Advertisement

ಕೊತ್ತಂಬರಿ ಬೆಳೀರೀ

12:23 PM Jun 11, 2019 | Sriram |

ಕೊತ್ತಂಬರಿ ಸೊಪ್ಪು ಮುಗಿದ ಮೇಲೆ ಅದರ ಮೇಲೆ ಪುನಃ ಬೀಜಗಳನ್ನು ಉದುರಿಸಿ ಎರಡು ಮೂರು ಇಂಚು ಮಣ್ಣು ಹಾಕಿದರೆ ಮತ್ತೆ ಸೊಪ್ಪು ಬರುತ್ತದೆ. ಹೀಗೆ ಮೂರು ಬೆಳೆ ತೆಗೆಯಬಹುದು. ನಂತರ ನಾಲ್ಕನೇ ಬೆಳೆಗೆ ಮಣ್ಣು ಖಾಲಿ ಮಾಡಿ ಇದೇ ವಿಧಾನವನ್ನು ಅನುಸರಿಸಿದರಾಯಿತು.

Advertisement

ಕೊತ್ತಂಬರಿ ಸೊಪ್ಪು ಕೇವಲ ಅಡುಗೆಗೇ ಸೀಮಿತವಾಗಿಲ್ಲ. ಇದರಲ್ಲಿ ಔಷಧೀಯ ಗುಣವೂ ಇದೆ. ಸೊಪ್ಪಿನಲ್ಲಿ ವಿಟಮಿನ್‌ ಸಿ ಮತ್ತು ಎ ಅಂಶವಿದೆ. ಹಾಗೂ ಇದು ಮೆಗ್ನಿàಶೀಯಮ…, ಪೊಟಾಸಿಯಂ ಕ್ಯಾಲ್ಸಿಯಮ್‌ ನಂಥ ಖನಿಜಾಂಶಗಳನ್ನು ಹೊಂದಿದ್ದು ಉತ್ತಮ ಆರೋಗ್ಯಕ್ಕೆ ಅತ್ಯಂತ ಸಹಕಾರಿಯಾಗಿದೆ. ಸೊಪ್ಪನ್ನು ಜಜ್ಜಿ ಅದರ ರಸವನ್ನು ನೀರಿನಲ್ಲಿ ಸೇರಿಸಿ ನಿಯಮಿತವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಜೊತೆಗೆ, ಜೀರ್ಣಕ್ರಿಯೆಯಲ್ಲಿ, ಬೊಜ್ಜು ಕರಗಿಸುವಲ್ಲಿ ಅತೀ ಪಿತ್ತ, ಅಲರ್ಜಿ, ಕೆಲವು ಚರ್ಮದ ಖಾಯಿಲೆ ಹೀಗೆ ಹಲವು ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣ.

ಕೆಲವು ಋತುವಿನಲ್ಲಿ ಕೊತ್ತಂಬರಿ ಸೊಪ್ಪು ದುಬಾರಿಯಾಗುವುದಲ್ಲದೆ ದೊರಕುವುದೇ ಕಷ್ಟವಾಗುತ್ತದೆ. ಎಲ್ಲರಿಗೂ ಹೊಲ ಅಥವಾ ಜಾಗದ ಸೌಲಭ್ಯವಿರುವುದಿಲ್ಲ. ನಮ್ಮೆಲ್ಲರ ಅಡುಗೆ ಮನೆಯಲ್ಲಿ ಇರುವ ಕೊತ್ತಂಬರಿ ಬೀಜದಿಂದ, ನಮ್ಮ ಮನೆಯ ಪುಟ್ಟ ಅಂಗಳದಲ್ಲೇ ಖರ್ಚೇ ಇಲ್ಲದೇ ರಾಸಾಯನಿಕ ಗೊಬ್ಬರದ ಹಂಗಿಲ್ಲದೇ, ಸಾವಯವ ಗೊಬ್ಬರದಿಂದ ಕೊತ್ತಂಬರಿ ಬೆಳೆಯಬಹುದು. ಅದು ಹೀಗೆ…

ಪಾಟ್‌ ಅಥವಾ ಹಳೆಯ ಪ್ಲಾಸ್ಟಿಕ್‌ ಬಕೆಟ್‌, ಚೀಲ ಯಾವುದೇ ಆಗಲಿ. ಅದರಲ್ಲಿ ಮೂರು ತೂತು ಮಾಡಿ. ಅದಕ್ಕೆ ಒಣಗಿದ ಕೊಟ್ಟಿಗೆ ಗೊಬ್ಬರ, ಸ್ವಲ್ಪ ತೋಟದ ಮಣ್ಣು ಬೆರೆಸಿ ಅದನ್ನು ಮೂರು ಭಾಗಗಳಾಗಿ ಮಾಡಿ ಒಂದು ಭಾಗ ಮಣ್ಣು ಮಾತ್ರ ತುಂಬಿ. ನಂತರ, ಅಡುಗೆ ಮನೆಯಲ್ಲಿ ಕತ್ತರಿಸಿದ ಸೊಪ್ಪು ತರಕಾರಿಯ ತ್ಯಾಜ್ಯ ಮತ್ತು ಕೊಳೆತ ಹಣ್ಣು ತರಕಾರಿಗಳನ್ನು

