Advertisement

ಕೊರೊನಾ: ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆ

07:18 PM Mar 20, 2020 | mahesh |

ಹೊಸದಿಲ್ಲಿ/ಬೀಜಿಂಗ್‌: ಚೀನದಲ್ಲಿ ಜನ್ಮತಾಳಿದ ಮಾರಕ ಕೊರೊನಾ ವೈರಸ್‌ ವಿಶ್ವಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಚೀನದಲ್ಲಿ ಈ ವೈರಸ್‌ಗೆ ಬಲಿಯಾದವರ ಸಂಖ್ಯೆ 213ಕ್ಕೇರಿ, ಸೋಂಕಿತರ ಸಂಖ್ಯೆ 10 ಸಾವಿರದ ಸಮೀಪಕ್ಕೆ ಬರುತ್ತಿರುವಂತೆಯೇ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯಿಂದ ಈ ಘೋಷಣೆ ಹೊರಬಿದ್ದಿದೆ.

Advertisement

ಈಗಾಗಲೇ ಭಾರತ ಸಹಿತ ಸುಮಾರು 20 ರಾಷ್ಟ್ರಗಳಲ್ಲಿ ವೈರಸ್‌ ಹಬ್ಬಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಜಿನೇವಾದಲ್ಲಿ ಡಬ್ಲ್ಯುಎಚ್‌ಒ ಅಧಿಕಾರಿಗಳು ತುರ್ತು ಸಭೆ ನಡೆಸಿ, ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಅಪರೂಪದ ಪ್ರಕರಣ ಗಳಿಗೆ ಮಾತ್ರವೇ ಇಂಥದ್ದೊಂದು ಘೋಷಣೆ ಮಾಡಲಾಗುತ್ತಿದ್ದು, ಈವರೆಗೆ ಆರು ಬಾರಿ ಮಾತ್ರ ಇಂಥ ಘೋಷಣೆ ಮಾಡಲಾಗಿದೆ.

ಯಾವುದೇ ಒಂದು ಕಾಯಿಲೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಬ್ಬುತ್ತಾ ಸಾಗಿ, ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ಭೀತಿಯಿದ್ದಾಗ ಇಂಥ ಘೋಷಣೆ ಮಾಡಲಾಗುತ್ತದೆ. ಇದರಿಂದಾಗಿ ಅಂತಾರಾಷ್ಟ್ರೀಯ ಸಹಕಾರದೊಂದಿಗೆ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.

ಕಳೆದ ವರ್ಷದ ಜುಲೈಯಲ್ಲಿ ಡೆಮಾಕ್ರಾಟಿಕ್‌ ರಿಪಬ್ಲಿಕ್‌ ಆಫ್ ಕಾಂಗೋದಲ್ಲಿ ಎಬೋಲಾ ವೈರಸ್‌ ಕಾಣಿಸಿಕೊಂಡಾಗ, 2016ರಲ್ಲಿ ಝಿಕಾ ವೈರಸ್‌ ಹಬ್ಬಿದಾಗ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.

ನಿಗಾ ಕೇಂದ್ರ ಸಿದ್ಧ
ವುಹಾನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರುವ ಪ್ರಕ್ರಿಯೆ ಆರಂಭವಾಗಿದೆ. ಏರ್‌ ಇಂಡಿಯಾ ವಿಮಾನವು ಶುಕ್ರವಾರ ವುಹಾನ್‌ಗೆ ತೆರಳಿದೆ. ವುಹಾನ್‌ನಿಂದ ಆಗಮಿಸಲಿರುವ 300ರಷ್ಟು ವಿದ್ಯಾರ್ಥಿಗಳನ್ನು ನೇರವಾಗಿ ನಿಗಾ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಅದಕ್ಕೆಂದೇ ಹರಿಯಾಣದ ಮನೇಸರ್‌ನಲ್ಲಿ ಸೇನೆಯ ವತಿಯಿಂದ ನಿಗಾ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿರುವ ತಜ್ಞ ವೈದ್ಯರ ತಂಡ ಹಾಗೂ ಸಿಬಂದಿಯು ಈ ಎಲ್ಲ ವಿದ್ಯಾರ್ಥಿಗಳ ಮೇಲೆ ಸುಮಾರು 2 ವಾರಗಳ ಕಾಲ ನಿಗಾ ಇಡಲಿದೆ.

Advertisement

ಚೀನದಿಂದ ಆಗಮಿಸಿರುವ ಕಾರಣ ಇವರಲ್ಲಿ ಯಾರಿಗಾದರೂ ಸೋಂಕು ತಗುಲಿರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಇದೇ ವೇಳೆ, ಕೊರೊನಾ ವೈರಸ್‌ ಶಂಕೆಯಿರುವಂಥ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲೆಂದೇ 600 ಹಾಸಿಗೆಗಳಿರುವ ಆರೋಗ್ಯ ಕೇಂದ್ರವೊಂದನ್ನು ದಿಲ್ಲಿಯಲ್ಲಿ ಸ್ಥಾಪಿಸಲಾಗಿದೆ. ಐಟಿಬಿಪಿ ಯೋಧರು ನೈಋತ್ಯ ದಿಲ್ಲಿಯ ಛಾವ್ಲಾ ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಭದ್ರತಾ ಪಡೆ ವಕ್ತಾರ ವಿವೇಕ್‌ ಕುಮಾರ್‌ ಪಾಂಡೆ ಹೇಳಿದ್ದಾರೆ. ಈ ಕೇಂದ್ರದಲ್ಲಿ ದಾಖಲಾಗುವ ಎಲ್ಲರಿಗೂ ಆಹಾರ, ನೀರು ಮತ್ತು ಇತರ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಕೇರಳ: ಯುವತಿ ಶಿಫ್ಟ್
ಸೋಂಕು ತಗುಲಿರುವುದು ದೃಢಪಟ್ಟಿರುವ ಕೇರಳದ ವಿದ್ಯಾರ್ಥಿನಿಯನ್ನು ಶುಕ್ರವಾರ ತ್ರಿಶೂರ್‌ನ ಆಸ್ಪತ್ರೆಯಿಂದ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿನ ಪ್ರತ್ಯೇಕ ವಾರ್ಡ್‌ಗೆ
ಶಿಫ್ಟ್ ಮಾಡಲಾಗಿದೆ. ಇದೇ ವೇಳೆ, ಚೀನದಿಂದ ವಾಪಸಾಗಿರುವ ವ್ಯಕ್ತಿಗಳ ಕುಟುಂಬ ಸದಸ್ಯರು ಸದ್ಯಕ್ಕೆ ಮದುವೆಯಂಥ ಯಾವುದೇ ಕಾರ್ಯಕ್ರಮ ಆಯೋಜಿಸದಂತೆ ಕೇರಳ ಸರಕಾರ ಸಲಹೆ ನೀಡಿದೆ. ವೈರಸ್‌ ಹರಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

6 ಮಂದಿ ಮೇಲೆ ನಿಗಾ
ಕೊರೊನಾ ವೈರಸ್‌ ತಗುಲಿರಬಹುದೆಂಬ ಶಂಕೆಯಿರುವ 6 ಮಂದಿಯನ್ನು ದಿಲ್ಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ 24 ವರ್ಷದ ಯುವತಿಯೂ ಸೇರಿದ್ದು, ಈಕೆ 2015ರಿಂದಲೂ ಚೀನದಲ್ಲಿದ್ದಳು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next