Advertisement
ಆದರೆ, ಕೊರೊನಾ ಸೋಂಕು ಹರಡದಂತೆ ಸಾರ್ವಜನಿಕ ಸಂಪರ್ಕ ತಪ್ಪಿಸುವ ನಿಟ್ಟಿನಲ್ಲಿ ಒಂದು ವಾರಗಳ ಕಾಲ ಬಂದ್ ಘೋಷಿಸಿರುವುದರಿಂದ ನಗರದ ಮಾಲ್, ಚಿತ್ರಮಂದಿರಗಳು ಹಾಗೂ ಉದ್ಯಾನಗಳು ಸ್ತಬ್ಧವಾಗಿದ್ದವು. ಜೊತೆಗೆ ಎರಡನೇ ಶನಿವಾರವಾಗಿದ್ದ ಕಾರಣ ಸರ್ಕಾರಿ ಕಚೇರಿಗಳಿಗೂ ರಜೆ ಇತ್ತು. ಆದ್ದರಿಂದ ಸರ್ಕಾರಿ ಕಚೇರಿಗಳ ಸುತ್ತಮುತ್ತ ಜನರು ಕಾಣಲಿಲ್ಲ. ಇನ್ನು ರೈಲು ನಿಲ್ದಾಣ, ಬಸ್ ನಿಲ್ದಾಣ ಸಹ ಬಿಕೋ ಎನ್ನುತ್ತಿತ್ತು. ನಗರ ಸಾರಿಗೆ ಬಸ್‌ಗಳು ಪ್ರಯಾಣಿಕರಿಲ್ಲದೆ ಭಣಗುಟ್ಟುತ್ತಿದ್ದವು.
Related Articles
Advertisement
ಮಾರುಕಟ್ಟೆಯಲ್ಲಿ ಜನರೇ ಇಲ್ಲ: ದೇವರಾಜ ಮಾರುಕಟ್ಟೆ, ಎಂ.ಜಿ.ರೋಡ್ ಮಾರುಕಟ್ಟೆ ಸೇರಿದಂತೆ ಸಯ್ನಾಜಿರಾವ್ ರಸ್ತೆ, ದೇವರಾಜ ಅರಸ್ ರಸ್ತೆ ಹೀಗೆ ಅನೇಕ ಕಡೆ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು. ಆದರೆ, ಜನಸಂಖ್ಯೆ ಎಂದಿಗಿಂತ ವಿರಳವಾಗಿರುವುದು ಕಂಡು ಬಂತು.
ಸತತ ಒಂದು ವಾರ ಶಾಲಾ ಕಾಲೇಜುಗಳಿಗೆ ರಜೆ ಇರುವ ಕಾರಣ ಮೈಸೂರಿನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿರುವ ಬೇರೆ ಊರುಗಳ ವಿದ್ಯಾರ್ಥಿಗಳು ತಮ್ಮ ಊರಿಗೆ ಮರಳಿದರು. ಎಲ್ಲರೂ ಬಸ್ ಮೊರೆ ಹೋಗಿದ್ದ ಕಾರಣ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಸ್ ನಿಲ್ದಾಣ ಜನರಿಂದ ತುಂಬಿತ್ತು. ಸಂಜೆಯಾಗುತ್ತಿದ್ದಂತೆ ಯಥಾ ಪ್ರಕಾತರ ಖಾಲಿಯಾಗಿತ್ತು.
ಕೊರೊನಾ ಶಂಕಿತರ ಸಂದರ್ಶನಕ್ಕೆ ನಿಬಂಧ: ಕೊರೊನಾ ಶಂಕಿತ ವ್ಯಕ್ತಿಯ ಸಂದರ್ಶನ ಹಾಗೂ ಫೋಟೋ, ವೀಡಿಯೋ ಮಾಡಲು ಪತ್ರಕರ್ತರು ತೆರಳಿದರೆ ಅಂತಹ ಪತ್ರಕರ್ತರನ್ನೂ ಸಹ ಮನೆಯಲ್ಲಿ ದಿಗ್ಬಂಧನ ದಲ್ಲಿ 14 ದಿನಗಳ ಕಾಲ ಇರಿಸಲಾಗುತ್ತದೆ. ಆದ್ದರಿಂದ ಯಾರೂ ಸಹ ಅಂತಹ ಪ್ರಯತ್ನ ಮಾಡಬಾರದು. ಕೊರೊನಾ ಬಗ್ಗೆ ಯಾವುದೇ ಪ್ರಕರಣ ಪತ್ತೆಯಾದರೂ ಸಹ ಸಾರ್ವಜನಿಕರ ಮಾಹಿತಿಗಾಗಿ ಸರ್ಕಾರವೇ ಮಾಹಿತಿ ನೀಡುತ್ತದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.
