ಕಳೆದವಾರ ತಾಮ್ರದ ಚೊಂಬಿನ ನೀರು ಕುಡಿಯುವಾಗ ನೀರು ಯಾಕೋ ರುಚಿ ಬದಲಾದಂತೆ ಅನ್ನಿಸಿತು. ಮನದಲ್ಲಿ ಮತ್ತೇನೋ ಅನುಮಾನ! ಚೊಂಬಿನ ಒಳಭಾಗ ಶುದ್ಧವಾಗಿಯೇ ಇರುವಂತೆ ಕಂಡುಬಂತು. ಆದರೂ ಅನುಮಾನ! ತಕ್ಷಣ ಚೊಂಬನ್ನು ತೊಳೆದು-ವರೆಸಿ ದಿವಾನದ ಒಳಗೆ ಸೇರಿಸಿಬಿಟ್ಟೆ.
“ತಾಮ್ರದ ಚೊಂಬಿನಲ್ಲಿ ನೀರು ಕುಡಿದರೆ ಆಗುವ ಉಪಯೋಗಗಳು’ ಎಂಬ ಬಗ್ಗೆ ವಾಟ್ಸಾಪ್ ಮೆಸೇಜ್ ಒಂದು ಬಂದಿತ್ತು. “ಮಾಡಿ ನೋಡಿದರೆ ಹೇಗೆ?’ ಎಂಬ ಯೋಚನೆ ಬಂತು. ಯೋಚನೆ ಬಂದ ಮೇಲೆ ಸುಮ್ಮನಿರುವುದು ಹೇಗೆ? ಸಜ್ಜದಲ್ಲಿದ್ದ ತಾಮ್ರದ ಚೊಂಬು ಕೆಳಗಿಳಿಯಿತು. ಹುಳಿಮಜ್ಜಿಗೆ, ಪತಂಜಲಿ ಬೂದಿಸೋಪ್, ಪೀತಾಂಬರಿ ಪುಡಿಯಿಂದ ಫಳಫಳಗುಟ್ಟಿ ನೀರು ತುಂಬಿಸಿಕೊಂಡು ಕೂತಿತು. ಆಗಾಗ ಬೇಕಿತ್ತೋ/ಬೇಡವಿತ್ತೋ… ನೀರು ಕುಡಿದದ್ದೇ ಕುಡಿದದ್ದು!
ಇತ್ತ ಹಲಸಿನ ಹಣ್ಣಿನ ಸೀಸನ್ ಶುರುವಾಗಿತ್ತು. ಹಲವು ವರ್ಷಗಳಲ್ಲಿ ಸಿಗದಷ್ಟು ಹಲಸು ಈ ವರ್ಷ ಸಿಕ್ಕಿತ್ತು. ತಂದದ್ದು ತಿಂದದ್ದಕ್ಕೆ ಲೆಕ್ಕವಿಲ್ಲ. “ಕಂಠಮಟ್ಟ’ ಎನ್ನುತ್ತಾರಲ್ಲ ಹಾಗೆ. ಹಲವು ದಿನ ನನ್ನ ರಾತ್ರಿಯೂಟ ಹಲಸಿನ ಹಣ್ಣು ಮಾತ್ರ! ಪರಿಣಾಮ ಹೊಟ್ಟೆಯ ಮೇಲೆ ಆಗದಿರುವುದೇ? ಹಲಸಿನ ತೊಳೆಯನ್ನು ಜೇನು ಸೇರಿಸಿ ತಿಂದರೂ ಅಲ್ಪಸ್ವಲ್ಪ ಹೊಟ್ಟೆ ಗಡಬಡ ಇದ್ದೇ ಇತ್ತು! ಮನೆಯಲ್ಲೇ ಇರುವ ಗೃಹಿಣಿಯಾದ್ದರಿಂದ ಏನೂ ಸಮಸ್ಯೆ ಅನಿಸುತ್ತಿರಲಿಲ್ಲ. ಆದರೆ, ಮನೆಯಿಂದ ಹೊರ ಹೊರಡಬೇಕೆಂದರೆ ಭಯ! ಏನಾದರೂ ಆಹಾರ ಸೇವಿಸಿದೊಡನೆ ಹೊಟ್ಟೆಯೊಳಗೆ ಮಧುಕೈಟಭರ ಹದವಾದ ನರ್ತನ! ಚಂಡಮುಂಡರಷ್ಟು ಆರ್ಭಟವಿಲ್ಲ! ಇದರಿಂದಾಗಿ, ಹೊರಗಿನ ಸಮಾರಂಭಗಳಿಗೆ ಹೋಗಬೇಕೆಂದರೆ ಮನದೊಳಗೇ ಕಸಿವಿಸಿ!
