Advertisement

ಕೇಂದ್ರ-ರಾಜ್ಯ ಸರಕಾರಗಳ ನಡುವೆ ಸಮನ್ವಯ ಅಗತ್ಯ

11:56 PM Mar 31, 2021 | Team Udayavani |

ಅರಣ್ಯ ಪ್ರದೇಶಗಳಲ್ಲಿ ಯಾವುದೇ ಯೋಜನೆ ಅಥವಾ ಕಾಮಗಾರಿ ಗಳಿಗೆ ಅನುಮತಿ ನೀಡುವ ವಿಚಾರವಾಗಿ ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯ ಈ ಹಿಂದಿನಿಂದಲೂ ದೇಶದಲ್ಲಿ ಜಾರಿಯಲ್ಲಿರುವ ನಿಯಮಾವಳಿಗಳನ್ನು ನೆನಪಿಸಿ ಮತ್ತೂಮ್ಮೆ ಎಲ್ಲ ರಾಜ್ಯ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅರಣ್ಯ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ. ಅರಣ್ಯ ಪ್ರದೇಶದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಯೋಜನೆ ಅಥವಾ ಕಾಮಗಾರಿಗಳಿಗೆ ಒಮ್ಮೆ ಕೇಂದ್ರ ಸರಕಾರದಿಂದ ಅನುಮತಿ ಪಡೆದ ಬಳಿಕ ಮತ್ತೆ ರಾಜ್ಯ ಸರಕಾರಗಳು ಹೆಚ್ಚುವರಿಯಾಗಿ ನಿಯಮಾವಳಿ ಗಳನ್ನು ಅಥವಾ ಷರತ್ತುಗಳನ್ನು ಹೇರುವಂತಿಲ್ಲ ಎಂದು ಈ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

Advertisement

ಕೇಂದ್ರ ಅರಣ್ಯ ಖಾತೆಯ ಈ ಆದೇಶ ಒಂದಿಷ್ಟು ಚರ್ಚೆಗೆ ಗ್ರಾಸವಾ ಗಿದ್ದು ಈ ವಿಚಾರದಲ್ಲಿ ಕೇಂದ್ರ ಸರಕಾರ ತನ್ನ ಪರಮಾಧಿಕಾರವನ್ನು ಮರು ಸ್ಥಾಪಿಸಲು ಹೊರಟಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ಅರಣ್ಯ ನಾಶ, ಪರಿಸರ ಮಾಲಿನ್ಯ ಮತ್ತಿತರ ಸಂದರ್ಭಗಳಲೆಲ್ಲ ರಾಜ್ಯ ಸರಕಾರಗಳತ್ತ ಬೆಟ್ಟು ಮಾಡುವ ಕೇಂದ್ರ ಸರಕಾರ ಇದೀಗ ಅರಣ್ಯ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗುವ ಯೋಜನೆಗಳು ಮತ್ತು ಕಾಮಗಾರಿಗಳ ವಿಚಾರದಲ್ಲಿ ತಾನು ಹಾಕಿದ ಲಕ್ಷಣರೇಖೆಯನ್ನು ಯಾರೂ ದಾಟುವಂತಿಲ್ಲ ಎಂದಿರು ವುದು ರಾಜ್ಯ ಸರಕಾರಗಳನ್ನೂ ಕಿಂಚಿತ್‌ ವಿಚಲಿತಗೊಳಿಸಿದೆ.

