Advertisement
ಕಳೆದ ಏಳು ದಿನಗಳಲ್ಲಿ ಜಿಲ್ಲೆಯಲ್ಲಿ 141 ಪ್ರಕರಣಗಳು ದಾಖಲಾಗಿವೆ. ಸಮಾಧಾನದ ವಿಷಯ ಎಂದರೆ ಸಾವಿನ ಪ್ರಮಾಣ ಕುಸಿದಿದೆ. ಇದರಿಂದಾಗಿ ಜನರು ಹೊರಗೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಯಾರೂ ಅದನ್ನು ಪಾಲಿಸುತ್ತಿಲ್ಲ. ಅಷ್ಟರ ಮಟ್ಟಿಗೆ ಜನರಿಗೆ ಕೊರೊನಾ ಬಗ್ಗೆ ಭಯ ಮಾಯವಾಗಿವೆ. ಇದು ಸಮಾಧಾನಕರ ಸಂಗತಿ ಎಂದರೂ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವಂತಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ಎಚ್ಚರಿಸಿವೆ.
Related Articles
Advertisement
ಪಾಸಿಟಿವಿಟಿ ದರ (ಶೇ.4.09) ಹೆಚ್ಚಿದ್ದರೂ ಸಾವಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದು ಜನರಲ್ಲಿ ಭಯ ಉಂಟಾಗದೇ ಇರುವುದಕ್ಕೆ ಕಾರಣವಾಗಿದೆ. ಅಲ್ಲದೇ, ದೇಶದಲ್ಲಿ ಸಮರೋಪಾದಿಯಲ್ಲಿ ನಡೆದ ವ್ಯಾಕ್ಸಿನೇಷನ್‌ನಿಂದಾಗಿ ಸಾವಿನ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಇಲ್ಲದಿದ್ದರೇ ಇವತ್ತು ಸಾವಿನ ಸಂಖ್ಯೆ ಹೆಚ್ಚಿರುತ್ತಿತ್ತು. ಇದೇ ವೇಳೆ ಜನರಿಗೆ ಕೊರೊನಾ ಏನು ಎನ್ನುವುದು ತಿಳಿವಳಿಕೆ ಬಂದಿದೆ. ಹೀಗಾಗಿ ಭಯದಿಂದ ದವಾಖಾನೆಗಳಿಗೆ ಬರುವ ಬದಲು ಶಾಂತವಾಗಿ ದವಾಖಾನೆಗಳಿಗೆ ಬಂದು ಚಿಕಿತ್ಸೆ ಪಡೆದು ಸೋಂಕು ಮುಕ್ತವಾಗಿ ಹೋಗುತ್ತಿದ್ದಾರೆ.
ಶೇ.104 ಗುರಿ ತಲುಪಿದ ವ್ಯಾಕ್ಸಿನ್
ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ ಶೇ.100ಕ್ಕೆ 104ರಷ್ಟು ವ್ಯಾಕ್ಸಿನ್ ಮಾಡಿ ದಾಖಲೆ ಮಾಡಲಾಗಿದೆ. ಕೆಲವರು ಕೋವಿಶಿಲ್ಡ್ ತೆಗೆದುಕೊಂಡರೆ, ಇನ್ನೂ ಕೆಲವರು ಕೋವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 30,29,841ಜನರಿದ್ದಾರೆ. ಇವರಲ್ಲಿ 12-14 ವಯಸ್ಸಿನವರು 1,04,507 ಜನ ಇದ್ದಾರೆ. ಇವರಲ್ಲಿ 1,03,995 ಜನ 2ನೇ ಡೋಸ್ ಪಡೆದಿದ್ದಾರೆ. ಅಲ್ಲದೇ, ಒಟ್ಟಾರೆಯಾಗಿ 18ರಿಂದ ಮೇಲ್ಪಟ್ಟವರು 18,51,000 ಇವರಲ್ಲಿ 19,17,490 ಜನರಿಗೆ ಲಸಿಕೆ ಹಾಕಲಾಗಿದೆ. ಇದು ಶೇ.104ರಷ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಈ ವಾದವನ್ನು ಸ್ಥಳೀಯ ಆರೋಗ್ಯ ಚಿಂತಕರು ಅಲ್ಲ ಗಳೆಯುತ್ತಾರೆ. ಬಹುತೇಕರು 2ನೇ ಡೋಸ್ ಪಡೆದಿಲ್ಲ. ದಾಖಲೆಗಳಲ್ಲಿ ಮಾತ್ರವೇ ಇದನ್ನು ತೋರಿಸಲಾಗಿದೆ. ವಾಸ್ತವದಲ್ಲಿ ಆಗಿಲ್ಲ. ಅಲ್ಲದೇ, ಕೋವಿಡ್ ನಲ್ಲಿ ಆರೋಗ್ಯ ಸಂಬಂಧ ಸಾಕಷ್ಟು ನಾಟಕಗಳನ್ನು ಸರ್ಕಾರ ಆಡಿದೆ. ಸಾವುಗಳನ್ನು ತಪ್ಪಿಸಬಹುದಿತ್ತು ಎನ್ನುವುದು ಅವರ ವಾದ.
