ಮೈಸೂರು: ವೈಜ್ಞಾನಿಕ ಪ್ರಾಣಾಯಾಮ ವೈದ್ಯಕೀಯ ಲೋಕಕ್ಕೂ ಪೂರಕವಾಗಿದ್ದು, ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ಕೊರೊನಾದಂತಹ ವೈರಸ್‌ಗಳು ಬಾಧಿಸುವುದಿಲ್ಲ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಪ್ರಧಾನ್ ಗುರುದತ್ತ ತಿಳಿಸಿದರು. ದೇವಕಿ ಮಾಧವ್ ಶಿಷ್ಯವೃಂದದಿಂದ ಭಾನುವಾರ ಶಾರದಾ ವಿಲಾಶ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ದೇವಕಿ ಮಾಧವ್ ರಚಿಸಿರುವ ವೈಜ್ಞಾನಿಕ ಪ್ರಾಣಾಯಾಮ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈಗ ಕೊರೊನಾ ಭೀತಿ ಎಲ್ಲೆಡೆ ಆವರಿಸಿದೆ. ಇದರಿಂದ ಜನರು ಸಾರ್ವಜನಿಕ ಸಮಾರಂಭಗಳಿಂದ ದೂರ ಉಳಿದು ಮನೆ ಸೇರಿದ್ದಾರೆ. ಆದರೂ ದೇವಕಿ ಮಾಧವ್ ಅವರ ಶಿಷ್ಯಂದಿರೆಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿದ್ದೀರಿ. ನಿಮ್ಮಗೆಲ್ಲ ಕೊರೊನಾ ದಂತಹ ಯಾವ ವೈರಸ್ ಅಂಟುವುದಿಲ್ಲ. ವೈಜ್ಞಾನಿಕ ಪ್ರಾಣಾಯಾಮ ಅಭ್ಯಾಸ ಮಾಡುವ ವ್ಯಕ್ತಿಗಳನ್ನು ಕೊರೊನಾ ಸೋಂಕು ಬಾಧಿಸುವುದಿಲ್ಲ ಎಂದು ಹೇಳಿದರು.
ಯೋಗಕ್ಕೆ ಪರಂಪರೆ: ಯೋಗ ಮತ್ತು ಪ್ರಾಣಾಯಾಮಕ್ಕೆ ದೀರ್ಘಕಾಲದ ಇತಿಹಾಸ ಮತ್ತು ಪರಂಪರೆ ಇದೆ. ಭಗದ್ಗೀತೆಯಲ್ಲೂ ಯೋಗದ ಉಲ್ಲೇಖವಿದೆ ಅಂದರೆ ಯೋಗ ಎಷ್ಟು ಪ್ರಾಚೀನವಾದ್ದು ಎಂದು ತಿಳಿದು ಬರುತ್ತದೆ. ಪ್ರಾಣ ಎಂದರೆ ಉಸಿರು ಅದಕ್ಕೆ ಆಯಾಮ ನೀಡುವುದೇ ಪ್ರಾಣಾಯಾಮ. ಯೋಗದಲ್ಲಿ ಎಂಟು ಅಂಶಗಳು ಸೇರಿವೆ. ಅದರಲ್ಲಿ ಪ್ರಾಣಾಮಾಯ ನಾಲ್ಕೇ ಅಂಶ. ಇಂಥ ವಿಚಾರವನ್ನು ಪುಸ್ತಕದಲ್ಲಿ ಲೇಖಕರು ಉಲ್ಲೇಖೀಸಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸಲು ಪ್ರಾಣಾಯಾಮ ಹೇಗೆ ಉಪಕಾರಿ ಎಂದು ಹಾಗೂ ವೈಜ್ಞಾನಿಕವಾಗಿ ಪ್ರಾಣಾಯಾಮ ಮಾಡುವುದು ಹೇಗೆ ಎಂದು ವ್ಯವಸ್ಥಿತವಾಗಿ ಲೇಖಕರು ಪುಸ್ತಕದಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡುಗೆ: