ಬಳ್ಳಾರಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ವಿಚಾರ ಕೇಂದ್ರದ ನಾಯಕರು ತೆಗೆದುಕೊಂಡ ನಿರ್ಣಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜೊತೆ ಹೊಂದಾಣಿಕೆ ವಿಷಯ ನಮ್ಮ ವ್ಯಾಪ್ತಿಗೆ ಬರಲ್ಲ. ಅದು ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ಅದರ ಬಗ್ಗೆ ಅವರೇ ನಿರ್ಣಯ ಕೈಗೊಳ್ಳಲಿದ್ದು, ಆ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದ ಅವರು, ದೇಶದ ಹಿತದೃಷ್ಟಿ ಮತ್ತು ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕೆಲ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದವರು ಸ್ಪಷ್ಟಪಡಿಸಿದರು.
ಪಕ್ಷದಲ್ಲಿ ನನಗೆ ನೀಡಿರುವ ಜವಾಬ್ದಾರಿಯಷ್ಟೇ ನಾನು ಕೆಲಸ ಮಾಡುತ್ತೇನೆ. ನನ್ನ ವಯಕ್ತಿಕ ಅಭಿಪ್ರಾಯವನ್ನು ಪಕ್ಷದ ಮೇಲೆ ಹೇರೋದಿಲ್ಲ. ಪಕ್ಷದ ಅಭಿಪ್ರಾಯವೇ ನನ್ನ ಅಭಿಪ್ರಾಯ. ಚುನಾವಣೆ ಸಂದರ್ಭದಲ್ಲಿ ಕೆಲವೊಂದು ವಿಷಯಗಳನ್ನು ಹೇಳಬೇಕಿತ್ತು ಹೇಳಿದ್ದೇನೆ. ಇದೀಗ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು. ನರೇಂದ್ರ ಮೋದಿ ಪುನಃ ಪ್ರಧಾನಿಯಾಗಬೇಕು. ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿ ದೇಶ ಸುರಕ್ಷಿತವಾಗಿದೆ ಎಂದ ಯತ್ನಾಳ್, ರಾಜ್ಯದಲ್ಲಿ 25 ಗೆಲ್ಲಬೇಕು ಅದೊಂದೇ ನಮ್ಮ ಗುರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ವಿಚಾರದಲ್ಲಿ ನನ್ನ ಪರ ವಿರೋಧ ಇದ್ದವರು ಪಕ್ಷದಲ್ಲಿ ಇದ್ದಾರೆ. ಎಲ್ಲರಲ್ಲೂ ಪ್ಲಸ್ ಮೈನಸ್ಸು ಇರುವುದು ಸಾಮಾನ್ಯ. ಯಾರು ಪರಿಪೂರ್ಣ ಇಲ್ಲ. ಪ್ರತಿ ಮನೆಯಲ್ಲಿ ದೋಷ ಇದ್ದಂತೆ ಇಲ್ಲಿಯೂ ಇದೆ.
ಲೋಕಸಭೆ ಟಿಕೇಟ್ ಯಾವುದೇ ಚರ್ಚೆ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಯಾವುದೇ ಟಿಕೇಟ್ ಫೈನಲ್ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ನಗರ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಲಿಂಗನಗೌಡ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಜಿಲ್ಲಾಧ್ಯಕ್ಷ ಮುರಹರಗೌಡ ಸೇರಿ ಹಲವರು ಇದ್ದರು.