ಕೊಪ್ಪಳ: ನೆರೆಯ ಚೀನಾ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಭೀತಿಯಿಂದ ದೇಶದ ವಿವಿಧ ಉದ್ಯಮಗಳ ಮೇಲೆ ಭಾರಿ ಹೊಡೆತ ಬೀಳುತ್ತಿದೆ. ಅದರಲ್ಲೂ ಮಾರುಕಟ್ಟೆ ಮೇಲೆ ಕರಿನೆರಳು ಬೀಳಲಾರಂಭಿಸಿದ್ದು, ಇದರಿಂದ ನಮ್ಮ ದೇಶದ ರೈತ ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ.
ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೆರೆ ಬಂದು ಜನರನ್ನು ತಲ್ಲಣ ಗೊಳಿಸಿತ್ತು. ಇದರ ಮಧ್ಯೆ ರೈತ ಸಮೂಹ ಕಷ್ಟಪಟ್ಟು ಬೆಳೆ ತೆಗೆದಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಕೊರಾನಾ ವೈರಸ್ ಹಾವಳಿಯಿಂದಾಗಿ ವ್ಯಾಪಾರ ವಹಿವಾಟುಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿಲ್ಲ. ಕರ್ನಾಟಕದಿಂದ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಇತರೆ ಭಾಗಕ್ಕೆ ರಫ್ತಾಗುತ್ತಿದ್ದ ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಇತರೆ ಉತ್ಪನ್ನಗಳ ಖರೀದಿಗೆ ಖರೀದಾರರು ಮುಂದಾಗುತ್ತಿಲ್ಲ. ಇದು ರೈತರ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಉದಾಹರಣೆಗೆ: ಕೊಪ್ಪಳ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿ ಕ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಕಳೆದ ವರ್ಷ ಸುರಿದ ಉತ್ತಮ ಮಳೆಯಿಂದಾಗಿ ಜಿಲ್ಲಾದ್ಯಂತ ಹೆಚ್ಚಿನ ಮಟ್ಟದಲ್ಲಿ ಬೆಳೆದ ಸಜ್ಜೆ ಹಾಗೂ ಮೆಕ್ಕೆಜೋಳವನ್ನು ರೈತರು ಮಾರುಕಟ್ಟೆಗೆ ರವಾನೆ ಮಾಡಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆ ದೊರೆಯುತ್ತಿದೆ. ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ 2ತಿಂಗಳ ಹಿಂದೆ 2,000 ರಿಂದ 2,400 ವರೆಗೂ ಬೆಲೆ ದೊರೆಯುತ್ತಿತ್ತು. ಆದರೆ ಪ್ರಸಕ್ತ ಮೆಕ್ಕೆಜೋಳ ಪ್ರತಿ ಕ್ವಿಂಟಲ್‌ಗೆ 1500 ರೂ. ಇದೆ. ಮೇಲ್ಮಟ್ಟದಲ್ಲಿನ ದೊಡ್ಡ ದೊಡ್ಡ ವ್ಯಾಪಾರಸ್ಥರು ಇಲ್ಲಿನ ಮೆಕ್ಕೆಜೋಳ ಖರೀದಿ ಮಾಡುತ್ತಿಲ್ಲ. ಹೀಗಾಗಿ ಅನ್ಯ ರಾಜ್ಯಗಳಿಗೆ ರಫ್ತು ಮಾಡುವ ಜಿಲ್ಲೆಯ ಖರೀದಿದಾರರು ರೈತರ ಉತ್ಪನ್ನಗಳನ್ನ ಕಡಿಮೆ ದರಕ್ಕೆ ಖರೀದಿಸುತ್ತಿದ್ದಾರೆ. ಕುಕ್ಕುಟೋದ್ಯಮ ಸ್ತಬ್ಧ: ಕೊರೊನಾ ವೈರಸ್ ಭಾರತ ದೇಶಕ್ಕೆ ಅಷ್ಟೊಂದು ಹಾನಿಯನ್ನುಂಟು ಮಾಡಿಲ್ಲ. ಆದರೆ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧಡೆಯಿಂದ ಪ್ರಸಾರವಾಗುವ ವರದಿಗಳಿಂದಾಗಿ ಮಾರುಕಟ್ಟೆ ವ್ಯವಸ್ಥೆಗೆ ಪೆಟ್ಟು ಬೀಳುತ್ತಿದೆ.