ಒಂದು ತಿಂಗಳು ಕಾದರೂ ಹೊಟ್ಟೆ ಸಮಸ್ಯೆ ಮುಂದುವರೆದಿತ್ತು. ಅನಿವಾರ್ಯವಾಗಿ ಡಾಕ್ಟರ್ ಹತ್ತಿರ ಹೋದೆ. “ಅಮಿಬಿಯಾ’ ಸಿಮಮ್ಸ್ ಎಂದೇನೋ ಹೇಳಿ ಒಂದಿಷ್ಟು ಮಾತ್ರೆ ಬರೆದುಕೊಟ್ಟರು. ಹತ್ತುದಿನ ಮಾತ್ರೆ ನುಂಗಿ ನೀರು ಕುಡಿದರೂ ಆರೋಗ್ಯದಲ್ಲಿ ಸುಧಾರಣೆ ಮಾತ್ರ ಆಗಲೇ ಇಲ್ಲ. ಆರು ತಿಂಗಳಿನಿಂದ ತೂಕ ನೋಡುವ ಯಂತ್ರದಿಂದ ವಿಮುಖಳಾಗಿದ್ದೆ. “ಹೇಗಿದ್ದರೂ ಕಡಿಮೆ ತೂಕ ತೋರಿಸದ ಅದರ ಮೇಲೆ ನನಗೇಕೆ ಇಲ್ಲದ ವ್ಯಾಮೋಹ?’ ಎಂಬ ನಿರ್ಲಿಪ್ತ ಭಾವ ಅಷ್ಟೇ. ಹದಿನೈದು ದಿನದ ಹಿಂದೆ ಕುತೂಹಲ ತಡೆಯದೆ ತೂಕ ನೋಡಿಕೊಂಡೆ! ಅರೆ, ಮತ್ತೆ ಮೂರು ಕೆ.ಜಿ. ಕಡಿಮೆಯಾಗಿದ್ದೇನೆ!
ತಾಮ್ರದ ಚೊಂಬಿನ ಕಥೆ ಶುರು ಮಾಡುವುದಕ್ಕಿಂತ ಆರು ತಿಂಗಳ ಹಿಂದಿನಿಂದ ದಿನನಿತ್ಯ ಸೂರ್ಯನಮಸ್ಕಾರ, ಆಸನಗಳು, ಸಂಜೆ ಅರ್ಧ ಗಂಟೆ ನಡಿಗೆಯನ್ನು ಶ್ರದ್ಧೆಯಿಂದ ರೂಢಿಸಿಕೊಂಡಿದ್ದೆ. ಆರು ತಿಂಗಳಲ್ಲಿ ಮೂರು ಕೆಜಿ ತೂಕ ಇಳಿಸಿಕೊಂಡಿದ್ದೆ. ನಂತರ ಹೊಟ್ಟೆ ಸಮಸ್ಯೆ ಇದ್ದರೂ ವ್ಯಾಯಾಮ ಮತ್ತು ನಡಿಗೆ ನಿಲ್ಲಿಸಿರಲಿಲ್ಲ. “ನಿಯಮಿತ ವ್ಯಾಯಾಮದಿಂದಲೇ ತೂಕ ಇಳಿದಿದೆ. ದಿನಕ್ಕೆ ಒಂದು ಗಂಟೆ ವ್ಯಾಯಾಮ ಮಾಡಿದ್ದೂ ಸಾರ್ಥಕವಾಯಿತು’ ಎಂದಿತು ಮನಸ್ಸು. ಅಂದರೆ ಕಳೆದ ವರ್ಷಕ್ಕಿಂತ ಆರು ಕೆಜಿ ಕಡಿಮೆ! ಖುಷಿಯಾಗದಿರುತ್ತದೆಯೇ? ಆರು ಕೆಜಿ ತೂಕ ಇಳಿಸಿಕೊಂಡಿದ್ದರ ಬಗ್ಗೆ ಹೆಮ್ಮೆಯಿಂದ ಎಲ್ಲರಿಗೂ ಮೆಸೇಜ್ ಕಳಿಸಿ ಸಂಭ್ರಮಿಸಿದೆ. ವ್ಯಾಯಾಮವನ್ನು ಮತ್ತಷ್ಟು ಶ್ರದ್ಧಾಭಕ್ತಿಗಳಿಂದ ಮುಂದುವರೆಸಿದೆ!
