ಬಳ್ಳಾರಿ :’ಮಾಂಗಲ್ಯ ಸರದಲ್ಲಿರುವ ಕೆಂಪು ಹವಳ ಮಾತಾಡಿದ್ದು, ಇದರಿಂದಾಗಿ ಪತಿ ಸಾಯುತ್ತಾನೆ’ ಎನ್ನುವ ಗುಲ್ಲು ಬಳ್ಳಾರಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಂಗಳವಾರ ಸಂಜೆಯಿಂದ ಕಾಳ್ಗಿಚ್ಚಿನಂತೆ ಹಬ್ಬಿ ಹಲವು ಮುತ್ತೈದೆಯರು ತಮ್ಮ ಕರಿಮಣಿ ಸರದಲ್ಲಿದ್ದ ಹವಳಗಳನ್ನು ಕುಟ್ಟಿ ಪುಡಿಗೈದಿದ್ದರು. ಈ ಸುಳ್ಳು ಸುದ್ದಿಯನ್ನು ಯಾರು ಹಬ್ಬಿಸಿದ್ದು ಎನ್ನುವ ಹಲವು ಪ್ರಶ್ನೆಗಳು ಮೂಡಿದ್ದು ಉತ್ತರ ಸಿಗುವುದೇ ಕಷ್ಟವಾಗಿದೆ.
ನಾಗಾ ಸಾಧುಗಳ ಮೇಲೆ ಅನುಮಾನ
ಬಳ್ಳಾರಿಯ ಹೂವಿನ ಹಡಗಲಿಯಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಓರ್ವ ನಾಗಾ ಸಾಧು ಮತ್ತು ನಾಲ್ವರು ಸ್ವಾಮೀಜಿಗಳನ್ನು ಸಾರ್ವಜನಿಕರ ದೂರಿನ ಮೇಲೆ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಬಿಹಾರದಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಅವರಿಗೆ ಈ ಘಟನೆಯ ಅರಿವೆ ಇಲ್ಲ. ಇದರಲ್ಲಿ ಅವರ ಯಾವುದೇ ಪಾತ್ರ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾವಿರಾರು ಮಹಿಳೆಯರಿಂದ ಹವಳ ಪುಡಿ!
ಸುಳ್ಳು ಸುದ್ದಿ ಸಾಮಾಜಿಕ ತಾಣ, ಫೋನ್ ಕರೆಗಳ ಮೂಲಕ ರಾತ್ರಿ ಬೆಳಾಗಾಗುವುದರ ಒಳಗೆ ಹರಡಿ ಬಳ್ಳಾರಿ ,ಜಿತ್ರದುರ್ಗ, ರಾಯಚೂರು, ದಾವಣಗೆರೆ , ಕೊಪ್ಪಳ ಜಿಲ್ಲೆಯಲ್ಲಿ ಸಾವಿರಾರು ಮಹಿಳೆಯರು ಹವಳಗಳನ್ನು ಪುಡಿಗೈದಿರುವ ಬಗ್ಗೆ ವರದಿಯಾಗಿದೆ. ವಿದ್ಯಾವಂತ ಮಹಿಳೆಯರೂ ಈ ಗುಲ್ಲನ್ನು ನಂಬಿ ಹವಳಗಳನ್ನು ಪುಡಿಗೈದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ಆಂಧ್ರದಿಂದ ಮಹಿಳೆಯೊಬ್ಬರು ಬಳ್ಳಾರಿಯ ಸಂಬಂಧಿ ಮಹಿಳೆಯೊಬ್ಬರಿಗೆ ಕರೆ ಮಾಡಿದ ಬಳಿಕವೇ ಈ ಸುದ್ದಿ ಹರಡಿದೆ ಎಂದು ಹೇಳಲಾಗಿದೆ.