Advertisement

ಭಯ ಬೇಡ; ಮುಂಜಾಗ್ರತೆ ಬೇಕು

10:33 AM Mar 10, 2020 | Suhan S |

ಹುಬ್ಬಳ್ಳಿ: ಉಷ್ಣಾಂಶ ಪ್ರದೇಶಗಳಲ್ಲಿ ಕೊರೊನಾ ವೈರಸ್‌ ಹರಡುವುದು ಕಡಿಮೆ. ರಾಜ್ಯದ ಜನ ಅದರಲ್ಲೂ ಹುಬ್ಬಳ್ಳಿ ಭಾಗದ ಜನರು ಈ ಸೋಂಕಿಗೆ ಭಯಪಡುವ ಅಗತ್ಯವಿಲ್ಲ. ಆದರೆ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಿಮ್ಸ್‌ನ ಜನರಲ್‌ ಮೆಡಿಸನ್‌ ವಿಭಾಗದ ಮುಖ್ಯಸ್ಥ ಡಾ| ಈಶ್ವರ ಎಸ್‌. ಹಸಬಿ ಹೇಳಿದರು.

Advertisement

ಕಿಮ್ಸ್‌ನ ಸುವರ್ಣ ಮಹೋತ್ಸವ ಭವನದಲ್ಲಿ ಕೊರೊನಾ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಶೀತ ಪ್ರದೇಶದಲ್ಲಿ ಹೆಚ್ಚಾಗಿ ಹರಡುತ್ತದೆ. ರಾಜ್ಯದಲ್ಲಿ ಸಾಮಾನ್ಯವಾಗಿ 25ರಿಂದ 30 ಡಿಗ್ರಿವರೆಗೆ ತಾಪಮಾನ ಇರುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿರುತ್ತದೆ. ಇಂತಹ ಪ್ರದೇಶಗಳಲ್ಲಿ ಕೊರೊನಾ ಹರಡುವುದು ಕಡಿಮೆ.

ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಒಳಪಟ್ಟವರು ಯಾರು ಇಲ್ಲ. ಅದು ನೆಗಡಿ, ಕೆಮ್ಮು, ಜ್ವರದ ರೀತಿ ಸಾಮಾನ್ಯವಾಗಿರುತ್ತದೆ. ಜನ ಇದರಿಂದ ಭಯಪಡುವ ಅಗತ್ಯವಿಲ್ಲ. ಕೊರೊನಾ ಬಗ್ಗೆ ಇನ್ನು ಅಧ್ಯಯನ ನಡೆಯುತ್ತಿದೆ. ಆದ್ದರಿಂದ ಈ ಕುರಿತು ಮುಂಜಾಗ್ರತೆ ವಹಿಸುವುದು ಹಾಗೂ ಜಾಗೃತಿಗೊಳಿಸುವುದು ಮುಖ್ಯ. ಜನ ಭೀತಿಯಿಂದ ದೂರವಿರಬೇಕು ಎಂದರು.

ಮಕ್ಕಳ ವಿಭಾಗದ ಪಿಜಿ ವಿದ್ಯಾರ್ಥಿನಿ ಡಾ| ತಾರಾ ಮಾತನಾಡಿ, ಎಲ್ಲ ಬಗೆಯ ಕೆಮ್ಮು, ಜ್ವರ, ನೆಗಡಿ ಕೊರೊನಾ ಅಲ್ಲ. ಅದಕ್ಕೆ ತನ್ನದೆಯಾದ ಮಾನದಂಡಗಳಿವೆ. ಕೊರೊನಾದಲ್ಲಿ ಬೇರೆ ಬೇರೆ ಲಕ್ಷಣಗಳಿವೆ. ರೋಗದ ಪರಿಹಾರಕ್ಕಿಂತ ಅದು ಬರುವ ಮುಂಚೆ ತಡೆಗಟ್ಟುವುದು ಹೇಗೆ ಎಂಬುದು ಮುಖ್ಯ ಎಂದು ಹೇಳಿದರು.

ಮೈಕ್ರೋ ಬಯೋಲಜಿ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ| ಪ್ರತಿಭಾ ಮಾತನಾಡಿ, ಕೊರೊನಾ ಶಂಕಿತ ರೋಗಿಯಿಂದ ಸೋಂಕು ಹರಡುತ್ತದೆ. ಅದು 1ರಿಂದ 4 ಅಡಿ ವರೆಗೆ ಸಿಂಪರಣೆ ಆಗುತ್ತದೆ. ಸೋಂಕಿತರಿಂದ ಸುಮಾರು 1 ಅಡಿ ದೂರವೇ ಇರಬೇಕು. ಯಾವುದೇ ವಸ್ತು ಮುಟ್ಟಿದಾಗ ಸ್ವತ್ಛವಾಗಿ ಆಲ್ಕೋಹಾಲ್‌ ಬೇಸ್ಡ್ ನಿಂದ ಕೈ ತೊಳೆದುಕೊಳ್ಳಬೇಕು. ಇದರಿಂದ ಸೋಂಕು ನಿಯಂತ್ರಿಸಬಹುದು. ಪದೇ ಪದೇ ಮೂಗು, ಬಾಯಿ, ಕಣ್ಣು ಮುಟ್ಟಿಕೊಳ್ಳಬಾರದು. ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ವೈದ್ಯರು ಚಿಕಿತ್ಸೆ ನೀಡುವಾಗ ಗೌನ್‌, ಮಾಸ್ಕ್, ಕನ್ನಡಕ ಹಾಕಿಕೊಳ್ಳಬೇಕು. ಚಿಕಿತ್ಸೆ ನಂತರ ಅವನ್ನು ಸೂಕ್ಷ್ಮವಾಗಿ ತೆಗೆಯಬೇಕು. ಜೈವಿಕ ವಿಧಾನ ಅನುಸಾರ ರೋಗಿಯ ರಕ್ತ, ಕಫದ ಮಾದರಿ ಪಡೆದುಕೊಳ್ಳಬೇಕು. ಎಲ್ಲ ಆರೋಗ್ಯ ಸಿಬ್ಬಂದಿ ಮುಖಕ್ಕೆ ಮಾಸ್ಕ್ ಬಳಸಬೇಕು ಎಂದರು.

Advertisement

ರೋಗ ನಿರೋಧಕ ಮತ್ತು ಸಮುದಾಯ ಆರೋಗ್ಯ ವಿಭಾಗದ ಪಿಜಿ ವಿದ್ಯಾರ್ಥಿನಿ ಡಾ| ಕಾಶವ್ವ ಅಂದಾನಿಗೌಡರ ಮಾತನಾಡಿ, ರೋಗದ ಬಗ್ಗೆ ಅನೇಕರಲ್ಲಿ ಅಪನಂಬಿಕೆ ಇದೆ. ಭಾರತದಲ್ಲಿ 1100 ಪ್ರಕರಣಗಳ ವರದಿ ಆಗಿದ್ದು, ಅದರಲ್ಲಿ 43 ಪ್ರಕರಣ ಪತ್ತೆಯಾಗಿವೆ. ವೈರಸ್‌ ತಡೆಗಟ್ಟಲು ಸ್ವತ್ಛತೆ ಕಾಪಾಡಬೇಕು. ಜನಜಂಗುಳಿ ಪ್ರದೇಶದಿಂದ ದೂರವಿರಬೇಕು. ಜ್ವರ ಮತ್ತು ಕೆಮ್ಮು ಬಂದ ಜನರಿಂದ ದೂರ ಇರಬೇಕು. ಅರ್ಧಂಬರ್ಧ ಬೇಯಿಸಿದ ಮಾಂಸ ಸೇವಿಸಬಾರದು ಎಂದರು.

ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ| ದೀಪಾ ಅವರು ಮೆಡಿಸನ್‌ ಕುರಿತು ಮಾತನಾಡಿದರು. ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ| ಅರುಣಕುಮಾರ ಸಿ. ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೊರೊನಾ ಬಗ್ಗೆ ಜನಜಾಗೃತಿಗಾಗಿ ಕಿಮ್ಸ್‌ ನಿಂದ ಮನೆ ಮನೆಗೆ ಮಾಹಿತಿ ತಲುಪಿಸುವ ಅಭಿಯಾನ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೆಲವು ಶಾಲೆ-ಕಾಲೇಜುಗಳಲ್ಲಿ ಈ ಕುರಿತು ಕಾರ್ಯಕ್ರಮ ಆಯೋಜಿಸಲಾಗಿದೆ. ನೋಡಲ್‌ ಅಧಿಕಾರಿಯನ್ನೂ ನಿಯೋಜಿಸಲಾಗಿದೆ. ಕಿಮ್ಸ್‌ನಲ್ಲಿ ಚಿಕಿತ್ಸೆಗೆ ಅವಶ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಜನರು ಭಯ ಪಡುವ ಅಗತ್ಯವಿಲ್ಲ.  -ಡಾ| ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್‌ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next