Advertisement
ಬೆಂಗಳೂರಿನ “ಸಾಯ್’ ಕಚೇರಿಗೆ ಬೀಗ ಹಾಕಲಾಗಿದೆ. ಇಂಡಿಯಾ ಓಪನ್ ಗಾಲ್ಫ್ ಕೂಟವನ್ನು ಮುಂದೂಡಲಾಗಿದೆ. ಕ್ರಿಕೆಟಿಗರ ಆರೋಗ್ಯದ ದೃಷ್ಟಿಯಿಂದ ಬಿಸಿಸಿಐ ಸಪ್ತ ಸೂತ್ರಗಳನ್ನು ಜಾರಿಗೆ ತಂದಿದೆ.
Related Articles
“ಯೋನೆಕ್ಸ್-ಸನ್‌ರೈಸ್ ಇಂಡಿಯಾ ಓಪನ್-2020 ಬ್ಯಾಡ್ಮಿಂಟನ್ ಪಂದ್ಯಾವಳಿ’ ಈಗಾಗಲೇ ನಿಗದಿಯಾದಂತೆ ಮಾ. 24ರಿಂದ 29ರ ತನಕ ಹೊಸದಿಲ್ಲಿಯ “ಕೆ.ಡಿ. ಜಾಧವ್ ಸ್ಟೇಡಿಯಂ’ನಲ್ಲಿ ನಡೆಯಲಿದೆ. ಆದರೆ ಮುನ್ನೆಚ್ಚರಿಕೆಯ ಕ್ರಮ ವಾಗಿ, ಆಟಗಾರರ ಆರೋಗ್ಯದ ದೃಷ್ಟಿಯಿಂದ ಈ ಕೂಟದ ವೇಳೆ ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶ ನಿರ್ಬಂಧಿಸಲಾಗುವುದು ಎಂದು ಎರಡೂ ಬ್ಯಾಡ್ಮಿಂಟನ್ ಸಂಸ್ಥೆಗಳು ಜಂಟಿ ಪ್ರಕಟನೆ ಹೊರಡಿಸಿವೆ. ಇದನ್ನು ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್ ಕೆ. ಸಿಂಘಾನಿಯ ಮಾಧ್ಯಮದವರಿಗೆ ತಿಳಿಸಿದ್ದಾರೆ.
Advertisement
“ಬ್ಯಾಡ್ಮಿಂಟನ್ ಅಭಿಮಾನಿಗಳು ಆರಂಭಿಕ ಸುತ್ತಿನ ಪಂದ್ಯಗಳನ್ನು ಯುಟ್ಯೂಬ್‌ನಲ್ಲಿ ವೀಕ್ಷಿಸ ಬಹುದು. ಕ್ವಾರ್ಟರ್ ಫೈನಲ್ ಹಂತದಿಂದ ಹಾಟ್‌ಸ್ಟಾರ್‌ನಲ್ಲಿ ಪಂದ್ಯಗಳು ಪ್ರಸಾರಗೊಳ್ಳಲಿವೆ’ ಎಂದೂ ಸಿಂಘಾನಿಯ ಹೇಳಿದರು.
ಎ. 28: ಅರ್ಹತೆಗೆ ಅಂತಿಮ ದಿನಕೊರೊನಾ ಭೀತಿಯಿಂದ ಈಗಾಗಲೇ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಬಹಳಷ್ಟು ಬ್ಯಾಡ್ಮಿಂಟನ್ ಪಂದ್ಯಾವಳಿಗಳು ರದ್ದುಗೊಂಡಿವೆ, ಇಲ್ಲವೇ ಮುಂದೂಡಲ್ಪಟ್ಟಿವೆ. ಈ ಪಂದ್ಯಾವಳಿ ಗಳೆಂದರೆ ಚೀನ ಮಾಸ್ಟರ್, ವಿಯೆಟ್ನಾಂ ಇಂಟರ್‌ನ್ಯಾಶನಲ್ ಚಾಲೆಂಜ್, ಜರ್ಮನ್ ಓಪನ್ ಮತ್ತು ಪೋಲಿಶ್ ಓಪನ್. 2 ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಲಿನ್ ಡಾನ್, ಭಾರತದ ಸೈನಾ ನೆಹ್ವಾಲ್, ಕೆ. ಶ್ರೀಕಾಂತ್ ಮೊದಲಾದವರೆಲ್ಲ ಇನ್ನೂ ಟೋಕಿಯೊ ಟಿಕೆಟ್ ಪಡೆದಿಲ್ಲ. ಇಂಡಿಯಾ ಓಪನ್ ಬಳಿಕ ಉಳಿದಿರುವುದು ಮಲೇಶ್ಯ ಓಪನ್ ಮತ್ತು ಸಿಂಗಾಪುರ್ ಓಪನ್ ಪಂದ್ಯಾವಳಿ ಮಾತ್ರ. ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಅರ್ಹತೆಗೆ ಎ. 28 ಅಂತಿಮ ದಿನವಾಗಿದೆ. ಇಂಡಿಯಾ ಓಪನ್ ಗಾಲ್ಫ್ ಮುಂದೂಡಿಕೆ
ಗುರ್ಗಾಂವ್: ಭಾರತದ ಪ್ರತಿಷ್ಠಿತ ಗಾಲ್ಫ್ ಪಂದ್ಯಾವಳಿಯಾದ “ಇಂಡಿಯನ್ ಓಪನ್ ಗಾಲ್ಫ್ ಟೂರ್ನಮೆಂಟ್’ ಮುಂದೂಡಲ್ಪಟ್ಟಿದೆ. ಬುಧವಾರ ಈ ನಿರ್ಧಾರಕ್ಕೆ ಬರಲಾಯಿತು. ಈ ಪಂದ್ಯಾವಳಿ ಮಾ. 19ರಿಂದ 22ರ ತನಕ ಗುರ್ಗಾಂವ್‌ನ “ಡಿಎಲ್‌ಎಫ್ ಗಾಲ್ಫ್ ಆ್ಯಂಡ್ ಕಂಟ್ರಿ ಕ್ಲಬ್’ನಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ಭೀತಿಯಿಂದ ಇದನ್ನು ಮುಂದೂಡಲು ನಿರ್ಧರಿಸಲಾಯಿತು. ಇದೇ ವರ್ಷದ “ಮುಂದಿನ ಭಾಗದಲ್ಲಿ’ ಈ ಕೂಟ ನಡೆಯಲಿದೆ ಎಂದು ಇಂಡಿಯನ್ ಗಾಲ್ಫ್ ಯೂನಿಯನ್ ಪ್ರಕಟಿಸಿದೆ.
