Advertisement
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಳಗ್ಗಿನಿಂದ ಸಂಜೆವರೆಗೆ ಆರೋಗ್ಯ ಇಲಾಖೆ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಲಾಗಿತ್ತು. ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ಏನೆಲ್ಲ ಸಿದ್ಧತೆ ನಡೆಸಬೇಕು ಹಾಗೂ ಜನರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಲಾಗಿದೆ.
ಕೊರೊನಾ ಹರಡದಂತೆ ಮುಂಜಾ ಗ್ರತಾ ಕ್ರಮವಾಗಿ ಔದ್ಯೋಗಿಕ ಸಂಸ್ಥೆಗಳಲ್ಲಿ, ಜನಜಂಗುಳಿ ಇರುವ ಸ್ಥಳಗಳಲ್ಲಿ ಜನರು ಮಾಸ್ಕ್ ಹಾಕಿಯೇ ಓಡಾಡುತ್ತಿದ್ದಾರೆ. ಬೇಡಿಕೆ ಹೆಚ್ಚಾಗಿರುವುದರಿಂದ ಮಾಸ್ಕ್ಗೆ ಕೊರತೆಯಾಗಿದೆ. ಮೆಡಿಕಲ್ ಶಾಪ್‌ಗ್ಳಲ್ಲಿ ಮಾಸ್ಕ್ಗಳ ಅಲಭ್ಯತೆಯಿಂದಾಗಿ ಮುಂಗಡ ಬುಕ್ಕಿಂಗ್ ಆರಂಭವಾಗಿದೆ.
Related Articles
Advertisement
ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬಂದಿಗೆ ಬೇಕಾಗುವಷ್ಟು ಮಾಸ್ಕ್ ಲಭ್ಯವಿದೆ. ಅವುಗಳು ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುವವರಿಗೆ ಅಗತ್ಯ ವಾಗಿರುವುದರಿಂದ ಸಾರ್ವಜನಿಕರಿಗೆ ಕೊಡುವಂತಿಲ್ಲ; ಜನತೆ ಮೆಡಿಕಲ್‌ಗಳಿಂದಲೇ ಖರೀದಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಮರುಬಳಕೆಯ ಮಾಸ್ಕ್ಮೆಡಿಕಲ್ಗಳಲ್ಲಿ ಲಭ್ಯವಿರುವ ಎನ್95 ಮಾಸ್ಕ್ ಹೆಚ್ಚಿನ ಗುಣಮಟ್ಟ ಹೊಂದಿದ್ದು, ಒಮ್ಮೆ ಖರೀದಿಸಿದರೆ ಸುಧೀರ್ಘ ಅವಧಿಗೆ ಬಳಕೆ ಮಾಡ ಬಹುದು. ನೀರಿನಲ್ಲಿ ತೊಳೆಯುವ ಹಾಗಿಲ್ಲ. ವಿವಿಧ ದರಗಳಲ್ಲಿ ಅವು ಲಭ್ಯವಿವೆ. ಆದರೆ ಮೂರು ಲೇಯರ್ ಮಾಸ್ಕ್ಗಳನ್ನು ಗರಿಷ್ಠ ಒಂದು ವಾರ ಕಾಲ ಮಾತ್ರ ಬಳಕೆ ಮಾಡಬಹುದು ಎಂದು ಮೆಡಿಕಲ್ ಅಂಗಡಿಗಳ ಸಿಬಂದಿ ಹೇಳುತ್ತಾರೆ. ಹೆಚ್ಚು ವಸೂಲಿ ಮಾಡಿದರೆ ದೂರು ನೀಡಿ
ಜನ ಮಾಸ್ಕ್ಗೆ ಬೇಡಿಕೆ ಇಡುತ್ತಿರುವ ಸಂದರ್ಭವನ್ನು ಬಳಸಿಕೊಂಡು ಕೆಲವು ಮೆಡಿಕಲ್ ಶಾಪ್‌ಗ್ಳಲ್ಲಿ ಮಾಸ್ಕ್ನ ದರವನ್ನು ವಿಪರೀತ ಎಂಬಂತೆ ಏರಿಸಲಾಗಿದೆ. ಅಂತಹ ಸಂಸ್ಥೆಗಳಿಂದ ಬಿಲ್ ಪಡೆದುಕೊಂಡು ಸಂಸ್ಥೆಯ ಹೆಸರು ಸಹಿತ ಜಿಲ್ಲಾ ಔಷಧ ನಿಯಂತ್ರಣ ವಿಭಾಗಕ್ಕೆ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಎಸಿ ಬಸ್: ಪ್ರಯಾಣಿಕರ ಸಂಖ್ಯೆ ಇಳಿಕೆ
