ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಹನೂರು ಶಾಸಕ ನರೇಂದ್ರ ಜೊತೆಗೂಡಿ ಆಗಮಿಸಿದ ಸಚಿವ ಸೋಮಶೇಖರ್ ಅವರನ್ನು ಪ್ರಾಧಿಕಾರದ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಮಲೆ ಮಹದೇಶ್ವರನ ದರ್ಶನ ಪಡೆದರು. ಇದೇ ವೇಳೆ ದೇವಾಲಯದ ಪ್ರಧಾನ ಆಗಮಿಕರಾದ ಕರವೀರಸ್ವಾಮಿಯವರು ಮಲೆ ಮಾದಪ್ಪನಿಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಪ್ರಾಧಿಕಾರದವತಿಯಿಂದ ಪ್ರಸಾದ, ಶಾಲು ಮತ್ತು ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು.
ಬಳಿಕ ಪ್ರಾಧಿಕಾರದ ಅಧಿಕಾರಿಗಳಿಂದ ಶ್ರೀ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆಯ ಮಾತುಗಳನ್ನಾಡಿದರು. ಮುಂಬರುವ ದಿನಗಳಲ್ಲಿಯೂ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಯಾವುದೇ ಮೂಲಸೌಕರ್ಯದ ಸಮಸ್ಯೆಯಾಗದ ರೀತಿಯಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ನೂತನ ತಾಲೂಕಿಗೆ ಅಗತ್ಯ ಸೌಕರ್ಯ: ಮಲೆ ಮಹದೇಶ್ವರನ ದರ್ಶನದ ಬಳಿಕ ಸ್ಥಳೀಯ ಶಾಸಕ ನರೇಂದ್ರ ಜೊತೆ ಔಪಚಾರಿಕ ಚರ್ಚೆ ನಡೆಸಿದರು. ಇದೇ ವೇಳೆ ಶಾಸಕ ನರೇಂದ್ರ ಮಾತನಾಡಿ ಹನೂರು ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು ನೂತನ ತಾಲೂಕಿಗೆ ಟಿಎಪಿಸಿಎಂಎಸ್, ಎಪಿಎಂಸಿ ಮತ್ತು ಆರ್‍ಎಂಸಿಗಳು ವಿಭಜನೆಯಾಗಬೇಕಿದ್ದು ಈ ಬಗ್ಗೆ ಈಗಾಗಲೇ ತಮ್ಮ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಸಿದ ಸಚಿವರು ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ಸಹಕಾರ ಇಲಾಖೆಯ ಎಲ್ಲಾ ವಿಭಾಗಗಳನ್ನು ವಿಭಜಿಸಿ ನೂತನ ತಾಲೂಕಿಗೆ ವರ್ಗಾಯಿಸಲು ಅಗತ್ಯ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪಕಾರ್ಯದರ್ಶಿ ಬಸವರಾಜು, ಅಭಿಯಂತರ ಮನುವಾಚಾರ್ ಇನ್ನಿತರರು ಹಾಜರಿದ್ದರು.