ಸರ್ಕಾರದ ಗುರಿಯಂತೆ ನಾವು ಶೇ.104ರಷ್ಟು ಲಸಿಕಾ ಕರಣ ಮಾಡಿದ್ದರಿಂದ ಇವತ್ತು ಕೋವಿಡ್ ದಾಂಗುಡಿ ಅಷ್ಟಾಗಿ ಇಲ್ಲ. ಯಶಸ್ವಿಯಾಗಿ ನಾವು ವ್ಯಾಕ್ಸಿನೇಷನ್ ಮುಗಿಸಿದ್ದೇವೆ. ಇದರಿಂದ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳ ಪಾತ್ರ ಮುಖ್ಯ. ಆಗಸ್ಟ್‌ನಲ್ಲಿ ತುಸು ಪ್ರಕರಣಗಳು ಹೆಚ್ಚಾಗುತ್ತಿವೆ. ಸಾವು ಇಲ್ಲ, ಐಸೋಲೇಶನ್ ಮಾಡಿ ಚಿಕಿತ್ಸೆ ನೀಡಿ ಗುಣ ಮಾಡಿ ಮನೆಗೆ ಕಳಿಸಿ ಕೊಡಲಾಗುತ್ತಿದೆ. –ಡಾ| ರಾಜಶೇಖರ ಮಾಲಿ, ಜಿಲ್ಲಾ ಆರೋಗ್ಯಾಧಿಕಾರಿ
ಸರ್ಕಾರದ ದಾಖಲೆಗಳು ನಿಜಕ್ಕೂ ಅಚ್ಚರಿ ಉಂಟು ಮಾಡುತ್ತವೆ. 2021ರಲ್ಲಿ ಮೊದಲ ಡೋಸ್ ಲಸಿಕೆ ಹಾಕುವಾಗ ಜನರು ತುಂಬಾ ಭಯದಲ್ಲಿದ್ದರು. ಆಗ 12ರಿಂದ 14 ವರ್ಷದ ಮಕ್ಕಳಿಗೆ ಹಾಕಿಲ್ಲ. ಇನ್ನೂ 2022ರಲ್ಲಿ ಎರಡನೇ ಡೋಸ್ ತೆಗೆದುಕೊಳ್ಳದೇ ಇದ್ದವರಿಗೂ “ನಿಮ್ಮ ಎರಡನೇ ಡೋಸ್ ಮುಗಿದಿದೆ’ ಎಂದು ಮೋದಿ ಹೆಸರಲ್ಲಿ ಮೆಸೇಜ್ ಬಂದಿದ್ದೆ ಸಾಧನೆ ಎನ್ನುವಂತಾಗಿದೆ. ಇದನ್ನು ಬಿಟ್ಟು ಉಳಿದದ್ದು ದಾಖಲೆಗಳಲ್ಲಿ ಮಾತ್ರ ಡೋಸ್ ನೀಡಲಾಗಿದೆ. –ವಿಜಯ ಜಾಧವ, ಆರೋಗ್ಯ ಕಾರ್ಯಕರ್ತ, ಕೆಆರ್ಎಸ್ ಪಾರ್ಟಿ ಅಧ್ಯಕ್ಷ
-ಸೂರ್ಯಕಾಂತ್ ಎಂ. ಜಮಾದಾರ