ಲಕ್ನೋ: ಗಲಭೆಯನ್ನು ನಿಯಂತ್ರಿಸುವ ಸಂದರ್ಭದಲ್ಲಿ ಕೆಲವು ಪೊಲೀಸರು ಪ್ಲಾಸ್ಟಿಕ್ ಕುರ್ಚಿ ಮತ್ತು ಬೆತ್ತದ ಬುಟ್ಟಿಯನ್ನು ರಕ್ಷಣೆಗಾಗಿ ಬಳಸಿಕೊಂಡಿದ್ದ ಫೋಟೋ ವೈರಲ್ ಆದ ನಂತರ ಠಾಣಾಧಿಕಾರಿ ಹಾಗೂ ಇತರ ಮೂವರು ಪೊಲೀಸರನ್ನು ಅಮಾನತುಗೊಳಿಸಿರುವ ಘಟನೆ ಉತ್ತರಪ್ರದೇಶದ ಉನ್ನಾವೊದಲ್ಲಿ ನಡೆದಿದೆ.
ಇದನ್ನೂ ಓದಿ:ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಮಾಜಿ ಎನ್ ಕೌಂಟರ್ ಸ್ಪೆಷಲಿಸ್ಟ್ ಶರ್ಮಾ ಬಂಧನ
ಪೊಲೀಸರ ವೈರಲ್ ಆದ ಫೋಟೋವನ್ನು ಗಮನಿಸಿದ ಲಕ್ನೋ ವಲಯದ ಇನ್ಸ್ ಪೆಕ್ಟರ್ ಜನರಲ್ ಲಕ್ಷ್ಮಿ ಸಿಂಗ್ ಅವರು, ಎಸ್ ಎಚ್ ಒ(ಠಾಣಾಧಿಕಾರಿ) ದಿನೇಶ್ ಚಂದ್ರ ಮಿಶ್ರಾ ಹಾಗೂ ಇತರ ಮೂವರು ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ಅಸಮರ್ಥತೆ ಮತ್ತು ವೃತ್ತಿಪರರಲ್ಲದ ಕಾರಣ ಅಮಾನತುಗೊಳಿಸುವಂತೆ ಆದೇಶ ನೀಡಿರುವುದಾಗಿ ವರದಿ ವಿವರಿಸಿದೆ.
ಉತ್ತರಪ್ರದೇಶ ಪೊಲೀಸರು ಟ್ವೀಟ್ ನಲ್ಲಿ ತಿಳಿಸಿರುವಂತೆ, ಯಾವುದೇ ರೀತಿಯ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಜಿಲ್ಲೆಗಳಿಗೂ ಅಗತ್ಯವಿರುವ ಪರಿಕರ(ಲಾಠಿ, ರಕ್ಷಣಾ ಕವಚ, ಹೆಲ್ಮೆಟ್) ನೀಡಲಾಗಿದ್ದು, ಈ ಬಗ್ಗೆ ಎಸ್ ಒಪಿಯನ್ನು ಕೂಡಾ ಕಳುಹಿಸಲಾಗಿತ್ತು ಎಂದು ವಿವರಿಸಿದೆ.
ಉನ್ನಾವೋದಲ್ಲಿನ ಕಾನೂನು, ಸುವ್ಯವಸ್ಥೆಯ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿಯ ಹೊರತಾಗಿಯೂ ಪೊಲೀಸ್ ಪಡೆ ಪ್ಲಾಸ್ಟಿಕ್ ಕುರ್ಚಿ ಹಾಗೂ ಬೆತ್ತದ ಬುಟ್ಟಿಯನ್ನು ರಕ್ಷಣೆಗಾಗಿ ಬಳಸಿಕೊಂಡಿರುವುದು ಅಪರಾಧ, ಈ ಬಗ್ಗೆ ಡಿಜಿಪಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಥಳೀಯ ಮಟ್ಟದ ಪೊಲೀಸ್ ಅಧಿಕಾರಿಗಳಿಂದ ವಿವರಣೆ ಕೇಳಿರುವುದಾಗಿ ಐಜಿ ತಿಳಿಸಿದ್ದಾರೆ.