ರಾಮನಗರ: ಕೊರೊನಾ ವೈರಾಣು ಭೀತಿ ಕಾರಣ ಸೋಮವಾರ ಜಿಲ್ಲಾ ಕೇಂದ್ರ ರಾಮನಗರದಲ್ಲಿ ರಂಗಿನಾಟಕ್ಕೆ ಎಂದಿನ ಹುರುಪು ಕಾಣಿಸಲಿಲ್ಲ. ಪ್ರತಿ ವರ್ಷ ಯುವಕರ ತಂಡಗಳು ನಗರವನ್ನೆಲ್ಲ ದ್ವಿಚಕ್ರವಾಹನಗಳಲ್ಲಿ ಸುತ್ತಾಡಿ ತಮ್ಮ ಸ್ನೇಹಿತರು, ಬಂಧುಗಳಿಗೆ ಬಣ್ಣವನ್ನು ಹಚ್ಚಿ ಸಂಭ್ರಮಿಸುತ್ತಿದ್ದ ದೃಶ್ಯ ಸೋಮವಾರ ನಗರದಲ್ಲಿ ಕಾಣಸಿಗಲಿಲ್ಲ. ಕೆಲವೊಂದು ಯುವಕರ ಗುಂಪುಗಳು ಮಾತ್ರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹೋಳಿ ಹಬ್ಬದ ಬಗ್ಗೆ ಜನಸಾಮಾನ್ಯರ ಗಮನ ಸೆಳೆದರು.
ಕಾಮನ ಹಬ್ಬ ಆಯಾ ಬಡಾವಣೆಗಳು ಮತ್ತು ತಮ್ಮ ಮನೆಗಳಿಗೆ ಮಾತ್ರ ಸೀಮಿತವಾಗಿತ್ತು. ಮಧ್ಯಾಹ್ನದ ವೇಳೆಗೆ ಸಂಭ್ರಮವೆಲ್ಲ ಮುಗಿದಿತ್ತು. ಹೋಳಿ ಹಬ್ಬಕ್ಕೆ ಅಗತ್ಯವಾಗಿ ಬೇಕಾಗಿರುವ ಬಣ್ಣ, ಬಣ್ಣದ ಪುಡಿ ನಿರೀಕ್ಷೆಯಂತೆ ಮಾರಾಟ ವಾಗಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಶೇ. 30 ರಿಂದ 40ರಷ್ಟು ಮಾತ್ರ ರಂಗಿನಾಟ ನಡೆದಿದೆ ಎಂದು ವ್ಯಾಪಾರಸ್ಥರು ಪ್ರತಿಕ್ರೀಯಿಸಿದ್ದಾರೆ.
ಪಿಯುಸಿ ಪರೀಕ್ಷೆಯೂ ಕಾರಣ: ಕೊರೊನಾ ಭೀತಿಯ ಜೊತೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿರುವುದು. ಹೋಳಿ ಹಬ್ಬದ ಸಂಭ್ರಮ ಕ್ಷೀಣಿಸಲು ಕಾರಣವಾಗಿದೆ ಎಂದು ಕೆಲವು ಯುವಕರು ಹೇಳಿದ್ದಾರೆ. 7ನೇ ತರಗತಿ ಮತ್ತು 10ನೇ ತರಗತಿ ಪರೀಕ್ಷೆಗಳು ಸಹ ಸದ್ಯ ದಲ್ಲೇ ಎದುರಾಗಲಿದ್ದು, ಬಹಳಷ್ಟು ವಿದ್ಯಾರ್ಥಿ ಗಳು ತಯಾರಿಯಲ್ಲಿರುವುದರಿಂದ ಹೋಳಿಯಲ್ಲಿ ಭಾಗವಹಿಸಲಿಲ್ಲ ಎಂದು ಗೊತ್ತಾಗಿದೆ. ಬಣ್ಣದಾಟದ ಸಂಪ್ರದಾಯ ಇರುವ ಕುಟುಂಬ ಗಳು ಕೊರೊನಾ ಭೀತಿಯಿಂದ ತಮ್ಮ ಸಂಭ್ರಮ ವನ್ನು ಮನೆಗೆ ಮಾತ್ರ ಸೀಮಿತಿ ಮಾಡಿಕೊಂಡಿದ್ದರು. ಹೆಣ್ಣುಮಕ್ಕಳು ಹೆಚ್ಚಾಗಿ ಕಾಣಲಿಲ್ಲ.
ನಗರದಲ್ಲಿ ಕಾಮಣ್ಣನಿಗೊಂದು ವೃತ್ತ! : ನಗರದ ಎಂ.ಜಿ.ರಸ್ತೆಯಲ್ಲಿ ಕಾಮಣ್ಣನ ಹೆಸರಿನ ವೃತ್ತವಿದೆ. ಕಾರಣ ಇಲ್ಲಿ ಪ್ರತಿ ವರ್ಷ ಕಾಮ ದಹನ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ರತಿ, ಮನ್ಮಥರ ಪ್ರತಿಮೆಗಳನ್ನು, ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ದಹಿಸುವ ಪ್ರತಿಮೆಗಳನ್ನು ಸ್ಥಾಪಿಸಲಾಗಿತ್ತು. ಸೋಮವಾರ ರಾತ್ರಿ ಕಾಮ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.