Advertisement

ಸಹಕಾರ ಸಂಘಗಳ ವಿಶ್ವಾಸಾರ್ಹತೆ ವೃದ್ಧಿಯತ್ತ ದಿಟ್ಟ ಹೆಜ್ಜೆ 

11:26 PM Oct 13, 2022 | Team Udayavani |

ಬಹು ರಾಜ್ಯ ಸಹಕಾರ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಈ ಸಹಕಾರ ಸಂಘಗಳ ಚುನಾವಣ ವ್ಯವಸ್ಥೆಯಲ್ಲಿ ಸುಧಾರಣೆ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಹಲವಾರು ದಶಕಗಳಿಂದ ದೇಶದಲ್ಲಿ ಬಹು ರಾಜ್ಯ ವ್ಯಾಪ್ತಿಯ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆಯಾದರೂ ಕಳೆದ ಕೆಲವು ವರ್ಷಗಳಿಂದೀಚೆಗೆ ಹಲವಾರು ಸಹಕಾರ ಸಂಘಗಳ ವ್ಯವಹಾರ ಮತ್ತು ಆಡಳಿತದಲ್ಲಿ ಅಕ್ರಮಗಳು ನಡೆದಿರುವ ಸಂಬಂಧ ಆರೋಪಗಳು ಕೇಳಿಬಂದು ಈ ಸಹಕಾರ ಸಂಘಗಳ ಬಗೆಗಿನ ಜನರ ನಂಬಿಕೆಯನ್ನು ಹುಸಿಗೊಳಿಸುವಂತೆ ಮಾಡಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಬಹು ರಾಜ್ಯ ಸಹಕಾರ ಸಂಘಗಳ ಇಡೀ ವ್ಯವಸ್ಥೆಗೆ ಕಾಯಕಲ್ಪ ನೀಡುವ ದಿಸೆಯಲ್ಲಿ ಮುಂದಡಿ ಇರಿಸಿದ್ದು ಇದರ ಮೊದಲ ಹೆಜ್ಜೆಯಾಗಿ ಸಂಬಂಧಿತ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ.

Advertisement

ಬಹು ರಾಜ್ಯ ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿಗಾಗಿ 97ನೇ ಸಾಂವಿಧಾನಿಕ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ತಿದ್ದುಪಡಿ ಅನುಷ್ಠಾನಕ್ಕೆ ಬಂದಲ್ಲಿ ಬಹುರಾಜ್ಯ ಸಹಕಾರ ಸಂಘಗಳ ವ್ಯವಹಾರ-ವಹಿವಾಟು ಸುಗಮಗೊಳ್ಳಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಸಹಕಾರಿ ಸಂಘಗಳಲ್ಲಿ ಪದೇಪದೆ ಕೇಳಿ ಬರುತ್ತಿರುವ ಹಣಕಾಸು ಅವ್ಯವಹಾರ, ಪಾರದರ್ಶಕವಾಗಿ ಚುನಾವಣೆ ನಡೆಸದಿರುವುದು ಮತ್ತು ಸಂಘಗಳ ಅಧಿಕಾರ ಏಕವ್ಯಕ್ತಿ ಕೇಂದ್ರಿತವಾಗಿರುವುದು ಮುಂತಾದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ಇನ್ನು ಈ ತಿದ್ದುಪಡಿಯ ಮೂಲಕ ಬಹು ರಾಜ್ಯ ಸಹಕಾರ ಸಂಘಗಳ ಚುನಾವಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಲಿವೆ. ಈ ಸಹಕಾರ ಸಂಘಗಳ ಆಡಳಿತ ಮಂಡಳಿಗಳಲ್ಲಿ ಮಹಿಳೆಯರಿಗೆ ಮತ್ತು ಎಸ್‌/ಎಸ್‌ಟಿಯವರಿಗೆ ಪ್ರಾತಿನಿಧ್ಯ ಕಲ್ಪಿಸಿ ಕೊಡಲು ಸ್ಥಾನಗಳನ್ನು ಮೀಸಲಿರಿಸಲಾಗುವುದು. ಸಂಘಗಳ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆ ಮತ್ತು ಸಂಘದ ಕಾರ್ಯ ನಿರ್ವಹಣೆ ಮೇಲೆ ನಿಗಾ, ಚುನಾವಣೆಯಲ್ಲಿ ಅಕ್ರಮ ಎಸಗಿದವರ ಮೇಲೆ ಕ್ರಮ, ಸಂಘದ ಸದಸ್ಯರನ್ನೂ ಉತ್ತರದಾಯಿಗಳನ್ನಾಗಿ ಮಾಡುವುದು ಮತ್ತಿತರ ನಿಯಮಗಳನ್ನು ಈ ತಿದ್ದುಪಡಿ ಒಳಗೊಂಡಿರಲಿದೆ. ಇದೇ ವೇಳೆ ವಾರ್ಷಿಕ 500 ಕೋ. ರೂ.ಗಳಿಗಿಂತ ಹೆಚ್ಚಿನ ವಹಿವಾಟು ನಡೆಸುವ ಸಹಕಾರ ಸಂಘಗಳು ಕೇಂದ್ರದಿಂದ ಮಾನ್ಯತೆ ಪಡೆದ ಲೆಕ್ಕ ಪರಿಶೋಧಕ ರಿಂದಲೇ ಅಡಿಟ್‌ ನಡೆಸಬೇಕೆಂಬ ನಿಯಮ ಸೇರ್ಪಡೆಗೊಳಿಸಲಾಗಿದೆ.

