಬಂದ 94 ಮಂದಿಯನ್ನು ನಿಗಾ ಇಡಲಾಗಿದೆ.