ಮಡಿಕೇರಿ: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಹಳ್ಳಿ ಗ್ರಾಮ ಸಮೀಪ ತೆಪ್ಪದಕಂಡಿಯಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕು ದೊಡ್ಡಹೊಸೂರು ಗ್ರಾಮದ ನಿವಾಸಿ ಬಸವರಾಜು (37) ಬಂಧಿತ ಆರೋಪಿಯಾಗಿದ್ದು, 245 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯು ಮನೆಯ ಶೌಚಾಲಯದ ಹಿಂಭಾಗದಲ್ಲಿ ಮಣ್ಣಿನಡಿ ಬಚ್ಚಿಟ್ಟಿದ್ದ ಗಾಂಜಾವನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಮಾದಕ ದ್ರವ್ಯ ಪತ್ತೆ ಪರಿಣತಿ ಹೊಂದಿರುವ ಕಾಪರ್ ಎಂಬ ಶ್ವಾನ ಯಶಸ್ವಿಯಾಗಿರುವುದು ವಿಶೇಷ.
ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತದ ಸಿಪಿಐ ರಾಜೇಶ್.ಕೆ, ಪಿಎಸ್‌ಐ ಮೋಹನ್ ರಾಜು.ಪಿ ಹಾಗೂ ಸಿಬಂದಿಗಳ ತನಿಖಾ ತಂಡ ಕಾರ್ಯಾಚರಣೆ ನಡೆಸಿತು.
ಶ್ವಾನ ಕಾಪರ್, ಕಾಪರ್‌ನ ತರಬೇತು ದಾರರಾದ ಮನಮೋಹನ್.ಬಿ.ಪಿ. ಹಾಗೂ ತನಿಖಾ ತಂಡದ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.