ಭರಮಸಾಗರ: ಮೆಕ್ಕೆಜೋಳ ಬೆಳೆಗಾರರಿಗೂ ಕೊರೊನಾ ವೈರಸ್ ಬಿಸಿ ತಟ್ಟಿದೆ. ಕೊರೊನಾ ವೈರಸ್ ಭೀತಿ ಕುಕ್ಕುಟೋದ್ಯಮದ ಮೇಲೆ ಪರಿಣಾಮ ಬೀರಿದ್ದು, ಕೋಳಿಯ ಪ್ರಮುಖ ಆಹಾರ ಧಾನ್ಯವಾದ ಮೆಕ್ಕೆಜೋಳದ ಬೇಡಿಕೆ ಕುಸಿಸಿದ್ದು, ದರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಇದರಿಂದ ಕಳೆದ ಮುಂಗಾರಿನಲ್ಲಿ ಬೆಳೆದ ಮೆಕ್ಕೆಜೋಳವನ್ನು ಮಾರಾಟ ಮಾಡದೆ ಕಣಗಳಲ್ಲಿ ತೆನೆ ಸಮೇತ ಸಂಗ್ರಹಿಸಿಟ್ಟಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ.
2019ರ ಜನವರಿ ತಿಂಗಳಿನಿಂದ ಮೆಕ್ಕೆಜೋಳ ಪ್ರತಿ ಕ್ವಿಂಟಲ್‌ಗೆ 2000 ರೂ. ಗಡಿ ದಾಟಿತ್ತು. ಕೊರೊನಾ ವೈರಸ್ ಭೀತಿಗಿಂತ ಮೊದಲು 2000, 1900 ರೂ. ಆಸುಪಾಸಿನಲ್ಲಿದ್ದ ದರ ಇದೀಗ ಏಕಾಏಕಿ 1500 ರಿಂದ 1600 ರೂ.ಗಳಿಗೆ ಕುಸಿದಿದೆ. 2000 ರೂ. ನಿರೀಕ್ಷೆ ಮಾಡದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಬಂಗಾರದ ದರ ಸಿಕ್ಕಿತ್ತು. ಇದರಿಂದ ಬೆಳೆಗಾರರು ಸಂತಸಗೊಂಡಿದ್ದರು.
ಮುಂಗಾರಿನಲ್ಲಿ ಬೆಳೆದ ಮೆಕ್ಕೆಜೋಳವನ್ನು ತೆನೆ ಸಮೇತ ಕಣಗಳಲ್ಲಿ ಸಂಗ್ರಹಿಸಿಡುವ ರೈತರು, ಜನವರಿ ನಂತರ ಮಾರಾಟ ಮಾಡುವುದು ವಾಡಿಕೆ. ಸಂಗ್ರಹಿಸಿಟ್ಟ ಮೆಕ್ಕೆಜೋಳವನ್ನು ಜನವರಿ ಬಳಿಕ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿದ್ದ ರೈತರಿಗೆ ಇದೀಗ ಕೊರೊನಾ ವೈರಸ್ ಮಗ್ಗುಲ ಮುಳ್ಳಾಗಿ ಕಾಡುತ್ತಿದೆ.
ತತ್ತರಿಸಿದ ಪೌಲ್ಟ್ರಿ ಉದ್ಯಮ: ಕೋಳಿ ತಿಂದರೆ ಕೊರೊನಾ ವೈರಸ್ ಬರುತ್ತೆ, ಅದರಿಂದ ಬೇಗನೆ ಹರಡುತ್ತದೆ ಎಂಬ ವದಂತಿಗಳಿಂದಾಗಿ ಪೌಲ್ಟ್ರಿ ಉದ್ಯಮ ತಲ್ಲಣಿಸಿ ಹೋಗಿದೆ. ಇದರ ಬೆನ್ನ ಹಿಂದೆಯೇ ಕೋಳಿಗಳ ಪ್ರಮುಖ ಆಹಾರ ಧಾನ್ಯ ಮೆಕ್ಕೆಜೋಳವನ್ನು ಖರೀದಿಸಲು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಪ್ರಮುಖ ರಾಜ್ಯಗಳ ಪೌಲ್ಟ್ರಿ ಫಾರಂಗಳ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮೆಕ್ಕೆಜೋಳದ ದರ ಕೂಡ ದಿನೇ ದಿನೇ ಕುಸಿಯುತ್ತಾ ಸಾಗಿದೆ. ಕ್ವಿಂಟಲ್ ಮೆಕ್ಕೆಜೋಳದ ದರ 1200, 1400 ರೂ.ಗಳವರೆಗೂ ಕುಸಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಮೆಕ್ಕೆಜೋಳ ವ್ಯಾಪಾರಸ್ಥರೊಬ್ಬರು ಹೇಳುತ್ತಾರೆ. ಉತ್ತಮ ದರದ ನಿರೀಕ್ಷೆಯಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆ ತಾಲೂಕಿನ ಬಹುತೇಕ ಹಳ್ಳಿಗಳ ರೈತರ ಕಣಗಳಲ್ಲಿ ಮೆಕ್ಕೆಜೋಳವನ್ನು ರಾಶಿ ಹಾಕಿ ಸಂಗ್ರಹಿಸಿಡಲಾಗಿದೆ.
