Advertisement

ಜಿಲ್ಲಾಡಳಿತದಿಂದ ಸಹಕಾರ: ಪ್ರಚಾರಕ್ಕೆ ಆದ್ಯತೆ ನೀಡಲು ಸಲಹೆ

11:23 PM Sep 19, 2019 | Sriram |

ಮಡಿಕೇರಿ:ಮಡಿಕೇರಿ ದಸರಾ ಜನೋತ್ಸವವನ್ನು ಈ ಬಾರಿ ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕ ಅಧಿಕ ಸಂಖ್ಯೆಯ ಜನರನ್ನು ಆಕರ್ಷಿಸುವಂತೆ ಸಲಹೆ ನೀಡಿರುವ ದಸರಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ದಸರಾ ಆಚರಣೆಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆಯಿತ್ತಿದೆ.

Advertisement

ನಗರಸಭೆಯ ಸಭಾಂಗಣದಲ್ಲಿ ನಡೆದ ಮಡಿಕೇರಿ ದಸರಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದಸರಾ ಆಚರಣೆಯ ಜತೆಯಲ್ಲಿ ಪ್ರಚಾರಕ್ಕೂ ಆದ್ಯತೆ ನೀಡುವಂತೆ ತಿಳಿಸಿದರು. ದಸರಾ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಜನರಿಂದ ಜನರಿಗಾಗಿ ನಡೆಯುವ ಜನೋತ್ಸವಕ್ಕೆ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುವಂತೆ ಸಮಿತಿಗೆ ಹಸಿರು ನಿಶಾನೆ ತೋರಿದರು.
ಎಲ್ಲ ಇಲಾಖೆಗಳೊಂದಿಗೆ ಸಮನ್ವಯವನ್ನು ಕಾಯ್ದುಕೊಂಡು ದಸರಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ
ಮಡಿಕೇರಿ ದಸರಾಕ್ಕೆ ಒಂದು ಕೋಟಿ ರೂ.ಗಳನ್ನು ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿರುವ ಬೆನ್ನಲ್ಲೇ ದಸರಾ ಸಮಿತಿ ಉತ್ಸಾಹದಿಂದ ಜನೋತ್ಸವದ ತಯಾರಿಗೆ ಮುಂದಾಗಿದೆ. ನಗರದ ಗಾಂಧಿ ಮೈದಾನದಲ್ಲೇ ಒಂಬತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಸಮಿತಿ ನಿರ್ಧರಿಸಿದ್ದು, ಪೆಂಡಾಲ್‌ ಅಳವಡಿಕೆ ಮತ್ತು ವೇದಿಕೆ ನಿರ್ಮಾಣದ ಕಾರ್ಯವನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್‌ ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪನ್ನೇಕರ್‌, ಪೌರಾಯುಕ್ತ ರಮೇಶ್‌ ಮತ್ತಿತರರು ಉಪ ಸ್ಥಿ ತರಿದ್ದರು

ದೇವತೆಗಳ ಸಂಚಾರ
ಸೆ. 29ರಂದು ನಾಲ್ಕು ಶಕ್ತಿ ದೇವತೆಗಳ ನಗರ ಸಂಚಾರದೊಂದಿಗೆ ಕರಗೋತ್ಸವಕ್ಕೆ ಚಾಲನೆ ದೊರೆಯಲಿದೆ. ಸೆ.30 ರಂದು ಗಾಂಧಿ ಮೈದಾನದ ಭವ್ಯ ವೇದಿಕೆಯಲ್ಲಿ 9 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ. ಅ. 1ರಂದು ದಸರಾ ಕ್ರೀಡಾಕೂಟ, 2ರಂದು ಮಕ್ಕಳ ದಸರಾ, 3ರಂದು ಜನಪದ ದಸರಾ, 4ರಂದು ಕವಿಗೋಷ್ಠಿ, 5 ರಂದು ಯುವ ದಸರಾ, 6ರಂದು ಮಹಿಳಾ ದಸರಾ, 7ರಂದು ಆಯುಧಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಅ. 8ರಂದು ಅಂತಿಮ ದಿನದ ಅದ್ಧೂರಿ ಕಾರ್ಯಕ್ರಮದೊಂದಿಗೆ ಜನೋತ್ಸವಕ್ಕೆ ತೆರೆ ಬೀಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next