ಸದ್ಯ ದೇಶದಲ್ಲಿ ಜಾರಿಯಲ್ಲಿರುವ ಕಾನೂನು ನಿಯಮಾವಳಿಗಳ ಪ್ರಕಾರ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಯೋಜನೆ ಅಥವಾ ಕಾಮ ಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ಅವುಗಳಿಗೆ ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆಯುವುದು ಅತ್ಯಗತ್ಯ. ಯೋಜನೆಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿಯೂ ಕೇಂದ್ರ ಸರಕಾರ ಯೋಜನೆಯ ಸಾಧಕ, ಬಾಧಕಗಳನ್ನು ಸಮರ್ಪಕವಾಗಿ ಅಧ್ಯಯನ ನಡೆಸಿ ಆ ಬಳಿಕ ಒಪ್ಪಿಗೆ ನೀಡಬೇಕಿದೆ. ಕೇಂದ್ರ ಸರಕಾರ ಯೋಜನೆಗೆ ಅನುಮತಿ ನೀಡಿದ ಮೇಲೆ ರಾಜ್ಯ ಸರಕಾರಗಳು ಹೆಚ್ಚುವರಿ ನಿಯಮಗಳನ್ನು ಹೇರಿದಲ್ಲಿ ಯೋಜನೆಯ ಅನುಷ್ಠಾನ, ನಿರ್ವಹಣೆ ಹಾಗೂ ಪ್ರಗತಿಗೆ ಅಡ್ಡಿಯಾಗುತ್ತದೆ ಎಂಬುದು ಕೇಂದ್ರ ಸರಕಾರದ ವಾದ. ಆದರೆ ಯೋಜನೆ ಕಾರ್ಯಗತಗೊಂಡ ಬಳಿಕ ಯಾವುದಾದರೂ ಸಮಸ್ಯೆಗಳು ಕಾಣಿಸಿಕೊಂಡು ಅರಣ್ಯ ಪ್ರದೇಶ ಮತ್ತು ಜೀವಸಂಕುಲದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ ಸಂದರ್ಭದಲ್ಲಿ ರಾಜ್ಯ ಸರಕಾರ ಗಳು ಯೋಜನೆಗೆ ಸಂಬಂಧಿಸಿದಂತೆ ಹೊಸ ಷರತ್ತು ಮತ್ತು ನಿಯಮಾ ವಳಿಗಳನ್ನು ಹೇರುವುದು ಸಾಮಾನ್ಯ. ಇದು ಸ್ಥಳೀಯ ನಿವಾಸಿಗಳು ಮತ್ತು ಜೀವ ವೈವಿಧ್ಯತೆಯ ಅಳಿವು-ಉಳಿವಿನ ಪ್ರಶ್ನೆಯಾಗಿರುವುದರಿಂದ ಸಹಜ ವಾಗಿ ರಾಜ್ಯ ಸರಕಾರಗಳು ಈ ವಿಚಾರದಲ್ಲಿ ಹಸ್ತಕ್ಷೇಪ ನಡೆಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ.

ಕೇಂದ್ರದಿಂದ ಅನುಮತಿ ಲಭಿಸಿದ ಬಳಿಕ ಅನುಷ್ಠಾನಗೊಂಡ ಯೋಜ ನೆಗಳು, ಕಾಮಗಾರಿಗಳ ನೆಪದಲ್ಲಿ ಅರಣ್ಯ ಪ್ರದೇಶಗಳ ಒತ್ತುವರಿ, ಅಕ್ರಮ ಗಣಿಗಾರಿಕೆ, ಭಾರೀ ಪ್ರಮಾಣದಲ್ಲಿ ಅರಣ್ಯ, ವನ್ಯಜೀವಿ ಸಂಪತ್ತು ನಾಶವಾದ‌ ಘಟನೆಗಳು ನಮ್ಮ ಕಣ್ಣಮುಂದಿರುವಾಗ ಕೇಂದ್ರ ಇಂಥ ಆದೇಶ ನೀಡಿರುವುದು ಒಕ್ಕೂಟ ವ್ಯವಸ್ಥೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಅರಣ್ಯ, ಪರಿಸರ ರಕ್ಷಣೆಯಂತಹ ಸೂಕ್ಷ್ಮ ವಿಚಾರಗಳಲ್ಲಿ ಕೇಂದ್ರ ಆಯಾಯ ರಾಜ್ಯದೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸು ವುದು ಅವಶ್ಯ ಮತ್ತು ಇದರಿಂದ ರಾಜ್ಯ ಸರಕಾರಗಳ ಹೊಣೆೆಯೂ ಹೆಚ್ಚಲಿದೆ.

Advertisement

Udayavani is now on Telegram. Click here to join our channel and stay updated with the latest news.

Next