ಕೈಕೊಟ್ಟ ಕಾದು ನೋಡುವ ತಂತ್ರ: ಒಂದು ಅಂದಾಜಿನ ಪ್ರಕಾರ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಬಹುತೇಕ ಹಳ್ಳಿಗಳಲ್ಲಿ ಶೇ. 30 ರಷ್ಟು ಮೆಕ್ಕೆಜೋಳ ಇದುವರೆಗೆ ಮಾರಾಟವಾಗಿದೆ. ಶೇ. 70 ರಷ್ಟು ರೈತರು ಉತ್ತಮ ದರಕ್ಕಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದರು. ಆದರೆ ಹಠಾತ್ ಮೆಕ್ಕೆಜೋಳ ದರ ಕುಸಿತ ಬೆಳೆಗಾರರನ್ನು ಚಿಂತೆಗೀಡುಮಾಡಿದೆ.
ಸಂಗ್ರಹಿಸಿಟ್ಟ ಮೆಕ್ಕೆಜೋಳ ತನ್ನ ತೇವಾಂಶವನ್ನು ಕಳೆದುಕೊಳ್ಳುತ್ತಿದೆ. ಕಳೆದ ನಾಲ್ಕಾರು ತಿಂಗಳುಗಳಿಂದ ಸಂಗ್ರಹಿಸಿಟ್ಟ ಕಾರಣ ತೂಕದಲ್ಲೂ ವ್ಯತ್ಯಾಸವಾಗಿರುತ್ತದೆ. ಹೀಗೆ ತೂಕ, ತೇವಾಂಶ ನಷ್ಟಗಳ ನಡುವೆ ಇದೀಗ ದರ ಕುಸಿತವೂ ಸೇರಿಕೊಂಡಿದೆ. ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಶಾಸಕರು ಮೆಕ್ಕೆಜೋಳ ದರ ಕುಸಿತದ ಕುರಿತು ವಿಧಾನಮಂಡಲ ಅ ಧಿವೇಶನದಲ್ಲಿ ಧ್ವನಿ ಎತ್ತುತ್ತಿಲ್ಲ. ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಸರ್ಕಾರದ ಗಮನ ಸೆಳೆಯಲು ಮುಂದಾಗಬೇಕಿದೆ.
ಸರ್ಕಾರ ಬೆಂಬಲ ಬೆಲೆ ಘೋಷಿಸಲಿ : ಒಂದು ಎಕರೆಯಲ್ಲಿ ಮೆಕ್ಕೆಜೋಳ ಬೆಳೆಯಲು 20 ರಿಂದ 30 ಸಾವಿರ ರೂ. ಖರ್ಚು ತಗಲುತ್ತದೆ. ಬಿತ್ತನೆ ಬೀಜದ ಪ್ಯಾಕೆಟ್ ಒಂದಕ್ಕೆ ಸುಮಾರು 2 ಸಾವಿರ ರೂ. ಇದೆ. ಇಂತಹ ಸಂದಿಗ್ಧ ಕಾಲದಲ್ಲಿ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕಿದೆ. ಕ್ವಿಂಟಲ್‌ಗೆ 2500 ರೂ. ನಿಗದಿಪಡಿಸಿ ಸಕಾಲದಲ್ಲಿ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಮೆಕ್ಕೆಜೋಳ ಬೆಳೆಗಾರರ ಆಗ್ರಹ. ಆದರೆ ಹಲವು ವರ್ಷಗಳ ಬರಗಾಲ, ಮಳೆ ಅಭಾವ ನಾನಾ ಸಂಕಷ್ಟಗಳ ಸಂಕೋಲೆಯಲ್ಲಿ ನರಳುತ್ತಿರುವ ಅನ್ನದಾತನ ನೆರವಿಗೆ ಧಾವಿಸಬೇಕಾದ ಸರ್ಕಾರ ಮಾತ್ರ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿರುವುದು ವಿಪರ್ಯಾಸ.
-ಬಿ. ನಿರಂಜನಮೂರ್ತಿ