ದೇವನಹಳ್ಳಿ: ಪ್ರಪಂಚವನ್ನೇ ಬೆಚ್ಚಿ ಬೀಳಿಸಿರುವ ಮಾರಕ ಕೊರೊನಾ ವೈರಸ್ ನಿಂದಾಗಿ ತಾಲೂಕಿನ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿ ಮುಖವಾಗಿದೆ.
ಕೊರೊನಾ ವೈರಸ್ ವಿಮಾನಯಾನದ ಮೇಲೂ ಪರಿಣಾಮ ಬೀರಿದ್ದು ಸದಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಸಿ ತಟ್ಟಿದೆ. ಲಕ್ಷಾಂತರ ಜನರು ಪ್ರಯಾಣ ಬೆಳೆಸುವ ಕೆಐಎಎಲ್‌ನಲ್ಲಿ ಬರುವ-ಹೋಗುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗಿದೆ.
ಕೆಐಎಎಲ್‌ನಿಂದ ಪ್ರಯಾಣಿಕರು ದೂರದ ಕಡೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ನಿಂದಾಗಿ ವಿದೇಶಗಳಿಗೆ ಪ್ರವಾಸ ಕೈಗೊಳ್ಳುವ ಗೋಜಿಗೆ ಜನ ಹೋಗುತ್ತಿಲ್ಲ. ಒಂದು ದಿನಕ್ಕೆ ಸಾವಿರಾರು ಪ್ರಯಾಣಿಕರು ಬೆಂಗಳೂರು ನಗರಕ್ಕೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ಇಳಿ ಮುಖವಾಗಿದ್ದು ಟ್ಯಾಕ್ಸಿ ಗಳಿಗೆ ಬಾರಿ ಹೊಡೆತ ಬಿದ್ದಿದೆ.
ಕೆಐಎಎಲ್ ವಿಮಾನ ನಿಲ್ದಾಣದಲ್ಲಿ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಇನ್ನಿತರೆ ಟ್ಯಾಕ್ಸಿ ಗಳು 12 ಸಾವಿರ ವಿದೆ. ಆದರೆ, ಕೆಲ ದಿನಗಳಿಗೆ 02 ಸಾವಿರ ಟ್ಯಾಕ್ಸಿ ಗಳಿಗೆ ಮಾತ್ರ ಪ್ರಯಾಣಿಕರು ಸಿಗುತ್ತಿದ್ದಾರೆ. ಒಂದು ದಿನಕ್ಕೆ ಒಂದು ಟ್ಯಾಕ್ಸಿ 03 ಟ್ರಿಪ್ ಕರೆದುಕೊಂಡು ಹೋಗುವುದೇ ಹೆಚ್ಚಾಗಿದೆ. ಕೆಐಎಎಲ್ ನಲ್ಲಿ ಓಡಾಡುವ ವಾಯು ವಜ್ರ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಕಡಿಮೆ ಆಗಿದ್ದು ಕೊರೊನಾ ವೈರಸ್ ಭೀತಿ ಕಾಡುತ್ತಿದೆ.
ಪ್ರಯಾಣದ ಮೇಲೆ ಶೇ.2-4 ಪರಿಣಾಮ : ಜಾಗತಿಕವಾಗಿ ಇತರೆ ವಿಮಾನ ನಿಲ್ದಾಣಗಳಂತೆ ಕೆಐಎಎಲ್ ವಿಮಾನ ನಿಲ್ದಾಣದ ಮೇಲೆ ಕೊರೊನಾ ವೈರಸ್ ಪರಿಣಾಮ ಬೀರಿದೆ. ಫೆ.20ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಟ್ಟಣೆ ಸಾಮಾನ್ಯ ಮಟ್ಟದಿಂದ ಶೇ.20 (ಅಂದರೆ ಕೋವಿಡ್ 19) ಪತ್ತೆ ಆಗುವ ಮೊದಲು ಮತ್ತು ಮಾರ್ಚ್ ನಲ್ಲಿ ಸಾಮಾನ್ಯ ಮಟ್ಟದಿಂದ ಶೇ.50 ಕಡಿಮೆ ಆಗಿದೆ. ಕೆಐಎಎಲ್ ವಿಮಾನ ನಿಲ್ದಾಣ ಸಾಮಾನ್ಯವಾಗಿ 14-15 ಸಾವಿರ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಹೊಂದಿದ್ದರೆ, ನಾವು ಸುಮಾರು 6-7 ಸಾವಿರ ದೈನಂದಿನ ಅಂತಾ ರಾಷ್ಟ್ರೀಯ ಪ್ರಯಾಣಿಕರನ್ನುನೋಡುತ್ತಿದ್ದೆವು. ಇದಲ್ಲದೆ ದೇಶಿಯ ವಿಮಾನ ಪ್ರಯಾಣಿಕರ ದಟ್ಟಣೆಯಲ್ಲಿ ಯಾವುದೇ ದೊಡ್ಡ ಪ್ರಮಾಣದ ಕುಸಿತ ಕಂಡಿಲ್ಲ. ದೇಶೀಯ ಪ್ರಯಾಣದ ಮೇಲೆ ಈಗಾಗಲೇ ಶೇ.2-4 ಪರಿಣಾಮಗಳು ಬೀರಿವೆ. ಭಾರತದಲ್ಲಿ ಹೆಚ್ಚಿನ ಪ್ರಕರಣ ದಾಖಲಾಗದರೆ ಮತ್ತಷ್ಟು ಇಳಿಕೆ ಕಾಣುವ ಸಾಧ್ಯತೆ ಇದೆ ಎಂದು ವಿಮಾನ ನಿಲ್ದಾಣ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
ಏರ್ ಪೋರ್ಟ್ ಟ್ಯಾಕ್ಸಿ ದಿನಕ್ಕೆ 2 ಸಾವಿರ ವಾಹನ ಓಡಾಡುತ್ತಿದ್ದವು. ಆದರೆ, ಕೊರೊನಾ ವೈರಸ್ ಪರಿಣಾಮ 900 ಟ್ಯಾಕ್ಸಿಗಳಿಗೆ ಇಳಿಮುಖವಾಗಿದೆ. ದೇಶದ ವಿವಿಧ ಭಾಗಗಳಿಂದ ಬರುವ ವಿಮಾನ ಪ್ರಯಾಣಿಕರು ಕಡಿಮೆ ಆಗಿದ್ದು ಟ್ಯಾಕ್ಸಿ ಚಾಲಕರು ಜೀವನ ಸಾಗಿಸಲು ಕಷ್ಟಕರವಾಗಿದೆ.
–ಕೃಷ್ಣ, ಟ್ಯಾಕ್ಸಿ ಚಾಲಕ
–ಎಸ್.ಮಹೇಶ್