ಭೋಪಾಲ್: ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬರು ತಮ್ಮ ಸಮವಸ್ತ್ರವನ್ನು ತೆಗೆದು ರಸ್ತೆಯಲ್ಲಿ ಜನರ ಕಡೆಗೆ ಎಸೆದ ವೀಡಿಯೋ ವೈರಲ್ ಆಗಿದ್ದು, ಇದೀಗ ಅವರನ್ನು ಅಮಾನತುಗೊಳಿಸಲಾಗಿದೆ.
ಸುಶೀಲ್ ಮಾಂಡವಿ ಎಂದು ಗುರುತಿಸಲಾದ ಕಾನ್‌ಸ್ಟೆಬಲ್ ಅವರ ಹುಚ್ಚಾಟದ ವೀಡಿಯೊ ಹೊರಬಂದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹರ್ದಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮನೀಶ್ ಕುಮಾರ್ ಅಗರವಾಲ್ ಹೇಳಿದ್ದಾರೆ.
ಹರ್ದಾ ಪಟ್ಟಣದ ರಸ್ತೆಯೊಂದರಲ್ಲಿ ಪಾನಮತ್ತರಾಗಿದ್ದ ಪೊಲೀಸ್ ಪೇದೆ ಮತ್ತು ಶರ್ಟ್ ಹಾಕಿರದ ವ್ಯಕ್ತಿಯೊಬ್ಬರು ಜಗಳವಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ವೇಳೆ, ಪೇದೆ ರಸ್ತೆಯ ಮೇಲೆ ಕುಳಿತು ತನ್ನ ಸಮವಸ್ತ್ರವನ್ನು ತೆಗೆದುಹಾಕಲು ಪ್ರಾರಂಭಿಸುತ್ತಾನೆ.
ಇದನ್ನೂ ಓದಿ:ತೋಟಗಾರಿಕಾ ಯಾಂತ್ರೀಕರಣ ಯೋಜನೆಯಡಿಯಲ್ಲಿ ಜಿಲ್ಲೆಗೆ 550 ಲಕ್ಷ ರೂ. ಬಿಡುಗಡೆ
ಮೊದಲು ತನ್ನ ಅಂಗಿ ತೆಗೆದ ಆತ ಅದನ್ನು ನೋಡುತ್ತಿದ್ದ ಜನರತ್ತ ಎಸೆಯುತ್ತಾನೆ. ಬಳಿಕ ತನ್ನ ಪ್ಯಾಂಟನ್ನು ಬಿಚ್ಚಿ, ಮತ್ತೊಬ್ಬ ವ್ಯಕ್ತಿಯ ಜೊತೆಗೆ ಜಗಳ ಮುಂದುವರಿಸಿದ್ದಾನೆ.
ಆರು ತಿಂಗಳ ಹಿಂದೆ ಮಾಂಡವಿ ಕುಡಿದ ಅಮಲಿನಲ್ಲಿ ಅಪಘಾತಕ್ಕೀಡಾಗಿದ್ದು, ಆ ವೇಳೆಗೆ ಕೌನ್ಸೆಲಿಂಗ್ ನಡೆಸುವಂತೆ ಸೂಚಿಸಲಾಗಿತ್ತು ಎಂದು ಎಸ್ಪಿ ಅಗರವಾಲ್ ತಿಳಿಸಿದ್ದಾರೆ.