(ನಿಂಬೆಹಣ್ಣು, ಟೊಮೊಟೋ ಹುಳಿ ಪದಾರ್ಥಗಳನ್ನು ಹೊರತು ಪಡಿಸಿ) ಅದರ ಮೇಲೆ ಹಾಕಿ. ಎರಡನೇ ಭಾಗದ ಮಣ್ಣನ್ನು ಅದರ ಮೇಲೆ ಮುಚ್ಚಿ. ನಂತರ ಕೊತ್ತಂಬರಿ ಬೀಜವನ್ನು ಹಾಗೆ ಕೈಯಲ್ಲಿ ಸುಮಾರಾಗಿ ಉಜ್ಜಿದಂತೆ ಮಾಡಿ ತೆಳುವಾಗಿ ಉದುರಿಸಿ. ಮೂರನೇ ಭಾಗದ ಮಣ್ಣನ್ನು ಬೀಜದ ಮೇಲೆ ಎರಡರಿಂದ ಮೂರು ಇಂಚು ಇರುವಂತೆ ನೋಡಿಕೊಳ್ಳಿ. ಇವೆಲ್ಲಾ ವಿಧಾನವೂ ಪಾಟ್‌ನ ಮುಕ್ಕಾಲು ಭಾಗಕ್ಕೆ ಸೀಮಿತವಾಗಿರಬೇಕು.

Advertisement

ಇನ್ನುಳಿದ ಭಾಗದಲ್ಲಿ ಕೊತ್ತಂಬರಿ ಸೊಪ್ಪು ಹುಲುಸಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕು. ನಂತರ ನೀರನ್ನು ದಿನಕ್ಕೆ ಒಂದು ಬಾರಿ ನಿಧಾನವಾಗಿ ಚಿಮುಕಿಸಿ. ಮನೆಯ ಅಂಗಳದ ನೆರಳಿನಲ್ಲಿ ಯಾವುದೋ ಒಂದು ಮೂಲೆಯಲ್ಲಿ ಇಟ್ಟರೂ ಹತ್ತು ದಿನಗಳಲ್ಲಿ ಸೊಪ್ಪು ಬರುತ್ತದೆ. ಸಾಧಾರಣವಾಗಿ ಇದಕ್ಕೆ ಯಾವುದೇ ರೋಗ ಭಾಧೆಯು ಇಲ್ಲ. ನಾಟಿ ಕೊತ್ತಂಬರಿ ಬೀಜ ಹಾಕಿದರಂತೂ ಇನ್ನೂ ಉತ್ತಮ. ಇಷ್ಟು ಮಾಡಿದರೆ ಸಾಕು. ಘಮಘಮಿಸುವ ಕೊತ್ತಂಬರಿ ಸೊಪ್ಪು ನಿಮ್ಮದಾಗುತ್ತದೆ. ನಿಮಗೆ ಬೇಕಾದಾಗ ತಾಜಾ ಸೊಪ್ಪನ್ನು ಸ್ವಲ್ಪ ಸ್ವಲ್ಪವೇ ಬಿಡಿಸಿಕೊಳ್ಳುತ್ತಾ ಹೋಗಿ.

ಸೊಪ್ಪು ಮುಗಿದ ಮೇಲೆ ಅದರ ಮೇಲೆ ಪುನಃ ಬೀಜಗಳನ್ನು ಉದುರಿಸಿ ಎರಡು ಮೂರು ಇಂಚು ಮಣ್ಣು ಹಾಕಿದರೆ ಸೊಪ್ಪು ಬರುತ್ತದೆ. ಹೀಗೆ ಮೂರು ಬೆಳೆ ತೆಗೆಯಬಹುದು. ನಂತರ ನಾಲ್ಕನೇ ಬೆಳೆಗೆ ಮಣ್ಣು ಖಾಲಿ ಮಾಡಿ ಮೇಲಿನ ವಿಧಾನವನ್ನು ಅನುಸರಿಸಿದರಾಯಿತು. ಇನ್ನೊಂದು ಪಾಟ…ನಲ್ಲಿ ಇದೇ ವಿಧಾನವನ್ನು ಅನುಸರಿಸಿದರೆ, ಒಂದು ಪಾಟ್‌ನಲ್ಲಿ ಸೊಪ್ಪು ಮುಗಿಯುವ ವೇಳೆಗೆ ಮತ್ತೂಂದು ಪಾಟ್‌ನಲ್ಲಿ ಸೊಪ್ಪು ಸಿದ್ಧವಾಗಿರುತ್ತದೆ. ನಮ್ಮ ಮನೆಯಂಗಳದಿ ನಮ್ಮ ಕೈಯಾರೆ ಬೆಳೆದು ಉಪಯೋಗಿಸುವ ಪರಿಪಾಟ ಒಳಿತಲ್ಲವೇ? ಏನಂತೀರಿ?

– ರತ್ನಮ್ಮ ಎ.ಆರ್‌. ಅರಕಲಗೂಡು

Advertisement

Udayavani is now on Telegram. Click here to join our channel and stay updated with the latest news.

Next