ದೊಡ್ಡ ಮಟ್ಟದಲ್ಲಿ ಕುಕ್ಕುಟೋದ್ಯಮ ನಡೆಸುವ ಉದ್ಯಮಿಗಳು ವ್ಯಾಪಾರಸ್ಥರಿಂದ ಕೋಳಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿಲ್ಲ. ಹೀಗಾಗಿ ಕೋಳಿಗಳಿಗೆ ಬೇಕಾದ ಮೆಕ್ಕೆಜೋಳ ಹಾಗೂ ಸಜ್ಜೆ ಸೇರಿ ಇತರೆ ಧಾನ್ಯಗಳನ್ನು ಜಿಲ್ಲೆಯ ವ್ಯಾಪಾರಸ್ಥರಿಂದ ಖರೀದಿಸುತ್ತಿಲ್ಲ. ಇದರಿಂದ ಜಿಲ್ಲೆಯ ವ್ಯಾಪಾರಸ್ಥರು, ಹಾಗೂ ರೈತರಿಗೆ ಪೆಟ್ಟು ಬೀಳಲಾರಂಭಿಸಿದೆ. ದೇಶದಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿಗಿಂತ ಆಂಕತ ಮೂಡುವಂತ ವಿಚಾರಗಳೇ ಪ್ರಸಾರವಾಗುತ್ತಿವೆ.
ಉದ್ಯಮಕ್ಕೆ ಪೆಟ್ಟು: ದೇಶದಲ್ಲಿ ಬೆಳೆಯುವ ಶೇ. 60ರಷ್ಟು ಮೆಕ್ಕೆಜೋಳ ನಮ್ಮ ದೇಶದ ಕುಟ್ಟುಟೋದ್ಯಮ ಸೇರಿ ಔಷಧಿಗಳಿಗೆ ಪೂರೈಕೆಯಾಗುತ್ತದೆ. ಕೊರೊನಾ ವೈರಸ್ ಕುರಿತ ತಪ್ಪು ಮಾಹಿತಿಯಿಂದ ಉದ್ಯಮ ಮೇಲೆ ನೇರ ಪರಿಣಾಮವಾಗಿದೆ. ಇದರು ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿದೆ. ಮೆಕ್ಕೆಜೋಳ ಹಿಂದೆಂದೂ ಇಷ್ಟು ಕಡಿಮೆ ಬೆಲೆಗೆ ಕುಸಿದಿರಲಿಲ್ಲ. ಆದರೆ ಕೊರೊನಾ ಬಗ್ಗೆ ಜಾಗೃƒತಿ ಮೂಡಿಸುವ ಜೊತೆಗೂ ವ್ಯಾಪಾರೋದ್ಯಮದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ರೈತ ಬೆಳೆದ ಧಾನ್ಯದ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕಿದೆ.
ಕೊರೊನಾ ವೈರಸ್ ಆತಂಕದಿಂದಾಗಿ ಮಾರುಕಟ್ಟೆ ವ್ಯವಸ್ಥೆಗೆ ದೊಡ್ಡಪೆಟ್ಟು ಬಿದ್ದಿದೆ. ಮೆಕ್ಕೆಜೋಳ, ಸಜ್ಜೆ ರಫ್ತು ಆಗುತ್ತಿಲ್ಲ. ಮೇಲ್ಮಟ್ಟದಲ್ಲಿ ಉದ್ಯಮಿಗಳು ಖರೀದಿ ಮಾಡುತ್ತಿಲ್ಲ. ಇದರಿಂದ ಬೆಲೆ ಕುಸಿದಿದ್ದು, ಇದರಿಂದ ರೈತರಿಗೆ ನೇರ ಪರಿಣಾಮ ಬೀರುತ್ತಿದೆ. ಕುಕ್ಕುಟೋದ್ಯಮವಂತೂ ಇದರಿಂದ ತಲ್ಲಣಗೊಂಡಿದೆ. ಕೊರೊನಾ ವೈರಸ್ ಬಗ್ಗೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿ. ಆದರೆ ತಪ್ಪು ಗ್ರಹಿಕೆಯಿಂದಾಗಿ ಮಾರುಕಟ್ಟೆಗೆ ದೊಡ್ಡ ಹೊಡೆತ ಬಿದ್ದು ರೈತ ತಲ್ಲಣಗೊಳ್ಳುವಂತೆ ಮಾಡಿದೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮಕೈಗೊಳ್ಳಲಿ.
ಜಿ.ಜೆ. ಬೋರಾ, ರಾಷ್ಟ್ರೀಯ ರಫ್ತುದಾರ, ಕೊಪ್ಪಳ
–ದತ್ತು ಕಮ್ಮಾರ