ಉಪನಿಷತ್ ಯೋಗ ಸೆಂಟರ್ ಟ್ರಸ್ಟ್ ಸಂಸ್ಥಾಪಕ ಸುಧೇಶ್ ಚಂದ್ರ ಮಾತನಾಡಿ, ವೈದ್ಯಕೀಯ ಶಿಕ್ಷಣಕ್ಕೆ ದೇವಕಿ ಮಾಧವ್ ಅವರ ವೈಜ್ಞಾನಿಕ ಪ್ರಾಣಾಯಾಮ ಪುಸ್ತಕ ಪೂರಕವಾಗಿದೆ. ಕನ್ನಡ ಪುಸ್ತಕ ಲೋಕಕ್ಕೆ ಈ ಪುಸ್ತಕ ಕೊಡೊಗೆಯಾಗಿದೆ. ಇಂಥ ಪುಸ್ತಕವನ್ನು ಇಂಗ್ಲಿಷ್‌ಗೆ ಭಾಷಾಂತರಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರಾಣಾಯಾಮ ಎಂದರೆ ಬಲವಂತದಿಂದ ಮಾಡುವುದಲ್ಲ. ನಿದ್ರೆ ಸಮಯಲ್ಲಿ ಉಸಿರಾಡುವ ಸಾಮಾನ್ಯ ಉಸಿರಾಟದಲ್ಲೇ ಪ್ರಾಣಾಯಾಮ ಮಾಡಬೇಕು. ಪ್ರಾಣಾಯಾಮ ಅಥವಾ ವೈಜ್ಞಾನಿಕ ಪ್ರಾಣಾಯಾಮವನ್ನು ಗುರು ಮುಖೇನವೇ ಮಾಡಬೇಕು. ಮಾಧ್ಯಮದ ಮೂಲಕ ನೋಡಿ ಮಾಡುವುದು ಹಾಗೂ ಸ್ವತಂತ್ರವಾಗಿ ಪ್ರಾಣಾಯಾಮ ಮಾಡುವುದು ಅಪಾಯ ತರುಬಹುದು. ಹೀಗಾಗಿ ಗುರು ಮುಖೇನ ಗುರುವಿನ ಮುಂದೆಯೇ ಪ್ರಾಣಾಯಾಮ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಮತ್ತೆ ಬಿಡುಗಡೆ: ಅಮೆರಿಕದ ಯೋಗಾ ಯೂನಿವರ್ಸಿಟಿ ಫಾರ್ ಅಮೆರಿಕಾಸ್ ವೈಸ್ ಚಾನ್ಸಲರ್ ಮಾತನಾಡಿ, ಇಂಗ್ಲಿಷ್ ಭಾಷೆಗೆ ಈ ಪುಸ್ತಕ ತರ್ಜುಮೆಯಾಗಬೇಕಿದೆ. ಅಲ್ಲದೇ ಅಮೆರಿಕದಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ಈ ಕೃತಿಯನ್ನು ಮತ್ತೂಮ್ಮೆ ಬಿಡುಗಡೆಗೊಳಿಸಿ ಅಲ್ಲಿನ ಜನರಿಗೂ ಈ ಪುಸ್ತಕ ಹಂಚಬೇಕು. ಅಲ್ಲಿನ ಜನರಿಗೂ ವೈಜ್ಞಾನಿಕ ಪ್ರಾಣಾಯಾಮದ ಮಹತ್ವ ತಿಳಿಯಬೇಕು ಎಂದರು.
ವೈದ್ಯ ಡಾ.ನಾರಾಯಣ ಹೆಗಡೆ ಮಾತನಾಡಿ, ಆಸ್ಪತ್ರೆ ಬರುವ ರೋಗಿಗಳಲ್ಲಿ ಶೇ.90 ರಷ್ಟು ಉಸಿರಾಟ ಮತ್ತು ಶ್ವಾಶಕೋಶ ಸಂಬಂಸಿದಂತೆಯೇ ಇರುತ್ತದೆ. ಹಾಗಾಗಿ ಪ್ರಾಣಾಯಾಮದಿಂದ ಉಸಿರಾಟದ ರೋಗಗಳನ್ನು ನಿವಾರಿಸಿಕೊಳ್ಳಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಜಿ.ಎಲ್.ಎನ್.ಅಯ್ಯ, ಪತ್ರಕರ್ತ ಚೀ.ಜ.ರಾಜೀವ್, ಜಿಎಸ್‌ಎಸ್ ಯೋಗ ಸಂಶೋಧನಾ ಕೇಂದ್ರದ ಸ್ಥಾಪಕ ಶ್ರೀಹರಿ, ಲೇಖಕ ದೇವಕಿ ಮಾಧವ್, ಪ್ರೊ.ಕೆ.ರಾಮಮೂರ್ತಿ ಇತರರಿದ್ದರು.