Advertisement

ರೈತರ ನೆರವಿಗೆ ಸಹಕಾರ ಮಾರಾಟ ಮಹಾಮಂಡಳ 

06:00 AM Mar 10, 2018 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ 1652 ಕೋಟಿ ರೂ. ಮೌಲ್ಯದ ತೊಗರಿ, ಕಡಲೇಕಾಳು, ಉದ್ದು, ಹೆಸರುಕಾಳು, ರಾಗಿ ಖರೀದಿ ಮಾಡಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್‌. 
ರಾಜೇಂದ್ರಕುಮಾರ್‌, ಮಂಡಳಿಯು ಬೆಂಬಲ ಬೆಲೆ ಯೋಜನೆಯಡಿ ಧಾನ್ಯಗಳನ್ನು ಖರೀದಿಸಿ ರಾಜ್ಯದ ರೈತರ ನೆರವಿಗೆ ಧಾವಿಸಿದೆ. ನೇರವಾಗಿ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ಪೂರ್ಣ ಪ್ರಮಾಣದ ಹಣ ರೈತರಿಗೆ ತಲುಪುವಂತೆ ಮಾಡಿದೆ ಎಂದು ಹೇಳಿದರು.

Advertisement

ಮಹಾ ಮಂಡಳವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 39 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದೆ. ರಸಗೊಬ್ಬರ ಕಾಪು ದಾಸ್ತಾನು ಯೋಜನೆ, ಬೆಂಬಲ ಬೆಲೆ ಯೋಜನೆ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಾಜ್ಯದಲ್ಲಿ ಒಟ್ಟು 12 ಲಕ್ಷ ಟನ್‌ ತೊಗರಿ
ಉತ್ಪಾದನೆಯಾಗಿದ್ದು ಕೃಷಿ ಇಲಾಖೆ 9 ಲಕ್ಷ ಟನ್‌ ಉತ್ಪಾದನೆ ಲೆಕ್ಕಾಚಾರ ಕೇಂದ್ರ ಸರ್ಕಾರಕ್ಕೆ ಕೊಟ್ಟಿದೆ. ಇದುವರೆಗೂ ಕೇಂದ್ರ ಸರ್ಕಾರ 3.64 ಲಕ್ಷ ಟನ್‌ ಖರೀದಿಗೆ ಒಪ್ಪಿಗೆ ನೀಡಿದೆ. ಪ್ರತಿ ಕ್ವಿಂಟಾಲ್‌ಗೆ 6 ಸಾವಿರ ರೂ.ನಂತೆ ಪ್ರತಿ ರೈತನಿಂದ ಹತ್ತು ಕ್ವಿಂಟಾಲ್‌ನಂತೆ ತೊಗರಿ ಖರೀದಿ ಮಾಡಲಾಗಿದ್ದು, ಇಲ್ಲಿವರೆಗೆ 1,81,387 ರೈತರಿಂದ 1412 ಕೋಟಿ ರೂ. ಮೊತ್ತದ ತೊಗರಿ ಖರೀದಿ ಮಾಡಿದೆ. ಈ ಸಂಬಂಧ ನ್ಯಾಫೆಡ್‌ ಸಂಸ್ಥೆಯು ಹಣ ಪಾವತಿ ಬಿಡುಗಡೆ ಮಾಡುತ್ತಿದ್ದು ಇಲ್ಲಿಯವರೆಗೆ 462 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ ಮೊತ್ತ ಕೂಡಲೇ ಬಿಡುಗಡೆ ಮಾಡುವಂತೆ ನ್ಯಾಫೆಡ್‌ ಸಂಸ್ಥೆಗೆ ತಿಳಿಸಲಾಗಿದೆ. ಕಡಲೇಕಾಳು ಖರೀದಿ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ 296 ಖರೀದಿ ಕೇಂದ್ರಗಳನ್ನು ಮಹಾಮಂಡಳದ ಶಾಖೆಗಳ ಮೂಲಕ ತೆರೆದು 4,400 ದರದಲ್ಲಿ ಖರೀದಿಸಲಾಗುತ್ತಿದೆ. 2.02 ಲಕ್ಷ ಟನ್‌ ಕಡಲೇಕಾಳು ಖರೀದಿ ಗುರಿ ಹೊಂದಲಾಗಿದ್ದು, ಪ್ರತಿ ರೈತನಿಂದ 15 ಕ್ವಿಂಟಾಲ್‌
ನಂತೆ 7,570 ರೈತರಿಂದ ಇಲ್ಲಿಯವರೆಗೆ 40 ಕೋಟಿ ರೂ. ಮೌಲ್ಯದ 90,672 ಕ್ವಿಂಟಾಲ್‌ ಕಡಲೆ ಖರೀದಿಸಲಾಗಿದೆ.

