ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗಿನ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಮಾಫಿಯಾ ಜೊತೆ ಪೊಲೀಸರು ಕೈಜೋಡಿಸುವುದನ್ನು ಸಹಿಸುವುದಿಲ್ಲ. ಈ ಬಗ್ಗೆ ಸ್ಪಷ್ಟ ಎಚ್ಚರಿಕೆ ಕೊಟ್ಟಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡುವುದೇ ನಮ್ಮ ಸರ್ಕಾರದ ಆದ್ಯತೆ ಎಂದರು.
ಪೊಲೀಸ್ ಇಲಾಖೆ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಪೊಲೀಸ್ ಅಧಿಕಾರಿಗಳು ಹೊಸ ಸರ್ಕಾರದಲ್ಲಿ ಯಾವ ರೀತಿ ಕೆಲಸ ಮಾಡಬೇಕೆಂದು ಹೇಳಿದ್ದೇವೆ. ದಕ್ಷತೆ, ಪ್ರಾಮಾಣಿಕತೆ ಇನ್ನೂ ಹೆಚ್ಚಾಗಬೇಕು. ಜನಸ್ನೇಹಿ ಆಗಿ ಕೆಲಸ ಮಾಡಬೇಕು. ಅಪರಾಧಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದರು.
ಇದನ್ನೂ ಓದಿ:ಅಧಿಕಾರ ದಾಹದ ಕಚ್ಚಾಟದಲ್ಲಿರುವ ಸರ್ಕಾರ ಸ್ವಾತಂತ್ರ್ಯೋತ್ಸವವನ್ನೂ ಮರೆತಿದೆ: ಕಾಂಗ್ರೆಸ್
ಕೋವಿಡ್ ನಿರ್ವಹಣೆ ಸಂದರ್ಭದಲ್ಲಿ ಏನೇನು ಸವಾಲುಗಳಿವೆ ಎನ್ನುವುದನ್ನು ಹೇಳಿದ್ದೇನೆ. ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನೆ ಏನೇನಿದೆ ಅದನ್ನು ಮುಂದುವರೆಸುವ ಭರವಸೆ ನೀಡಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಬೊಮ್ಮಾಯಿ- ದೇವೇಗೌಡರ ಭೇಟಿ ಬಗ್ಗೆ ಪ್ರೀತಂಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರೀತಂ ಗೌಡ ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ. ತಿಳುವಳಿಕೆ ಕೊರತೆ ಇರುತ್ತದೆ. ನನಗೆ ಅವರು ಯುವ ಗೆಳೆಯ. ಅವರನ್ನ ಕರೆದು ಮಾತನ್ನಾಡುತ್ತೇನೆ. ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ಹೇಳಿದರು.