ಏಶ್ಯನ್ ಟೂರ್ ಆ್ಯಂಡ್ ಯುರೋಪಿಯನ್ ಟೂರ್, ಟೈಟಲ್ ಪ್ರಾಯೋಜಕರಾದ ಹೀರೋ ಮೋಟೊ ಕಾರ್ಪ್ ಲಿಮಿಟೆಡ್‌ನ ಸಹಭಾಗಿತ್ವದಲ್ಲಿ ಈ ಕೂಟ ನಡೆಯಬೇಕಿತ್ತು. ಭಾರತೀಯ ಸರಕಾರ ಪ್ರಕಟಿಸಿದ ನೂತನ ಸಾರ್ವಜನಿಕ ಆರೋಗ್ಯ ಪ್ರಯಾಣ ಅಧಿಸೂಚನೆಯನ್ನೂ ಈ ಸಂದರ್ಭದಲ್ಲಿ ಪರಿಗಣಿಸಲಾಗಿದೆ. ಸಾಯ್ ಪ್ರವೇಶ ನಿರ್ಬಂಧ
ಬೆಂಗಳೂರು: ಇಲ್ಲಿನ ನ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಕಚೇರಿಗೆ ಬೀಗ ಹಾಕಲಾಗಿದೆ. ಇಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗೆ ಸದ್ಯ ಹೊರಹೋಗದಂತೆ ಹಾಗೂ ಹೊರಗಿನ ಕ್ರೀಡಾಪಟುಗಳಿಗೆ ಇಲ್ಲಿ ಬರದಂತೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗಿದೆ. “ಇಲ್ಲಿ ಉನ್ನತ ದರ್ಜೆಯ ಆ್ಯತ್ಲೀಟ್‌ಗಳು ತರಬೇತಿ ಪಡೆಯುತ್ತಿದ್ದಾರೆ. ಇವರ ಆರೋಗ್ಯ ಬಹಳ ಮುಖ್ಯ. ನಾವು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಸಾಯ್ ಮೂಲಗಳು ತಿಳಿಸಿವೆ. ವಿಶ್ವ-ಏಶ್ಯ ಇಲೆವೆನ್ ಕ್ರಿಕೆಟ್ ಸರಣಿಗೂ ಕಂಟಕ
ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ವಿಶ್ವ ಇಲೆವೆನ್-ಏಶ್ಯ ಇಲೆವೆನ್ ನಡುವಿನ ಕ್ರಿಕೆಟ್ ಸರಣಿಗೂ ಕೊರೊನಾ ಬಿಸಿ ತಟ್ಟಿದೆ. ಇದನ್ನು ಮುಂದೂಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. “ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಫಾ ಡು ಪ್ಲೆಸಿಸ್ ಮೊದಲಾದ ಸ್ಟಾರ್ ಆಟಗಾರರು ಈ ಪಂದ್ಯಾವಳಿಯಲ್ಲಿ ಆಡಬೇಕಿತ್ತು. ಆದರೆ ಇವರಲ್ಲಿ ಯಾರೆಲ್ಲ ಪಾಲ್ಗೊಳ್ಳುತ್ತಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆಟಗಾರರಿಗೆ ಬಹಳಷ್ಟು ನಿರ್ಬಂಧಗಳನ್ನು ವಿಧಿಸಲಾಗಿದೆ. ಹೀಗಾಗಿ ಕೂಟವನ್ನು ಮುಂದೂಡಲು ತೀರ್ಮಾನಿಸಲಾಗಿದೆ. ಒಂದು ತಿಂಗಳ ಕಾಲ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಮುಂದಿನ ನಿರ್ಧಾರಕ್ಕೆ ಬರಲಾಗುವುದು’ ಎಂದು ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಹೇಳಿದ್ದಾರೆ. ಬಾಂಗ್ಲಾದೇಶದ ಪಿತಾಮಹ ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಾಬ್ದ ವರ್ಷದ ಅಂಗವಾಗಿ ಈ ಕೂಟವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು.