Advertisement
ರಾತ್ರಿ 11 ಗಂಟೆ ಸುಮಾರಿಗೆ ಹಠಾತ್ ಆರಂಭವಾದ ಮಳೆ ಬೆಳಗಿನ ಜಾವದವರೆಗೆ ಬಿಟ್ಟು ಬಿಡದೆ ಸುರಿದಿದೆ. ನಗರದ ತಗ್ಗು ಪ್ರದೇಶದ ಮನೆಗಳು, ಅಂಗಡಿಗಳಿಗೆ ಮಳೆ ನೀರು ನುಗ್ಗಿದ್ದರಿಂದ ನಾಗರಿಕರು ತೊಂದರೆ ಅನುಭವಿಸುವಂತಾಯಿತು. ಜತೆಗೆ ಬೆಳಗ್ಗೆಯೂ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಆಗಿದ್ದರಿಂದ ಶಾಲೆಗೆ ತೆರಳುವ ಮಕ್ಕಳು ತೊಂದರೆಗೆ ಸಿಲುಕಿದರು.
Related Articles
Advertisement
ತಾಲೂಕಿನ ತುಮಕುಂಟಾ, ನಾಗಾಇದಲಾಯಿ, ಚಿಮ್ಮನಚೋಡ, ಐನಾಪುರ, ನಿಡಗುಂದಾ, ಸುಲೇಪೇಟ, ಐನೋಳಿ, ದೇಗಲಮಡಿ, ಹಸರಗುಂಡಗಿ, ಸಾಲೇಬೀರನಳ್ಳಿ, ಕನಕಪುರ ಗ್ರಾಮಗಳಲ್ಲಿ ಗುರುವಾರ ಸಂಜೆ ಬಿರುಗಾಳಿ ಸಮೇತ ಸುರಿದ ಭಾರಿ ಮಳೆಯಿಂದಾಗಿ ಹಿಂಗಾರಿ ಹಂಗಾಮಿನಲ್ಲಿ ರೈತರು ಬೆಳೆ ಜೋಳದ ಬೆಳೆ ಕೆಲವು ಗ್ರಾಮಗಳಲ್ಲಿ ನೆಲಕ್ಕೆ ಬಾಗಿವೆ.
ತುಮಕುಂಟಾ ಗ್ರಾಮದಲ್ಲಿಯೇ ಅತಿ ಹೆಚ್ಚು 40 ಹೆಕ್ಟೇರ್ ಜಮೀನಿನಲ್ಲಿ ಬೆಳೆದ ಜೋಳದ ಬೆಳೆ ಸಂಪೂರ್ಣವಾಗಿ ನೆಲಕ್ಕೆಬಾಗಿ ಹಾನಿ ಆಗಿದೆ ಎಂದು ರೈತ ಜಗನ್ನಾಥರೆಡ್ಡಿ ತಿಳಿಸಿದ್ದಾರೆ. ದೇಗಲಮಡಿ, ಐನೋಳಿಯಲ್ಲಿ ಶುಕ್ರವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ವ್ಯಾಪಕ ಮಳೆ ಆಗಿರುವುದರಿಂದ ಕಟಾವಿಗೆ ಬಂದ ತೊಗರಿ ಬೆಳೆ ಹಾನಿಯಾಗಿದೆ. ಪಟ್ಟಣದಲ್ಲಿ ವ್ಯಾಪಕ ಮಳೆ ಆಗಿದ್ದು, ಮಳೆಗಾಲದಲ್ಲಿ ಇಂತಹ ಮಳೆ ಆಗಿಲ್ಲ.