ಮಾಲ್, ಚಿತ್ರಮಂದಿರಕ್ಕೆ ಆರ್ಥಿಕ ನಷ್ಟ: ಪ್ರತಿದಿನ ಸಹಸ್ರಾರು ಮಂದಿ ಮಾಲ್‌ಗಳಿಗೆ ಭೇಟಿ ನೀಡಿ ವಿವಿಧ ವಸ್ತುಗಳ ಖರೀದಿಯಲ್ಲಿ ನಿರತರಾಗುತ್ತಿದ್ದರು. ಲಕ್ಷಗಟ್ಟಲೆ ವ್ಯವಹಾರ ನಡೆಯುತ್ತಿತ್ತು. ಚಿತ್ರಮಂದಿರಗಳಿಗೂ ಸಿನಿಮಾ ಪ್ರೇಕ್ಷಕರು ತೆರಳಿ ಚಿತ್ರ ವೀಕ್ಷಿಸುತ್ತಿದ್ದರು. ಆದರೆ, ಕೊರೊನಾ ಎಫೆಕ್ಟ್ನಿಂದಾಗಿ ಮಾಲ್ ಆಫ್ ಮೈಸೂರು, ಗರುಡಮಾಲ್ ಸೇರಿದಂತೆ ಮೋರ್, ಬಿಗ್‌ಬಜಾರ್ ಮಾಲ್‌ಗಳು ಮತ್ತು ಗಾಯತ್ರಿ, ಶಾಂತಲಾ, ಲಕ್ಷ್ಮೀ ಸೇರಿದಂತೆ ಎಲ್ಲಾ ಚಿತ್ರಮಂದಿರಗಳು ಬಂದ್ ಆಗಿದ್ದವು.
ಪ್ರಮುಖ ರಸ್ತೆಗಳು ಖಾಲಿ ಖಾಲಿ: ದೇವರಾಜ ಅರಸು ರಸ್ತೆ, ಸಯ್ನಾಜಿರಾವ್ ರಸ್ತೆ ಮತ್ತು ಕೆ.ಆರ್.ವೃತ್ತದ ಸುತ್ತಲಿನ ಕೆಲ ರಸ್ತೆಗಳನ್ನು ಹೊರತುಪಡಿಸಿ, ಮಿಕ್ಕೆಲ್ಲಾ ರಸ್ತೆಗಳು ಬಹುತೇಕ ಖಾಲಿಯಾಗಿದ್ದವು. ರಸ್ತೆ ಬದಿ ಆಹಾರ ಪದಾರ್ಥಗಳನ್ನಂತೂ ಕೊಳ್ಳುವವರೇ ಇರಲಿಲ್ಲ. ಹೋಟೆಲ್‌ಗಳು ತೆರೆದಿದ್ದರೂ ಅಷ್ಟಾಗಿ ಜನರು ಕಾಣಲಿಲ್ಲ. ಪ್ರವಾಸಿ ಸ್ಥಳಗಳಲ್ಲೂ ಹೇಳಿಕೊಳ್ಳುವಷ್ಟು ಜನರಿರಲಿಲ್ಲ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ತುಂಬಿ, ತುಳುಕುವ ರಸ್ತೆಗಳೆಲ್ಲಾ ಶನಿವಾರ ಖಾಲಿಯಾಗಿತ್ತು.
ಚಿತ್ರಮಂದಿರಗಳ ಸ್ವಚ್ಛತಾ ಕಾರ್ಯ: ಒಂದು ವಾರ ಬಂದ್ ಹಿನ್ನೆಲೆಯಲ್ಲಿ ನಗರದ ಹಲವು ಚಿತ್ರಮಂದಿರಗಳನ್ನು ಡೆಟೈಲ್, ಪೆನಾಯಿಲ್ ಹಾಕಿ ಪ್ರದರ್ಶನ ಸಭಾಂಗಣವನ್ನು ಹಾಗೂ ಕುರ್ಚಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಿತು. ಮಾಲ್‌ಗಳು ಮತ್ತು ಚಿತ್ರಮಂದಿರಗಳ ಮುಂದೆ ಒಂದು ವಾರಗಳ ಕಾಲ ರಜೆ ಎಂಬ ನಾಮಫಲಕ ಪ್ರದರ್ಶಿಸಲಾಗಿತ್ತು. ಕಚೇರಿ ಸಹಾಯಕರು, ಸ್ವಚ್ಛತಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸಿದ್ದು ಕಂಡು ಬಂತು.