ನವದೆಹಲಿ: ವಿದೇಶದಿಂದ ಭಾರತಕ್ಕೆ ಬರುತ್ತಿದ್ದ ಪ್ರಯಾಣಿಕರಿಗೆ ಬೆದರಿಕೆ ಹಾಕಿ ಅವರಿಂದ ಸುಲಿಗೆ ಮಾಡುತ್ತಿದ್ದ ಇಬ್ಬರು ಹೆಡ್ ಕಾನ್ಸ್ ಟೇಬಲ್ ಗಳು ಅಮಾನತುಗೊಂಡು ಪೊಲೀಸರ ಅತಿಥಿಯಾಗಿದ್ದಾರೆ.
ಇಂದಿರಾ ಗಾಂಧಿ ಏರ್‌ಪೋರ್ಟ್ ಟರ್ಮಿನಲ್ 3ರಲ್ಲಿ ಭದ್ರತಾ ಸಿಬ್ಬಂದಿಯಾಗಿ ನಿಯೋಜನೆಗೊಂಡಿದ್ದ ರಾಬಿನ್ ಸಿಂಗ್ ಮತ್ತು ಗೌರವ್ ಕುಮಾರ್ ಬಂಧಿತ ಹೆಡ್ ಕಾನ್ಸ್ ಟೇಬಲ್ ಗಳು.
ಘಟನೆ ಹಿನ್ನೆಲೆ: ಏರ್ ಪೋರ್ಟ್ ನಲ್ಲಿ ಭದ್ರತಾ ಸಿಬ್ಬಂದಿಗಳಾಗಿ ನಿಯೋಜನೆಗೊಂಡಿದ್ದ ರಾಬಿನ್ ಸಿಂಗ್ ಮತ್ತು ಗೌರವ್ ಕುಮಾರ್ ದುಬೈನಿಂದ ಚಿನ್ನವನ್ನು ತರುತ್ತಿದ್ದ ವ್ಯಕ್ತಿಗಳನ್ನು ಗುರಿಯಾಗಿಸಿ ಅವರನ್ನು ಬೆದರಿಸಿ, ಅವರಿಂದ ಸುಲಿಗೆ ಮಾಡುತ್ತಿದ್ದರು. ಈ ವಿಷಯವನ್ನು ಯಾರಿಗೂ ಹೇಳದಂತೆ ಹೇಳಿ ಅವರನ್ನು ಕಳುಹಿಸಿ ಕೊಡುತ್ತಿದ್ದರು.
ಇದನ್ನೂ ಓದಿ: ಮಹಿಳೆಯರಿಗೆ ವಿಶ್ವವಿದ್ಯಾಲಯ ಪ್ರವೇಶ ನಿಷೇಧ; ತಾಲಿಬಾನ್ ಕ್ರಮ ಖಂಡಿಸಿ ತರಗತಿ ಬಹಿಷ್ಕಾರ ಹಾಕಿದ ಪುರುಷ ವಿದ್ಯಾರ್ಥಿಗಳು
ಈ ಬಗ್ಗೆ ಸಲಾವುದ್ದೀನ್ ಕಥಾತ್ ಎಂಬ ವ್ಯಕ್ತಿ ಪೊಲೀಸರಿಗೆ ದೂರು ಕೊಟ್ಟಿದ್ದು, ನಾನು ಮಸ್ಕತ್ ನಿಂದ ಸ್ನೇಹಿತರು ಕೊಟ್ಟ ಚಿನ್ನವನ್ನು ದಿಲ್ಲಿಗೆ ತರುತ್ತಿದ್ದೆ. ಈ ವೇಳೆ ಇಬ್ಬರು ಭದ್ರತಾ ಸಿಬ್ಬಂದಿಗಳು ನನ್ನನ್ನು ವಿಚಾರಿಸಿ ಜೀಪ್ ನಲ್ಲಿ ಕರೆದುಕೊಂಡು ಕಾಡಿನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ನನ್ನನ್ನು ಥಳಿಸಿ ನನ್ನ ಬಳಿಯಿದ್ದ 50 ಲಕ್ಷ. ರೂ ಮೌಲ್ಯದ ಚಿನ್ನವನ್ನು ಪಡೆದು, ನನ್ನ ಸಿಮ್ ಕಾರ್ಡ್ ಒಡೆದು ಹಾಕಿ, ಮೊಬೈಲ್ ರೀ ಸೆಟ್ ಮೂಡ್ ಗೆ ಹಾಕಿ, ಹಣ ಕೊಟ್ಟು ಕ್ಯಾಬ್ ಬುಕ್ ಮಾಡಿ ಮನೆಗೆ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಅದೇ ದಿನ ದುಬೈನಿಂದ ಬಂದ ಶೇಖ್ ಕಾದರ್ ಬಾಶಿ ಎಂಬಾತನಿಂದ 400 ಗ್ರಾಂ. ಚಿನ್ನವನ್ನು ಬೆದರಿಕೆ ಹಾಕಿ ಸುಲಿಗೆ ಮಾಡಿದ್ದಾರೆ.ಈ ಎರಡೂ ಘಟನೆಯ ಪ್ರಕರಣ ದಾಖಲಿಸಿದ ಪೊಲೀಸರು ಭಾನುವಾರ ಹೆಡ್ ಕಾನ್ಸ್ ಟೇಬಲ್ ಗಳನ್ನು ಬಂಧಿಸಿದ್ದಾರೆ.