ಈಗ ಮಳೆ ಆದರೆ ಜೋಳ ಬೆಳೆಗಳು ಚೇತರಿಕೆ ಆಗಲಿವೆ. ಆದರೆ ತೊಗರಿ ರಾಶಿಗೆ ಭಾರಿ ಅಡ್ಡಿ ಆಗಲಿದೆ. ಮಳೆ ಅಭಾವದ ಮಧ್ಯೆ ಉಳಿದ ತೊಗರಿ ಬೆಳೆಯನ್ನು ರೈತರು ಕೆಲವು ಗ್ರಾಮಗಳಲ್ಲಿ ರಾಶಿ ಮಾಡಿಕೊಳ್ಳುತ್ತಿದ್ದಾರೆ ಈಗ ಮಳೆ ಬಂದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ ಎಂದು ರೈತ ಮುಖಂಡ ಭೀಮಶೆಟ್ಟಿ ಎಂಪಳ್ಳಿ ತಿಳಿಸಿದ್ದಾರೆ. ಗಡಿಕೇಶ್ವಾರ, ಕೊಡಂಪಳ್ಳಿ, ಕರ್ಚಖೇಡ, ಗಣಾಪೂರ, ಗರಗಪಳ್ಳಿ, ಇರಗಪಳ್ಳಿ, ಕೆರೋಳಿ, ಭಂಟನಳ್ಳಿ, ಕೊರವಿ, ನಾವದಗಿ, ರಟಕಲ್, ಮೋಘಾ, ಕೋಡ್ಲಿ, ಹಲಚೇರಾ ಗ್ರಾಮಗಳಲ್ಲಿ ಕಡಲೆ ಬೆಳೆಯ ಹೂವು ಉದುರಿ ಹೋಗಿವೆ ಎಂದು ರೈತರಾದ ವಿಜಯಕುಮಾರ ಚೇಂಗಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇರುವುದರಿಂದ ತೊಗರಿ ರಾಶಿಗೆ ತೊಂದರೆ ಆಗಿದೆ. ಅಲ್ಲದೇ ಈಗ ಮಳೆ ಸುರಿಯುತ್ತಿರುವುದರಿಂದ ರೈತರು ಆತಂಕ ಪಡುವಂತಾಗಿದೆ. ಜಿಪಂ ಸದಸ್ಯ ಗೌತಮ ಪಾಟೀಲ ಭೇಟಿ: ತುಮಕುಂಟಾ ಗ್ರಾಮದಲ್ಲಿ ಮಳೆಯಿಂದ ಜೋಳದ ಬೆಳೆ ಹಾನಿಗೊಂಡ ರೈತನ ಹೊಲಕ್ಕೆ ಜಿಪಂ ಸದಸ್ಯ ಗೌತಮ ಪಾಟೀಲ, ರೈತ ಮುಖಂಡರಾದ ವಿಠಲರೆಡ್ಡಿ, ಜಗನ್ನಾಥರೆಡ್ಡಿ ಪಾಟೀಲ ಹಾಗೂ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಕೃಷಿ ನಿರ್ದೇಶಕ ಅನೀಲಕುಮಾರ ರಾಠೊಡ ಭೇಟಿ: ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಂಡಿರುವ ಹೊಲಗಳಿಗೆ ಸಹಾಯಕ ಕೃಷಿ ನಿರ್ದೇಶಕ ಅನೀಲಕುಮಾರ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.
ಮಳೆ ವಿವರ: ಚಿಂಚೋಳಿ 8 ಮಿ.ಮೀ, ಐನಾಪುರ 35.2 ಮಿ.ಮೀ, ಕುಂಚಾವರಂ 20.4 ಮಿ.ಮೀ, ಸುಲೇಪೇಟ 13.4 ಮಿ.ಮೀ, ಚಿಮ್ಮನಚೋಡ 48.2 ಮಿ.ಮೀ, ಕೋಡ್ಲಿ 36 ಮಿ.ಮೀ, ನಿಡಗುಂದಾ 43 ಮಿ.ಮೀ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಸಿಬ್ಬಂದಿ ಕಂಟೆಪ್ಪ ತಿಳಿಸಿದ್ದಾರೆ.