ಸದ್ಯ ಬಹು ರಾಜ್ಯ ಸಹಕಾರ ಸಂಘಗಳು ಕೇಂದ್ರದ ಅಧೀನದಲ್ಲಿಯೇ ಕಾರ್ಯನಿರ್ವಹಿಸುತ್ತಿವೆಯಾದರೂ ಇವುಗಳ ಕಾರ್ಯನಿರ್ವಹಣೆಯಲ್ಲಿ ಸರಕಾರ ನೇರವಾಗಿ ಹಸ್ತಕ್ಷೇಪ ನಡೆಸುತ್ತಿರಲಿಲ್ಲ. ಆದರೆ ಈ ಸಹಕಾರ ಸಂಘಗಳ ಒಟ್ಟಾರೆ ಕಾರ್ಯಶೈಲಿಯ ಬಗೆಗೆ ಅಪಸ್ವರಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿದೆ. ಈ ಮೂಲಕ ಸಹಕಾರ  ಸಂಘಗಳನ್ನು ಇನ್ನಷ್ಟು ವಿಶ್ವಾಸಾರ್ಹ ಮತ್ತು ಜನಸ್ನೇಹಿ ಯಾಗಿಸಲು ಸರಕಾರ ಈ ಹೆಜ್ಜೆ ಇರಿಸಿದೆ. ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಖಾತೆಯನ್ನು ರಚಿಸಿದ ಬಳಿಕ ಸಹಕಾರ ಸಂಘಗಳ ಮೇಲಿನ ಕಳಂಕವನ್ನು ತೊಡೆದು ಹಾಕಲು ಕೆಲವೊಂದು ಕಠಿನ ನಿಯಮಾವಳಿಗಳನ್ನು ರೂಪಿಸಿದ್ದು ಇದರ ಮುಂದುವರಿದ ಭಾಗವಾಗಿ ಈ ತಿದ್ದುಪಡಿ ಕಾಯ್ದೆಯ ಜಾರಿಗೆ ನಿರ್ಧರಿಸಿದೆ. ಇದು ಅಕ್ಷರಶಃ ಅನುಷ್ಠಾನಗೊಂಡಲ್ಲಿ ಕಾಯ್ದೆಯ ನೈಜ ಉದ್ದೇಶ ಈಡೇರಲಿದೆ ಮಾತ್ರವಲ್ಲದೆ ಬಹು ರಾಜ್ಯ ಸಹಕಾರ ಸಂಘಗಳ ಬಗೆಗಿನ ಜನರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next