ಉಡುಪಿ: ನಕಲು, ದುರ್ಬಳಕೆ, ಮೋಸ, ದುರಾಚಾರ ಆರೋಪಗಳು ಗ್ರಾಹಕ ನ್ಯಾಯಾಲಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.
ಉಡುಪಿಯ ಭಾರತ್ ಕೋ ಆಪರೇಟಿವ್ ಬ್ಯಾಂಕಿನ ಗ್ರಾಹಕರಾದ ನಾಗರಾಜ ಮೋಹನ್ ಬಂಗೇರ ಎಂಬವರು ಬ್ಯಾಂಕಿನಲ್ಲಿ ತಮ್ಮ ಕೆವೈಸಿ ಸಂಖ್ಯೆ ತಮ್ಮ ಗಮನಕ್ಕೆ ತಾರದೆ ಬದಲಾಯಿಸಿ ಕೆಲ ವ್ಯಕ್ತಿಗಳಿಗೆ ಚೆಕ್ ಪುಸ್ತಕವನ್ನು ನೀಡಿ ಜಗದೀಶ್ ಅಮೀನ್ ಇವರೊಂದಿಗೆ ಸೇರಿ ಸಹಿ ವ್ಯತ್ಯಾಸವಿರುವ 2015-2016 ನೇ ಸಾಲಿನ ಚೆಕ್ ಗಳಲ್ಲಿ 12,50,000 ರೂ. ಮೊತ್ತದ ನಕಲಿ ಸಹಿ ದುರ್ಬಳಕೆ ಮೋಸ ಮಾಡಲಾಗಿದೆ ಎಂದು ಆರೋಪ ಹೊರಿಸಿ ಒಟ್ಟು 15ಲಕ್ಷದ 50ಸಾವಿರ ರೂ. ಪರಿಹಾರ ಕೋರಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಇಂತಹ ಯಾವುದೇ ಕೃತ್ಯ ನಡೆದಿರುವುದಿಲ್ಲ, ದೂರುದಾರ ನಾಗರಾಜ್ ಮೋಹನ್ ಬಂಗೇರ ಅವರು ಅಕ್ರಮ ಲಾಭ ಗಳಿಸಲು ಈ ದೂರು ನೀಡಿರುವುದಾಗಿ ಬ್ಯಾಂಕ್ ಮತ್ತು ಜಗದೀಶ್ ಅಮೀನ್ ಅವರು ಹೇಳಿಕೆ ನೀಡಿದ್ದರು.
ದೂರುದಾರರ ವಾದ ಪ್ರತಿವಾದ ಮತ್ತು ಮೂರನೇ ಪ್ರತಿವಾದಿಯಾಗಿದ್ದ ಜಗದೀಶ್ ಅಮೀನ್ ಅವರ ವಕೀಲರು ಸಲ್ಲಿಸಿದ ”ಸುಪ್ರೀಂ ಕೋರ್ಟ್, ರಾಷ್ಟ್ರೀಯ ಆಯೋಗದ” ತೀರ್ಪುಗಳನ್ನು ಆಧರಿಸಿ ಜಿಲ್ಲಾ ಗ್ರಾಹಕ ನ್ಯಾಯ ಪೀಠದ ಅಧ್ಯಕ್ಷ ಸುನಿಲ್ ಟಿ. ಮಸರೆಡ್ಡಿ ಮತ್ತು ಸುಜಾತಾ ಬಿ.ಕೊರಳ್ಳಿ ಅವರನ್ನೊಳಗೊಂಡ ನ್ಯಾಯ ಪೀಠ ದೂರನ್ನು ವಜಾಗೊಳಿಸಿದೆ.
ದೂರುದಾರರು ಘಟನೆಯು ಯಾವಾಗ ತಮ್ಮ ತಿಳುವಳಿಕೆಗೆ ಬಂದಿತು ಎಂದು ತಿಳಿಸಿರುವುದಿಲ್ಲ, ನಕಲು, ದುರ್ಬಳಕೆ, ಮೋಸ ದುರಾಚಾರದಂತಹ ಆರೋಪಗಳು ಗ್ರಾಹಕ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನ್ಯಾಯಪೀಠ ನಿರ್ಧರಿಸಿದೆ. ಜಗದೀಶ್ ಅಮೀನ್ ಅವರ ಪರ ವಿವೇಕಾನಂದ ಮಲ್ಯ ಕಾರ್ಕಳ ವಾದ ಮಂಡಿಸಿದ್ದರು.