ಕಳೆದ ವಾರ ತಾಮ್ರದ ಚೊಂಬಿನ ನೀರು ಕುಡಿಯುವಾಗ ನೀರು ಯಾಕೋ ರುಚಿ ಬದಲಾದಂತೆ ಅನ್ನಿಸಿತು. ಮನದಲ್ಲಿ ಮತ್ತೇನೋ ಅನುಮಾನ! ಚೊಂಬಿನ ಒಳಭಾಗ ಶುದ್ಧವಾಗಿಯೇ ಇರುವಂತೆ ಕಂಡುಬಂತು. ಆದರೂ ಅನುಮಾನ! ತಕ್ಷಣ ಚೊಂಬನ್ನು ತೊಳೆದು-ವರೆಸಿ ದಿವಾನದ ಒಳಗೆ ಸೇರಿಸಿಬಿಟ್ಟೆ. ಅರೆ! ಮರುದಿನಕ್ಕೆ ಹೊಟ್ಟೆ ಸಮಸ್ಯೆ ಮಾಯ! ಈಗ ಹೊಟ್ಟೆಯಲ್ಲಿ ಮಧುಕೈಟಭರು ನಾಟ್ಯವಾಡುತ್ತಿರಲಿಲ್ಲ!
ಮಾಡಿದ್ದು ಸಣ್ಣ ತಪ್ಪು. ಮೊದಮೊದಲು ಹುಳಿ ಮಜ್ಜಿಗೆ ಅಥವಾ ಹುಣಿಸೆ ಹಣ್ಣು ಅಥವಾ ನಿಂಬೆ ಚರಟದಿಂದ ಶುದ್ಧಗೊಳ್ಳುತ್ತಿದ್ದ ಚೊಂಬು ಬರಬರುತ್ತಾ ಕಪ್ಪುಗಟ್ಟಿತು. ನಿಯಮಿತವಾಗಿ ತೊಳೆಯಲು ಉದಾಸೀನವಾಗಿ, ಚೊಂಬಿನ ಒಳಭಾಗ ಶುಭ್ರವಾಗಿ ಕಾಣುತ್ತಿದ್ದರೆ ಸಾಕು ಅಂತ ಕೆಲವು ದಿನ ಕೈಯ್ಯಲ್ಲಿ ತಿಕ್ಕಿ ತೊಳೆದು ಹೊಸ ನೀರು ತುಂಬಿಸುತ್ತಿದ್ದೆ. ಒಳಗೊಳಗೇ ಕಿಲುಬಿದ ತಾಮ್ರ ಹೊಟ್ಟೆ ಸೇರುತ್ತಿತ್ತು. ನನ್ನಂತೆ ಹುಚ್ಚು ಪ್ರಯೋಗ ಮಾಡುವ ಮಂದಿಗಳಿಗೊಂದು ಪಾಠವಾಗಲಿ ಎಂಬ ಸದುದ್ದೇಶದಿಂದಲೇ ಈ ಲೇಖನ ಬರೆದಿರುವೆ. ಈಗ ಸದ್ಯಕ್ಕೆ ತೂಕ ಇಳಿದದ್ದೊಂದೇ ಖುಷಿಯ ವಿಷಯ!
– ಸುರೇಖಾ ಭೀಮಗುಳಿ