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಸಂಸ್ಥೆಗಳ ಹವಾನಿಯಂತ್ರಿತ ದೂರ ಪ್ರಯಾಣದ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಎಸಿ ಬಸ್‌ಗಳಲ್ಲಿ ವೈರಸ್ ಬೇಗನೆ ಹರಡುವ ಅಪಾಯ ಹೆಚ್ಚು ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಅಂತಹ ಬಸ್‌ಗಳಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಎಸಿ (ಪ್ರೀಮಿಯರ್) ಬಸ್‌ಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಸುಮಾರು ಶೇ. 50ರಷ್ಟು ಕುಸಿದಿದೆ. ಕೆಎಸ್ಸಾರ್ಟಿಸಿ ಸಿಬಂದಿಗೆ ಮಾಸ್ಕ್
ಕೆಎಸ್‌ಆರ್‌ಟಿಸಿಯ ಚಾಲಕರು, ನಿರ್ವಾಹಕರು ಸೇರಿದಂತೆ ಎಲ್ಲ 2,400 ಮಂದಿ ಸಿಬಂದಿಗೂ ಮಾಸ್ಕ್ ವಿತರಿಸಲಾಗುವುದು. ಮಂಗಳವಾರದವರೆಗೆ ಶೇ. 50ರಷ್ಟು ಮಂದಿಗೆ ಮಾಸ್ಕ್ ವಿತರಿಸಲಾಗಿದೆ. ಚಾಲಕರು, ನಿರ್ವಾಹಕರಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ. ಎಲ್ಲ ಬಸ್‌ಗಳಲ್ಲಿಯೂ ವೈರಸ್ ನಿವಾರಕ ಔಷಧ ಸಿಂಪಡಿಸಲಾಗುತ್ತಿದೆ. ಎಲ್ಲ ಬಸ್ ನಿಲ್ದಾಣಗಳಲ್ಲಿ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೂ ಮುನ್ನೆಚ್ಚರಿಕಾ ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ಅರುಣ್ ತಿಳಿಸಿದ್ದಾರೆ. ವೆನ್ಲಾಕ್ ನಲ್ಲಿ ಪ್ರತ್ಯೇಕ ವಾರ್ಡ್
ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು, ಅವರ ಮೇಲೆ ನಿಗಾ ಇಡಲು ವೆನ್ಲಾಕ್ ಆಸ್ಪತ್ರೆಯಲ್ಲಿ ಒಟ್ಟು 10 ಪ್ರತ್ಯೇಕ ಕೊಠಡಿಗಳನ್ನು ಸಿದ್ಧಗೊಳಿಸಲಾಗಿದೆ. ಸ್ಪೆಷಲ್ ವಾರ್ಡ್ ಮತ್ತು ಸುಟ್ಟ ಗಾಯಗಳ ಚಿಕಿತ್ಸಾ ವಾರ್ಡನ್ನು ಕೊರೊನಾ ಸೋಂಕಿತರಿಗಾಗಿ ಮೀಸಲಿಡಲಾಗಿದೆ. ಇವೆರಡೂ ವಾರ್ಡ್‌ಗಳು ಕೂಡ ಜನರಲ್ ವಾರ್ಡ್‌ಗಿಂತ ಪ್ರತ್ಯೇಕವಾಗಿವೆ. ಸಹಾಯವಾಣಿಗೆ ಕರೆ ಮಾಡಿ
ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲಿ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಗಂಟಲು ನೋವು ಕಂಡುಬಂದಲ್ಲಿ ಅಥವಾ ಯಾವುದೇ ಮಾಹಿತಿ ಬೇಕಾದಲ್ಲಿ ತತ್‌ಕ್ಷಣ ಸಹಾಯವಾಣಿ ಸಂಖ್ಯೆ 104/ 1077 ಅಥವಾ ದೂ.ಸಂ.: 0824- 2442590ನ್ನು ಸಂಪರ್ಕಿಸಬಹುದು. ಇಲ್ಲವೇ ಹತ್ತಿರದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬಹುದು. ಎಲ್ಲ ಮಾಹಿತಿ ಗೌಪ್ಯವಾಗಿಡಲಾಗುವುದು. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೇ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.