ದಕ್ಷಿಣ ಕರ್ನಾಟಕ ಭಾಗದಲ್ಲಿ ರಾಗಿ ಹೆಚ್ಚಾಗಿ ಬೆಳೆದಿರುವುದರಿಂದ 7 ಖರೀದಿ ಕೇಂದ್ರ ಹಾಸನ ಜಿಲ್ಲೆಯಲ್ಲಿ ತೆರೆದು 1320 ರೈತರಿಂದ ಪ್ರತಿ ರೈತನಿಂದ 75 ಕ್ವಿಂಟಾಲ್‌ನಂತೆ 9 ಕೋಟಿ ರೂ. ಮೌಲ್ಯದ 39.134 ಕ್ವಿಂಟಾಲ್‌ ರಾಗಿ ಖರೀದಿಸಲಾಗಿದೆ. ಜತೆಗೆ 13000 ರೈತರಿಂದ 70 ಕೋಟಿ ರೂ. ಮೌಲ್ಯದ 1,70,000ಕ್ವಿಂಟಾಲ್‌ ಉದ್ದು, 21644 ರೈತರಿಂದ  121 ಕೋಟಿ ರೂ. ಮೌಲ್ಯದ 2.17
ಲಕ್ಷ ಕ್ವಿಂಟಾಲ್‌ ಹೆಸರು ಕಾಳು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಖರೀದಿ ಮಾಡಲಾಗಿದೆ. ಮಹಾಮಂಡಳವು 1 ಸಾವಿರ ಕೋಟಿ ರೂ.ಗೂ ಮೇಲ್ಪಟ್ಟು ವಹಿವಾಟು ನಡೆಸುತ್ತಿದ್ದು, ಈ ವರ್ಷ ಕೃಷಿ ಉತ್ಪನ್ನ ಖರೀದಿ ಹೆಚ್ಚಾಗಿರುವುದರಿಂದ 2500 ಕೋಟಿ ರೂ. 
ವ್ಯವಹಾರ ಮಾರ್ಚ್‌ ಅಂತ್ಯದೊಳಗೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಕೃಷಿ ಇಲಾಖೆ ಮೂಲಕ ಮಹಾ ಮಂಡಳಕ್ಕೆ ಕಾಪು ದಾಸ್ತಾನು ರಸಗೊಬ್ಬರ ಖರೀದಿ ಯೋಜನೆಗಾಗಿ ಬ್ಯಾಂಕಿನಿಂದ 500 ಕೋಟಿ ರೂ. ಸಾಲ ಸೌಲಭ್ಯ ಲಭ್ಯವಾಗಿದೆ. ಇದನ್ನು ಬಳಸಿಕೊಂಡು ರೈತರಿಗೆ ಬೇಕಾಗುವ ರಸಗೊಬ್ಬರಗಳನ್ನು ಕೃಷಿ ಹಂಗಾಮಿಗೆ ಮುಂಚಿತವಾಗಿ ದಾಸ್ತಾನು ಮಾಡಲಾಗುತ್ತಿದೆ.
ಸದ್ಯ ಎಲ್ಲ ಜಿಲ್ಲೆಗಳಲ್ಲಿ 1,30,000 ಟನ್‌ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ಈ ತಿಂಗಳಲ್ಲಿ 1 ಲಕ್ಷ ಟನ್‌ವರೆಗೆ ಕೃಷಿ ಇಲಾಖೆ
ಬೇಡಿಕೆಯಂತೆ ದಾಸ್ತಾನು ಮಾಡಲು ಯೋಜಿಸಲಾಗಿದೆ. ಕೇಂದ್ರ ಸರ್ಕಾರವು ರಸಗೊಬ್ಬರ ಮಾರಾಟ ಮಾಡಲು ಷರತ್ತು
ವಿಧಿಸಿದ್ದು, ಬಿಎಸ್‌ಸಿ, ಎಂಎಸ್‌ಸಿ ಕೃಷಿ ಪದವಿ ಮಾಡಿದವರಿಗೆ ಮಾತ್ರ ಲೈಸೆನ್ಸ್‌ ನೀಡುವುದಾಗಿ ತಿಳಿಸಿದೆ. ಹೀಗಾದರೆ ಕಷ್ಟವಾಗಬಹುದು. ಮತ್ತೆ ಕೇಂದ್ರದ ಸುತ್ತೋಲೆಯಲ್ಲಿ ನಿಯಮ ಸಡಿಲವಾಗಬಹುದು ಎಂದು ಹೇಳಲಾಗುತ್ತಿದೆ. ಆಗ ಸ್ಪಷ್ಟತೆ ದೊರೆಯಲಿದೆ ಎಂದು ಹೇಳಿದರು.

ಅಮೃತ ಮಹೋತ್ಸವ: 1943ರಲ್ಲಿ ಸ್ಥಾಪನೆಯಾದ ಮಂಡಳ ಸಣ್ಣ ಸಹಕಾರ ಸಂಸ್ಥೆಯಾಗಿ ಪ್ರಾರಂಭಗೊಂಡು ರಾಜ್ಯಮಟ್ಟದ ಸಂಸ್ಥೆಯಾಗಿ ರೈತರಿಗೆ ನೆರವಾಗುತ್ತಿದೆ. ನವೆಂಬರ್‌ನಲ್ಲಿ ಮಹಾಮಂಡಳದ ಅಮೃತ ಮಹೋತ್ಸವ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು. ನಿರ್ದೇಶಕರಾದ ಜೆ.ಆರ್‌.ಷಣ್ಮುಖಪ್ಪ, ಶಿವಕುಮಾರ ಗೌಡ, ಜಯವಂತರಾವ ಪತಂಗೆ,
ತಿಮ್ಮಣ್ಣ ಮೆಳ್ಳಿ, ವ್ಯವಸ್ಥಾಪಕ ನಿರ್ದೇಶಕ ಆರ್‌. ಶಿವಪ್ರಕಾಶ್‌, ಪ್ರಧಾನ ವ್ಯವಸ್ಥಾಪಕ ಎಚ್‌.ಆರ್‌ .ನಾಗೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next