Advertisement

ಬಂಟ ದಾನಿಗಳ ಸಹಕಾರದಿಂದ ಒಕ್ಕೂಟದ ಕಾರ್ಯಗಳು ಸಫಲ: ಐಕಳ ಹರೀಶ್‌ ಶೆಟ್ಟಿ

01:12 PM Sep 02, 2019 | Team Udayavani |

ಮುಂಬಯಿ, ಆ. 1: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬದುಕು ಸಾಗಿಸುತ್ತಿರುವ ಅದೆಷ್ಟೋ ಬಂಟ ಕುಟುಂಬಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಇಂತಹ ಕುಟುಂಬದ ಬಂಧುಗಳಿಗೆ ಸಹಾಯ ನೀಡುವ ಉದ್ದೇಶದಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಕ್ರಿಯಾಶೀಲವಾಗಿದ್ದು, ಇದ್ದವರಿಂದ ಬೇಡಿ ಇಲ್ಲದವರಿಗೆ ನೀಡುವ ಕಾರ್ಯ ಜಾರಿಯಲ್ಲಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ನುಡಿದರು.

Advertisement

ಆ. 31ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಒಕ್ಕೂಟದ ಬಹಿರಂಗ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಕ್ಕೂಟವು ಮಾನವೀಯ ಅನುಕಂಪದ ಸೇವೆ ನೀಡುತ್ತಿದೆ. ಬಂಟ ದಾನಿಗಳ ಸಹಕಾರದಿಂದ ಇವೆಲ್ಲವೂ ಸಾಧ್ಯವಾಗಿದೆ. ಇದುವರೆಗೆ ಸುಮಾರು 1.40 ಕೋ. ರೂ. ಗಳ ಮೊತ್ತವನ್ನು ಬಂಟ ಬಾಂಧವರ ಅಗತ್ಯತೆಗಳಿಗೆ ಅನುಗುಣವಾಗಿ ವಿತರಿಸಲಾಗಿದ್ದು, ಇನ್ನೂ ಅನೇಕ ಕುಟುಂಬಗಳು ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಅಂಥವರ ಪರಿಸ್ಥಿತಿಯನ್ನು ಪ್ರತ್ಯಕ್ಷ ಕಂಡು ಮರುಗಿದ್ದೇನೆ. ನಮ್ಮ ದಾನಿಗಳು ಅಸಹಾಯಕ ಬಂಟ ಬಂಧುಗಳ ನೆರವಿಗೆ ಸದಾ ಸ್ಪಂದಿಸುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ. ಪಾರದರ್ಶಕವಾಗಿ ಒಕ್ಕೂಟವು ಕಾರ್ಯನಿರ್ವಹಿಸುತ್ತಿದೆ. ಒಕ್ಕೂಟಕ್ಕೆ ಸದಾ ಬೆಂಬಲವಾಗಿ ನಿಂತಿರುವ ಬಂಟರ ಸಂಘ ಮುಂಬಯಿ ಇದರ ಕಾರ್ಯ ಅಭಿನಂದನೀಯ. ಒಕ್ಕೂಟದ ಸಮಾಜ ಸೇವಾ ಕಾರ್ಯಗಳು ನಿರಂತರವಾಗಿ ಜರಗಲು ದೇಣಿಗೆ ನೀಡಿದ ದಾನಿಗಳು, ಗೌರವಾನ್ವಿತ ನಿರ್ದೇಶಕರು, ಮಹಾಪೋಷಕರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರಿಗೆ ಕೃತಜ್ಞನಾಗಿದ್ದೇನೆ. ಇಂದಿನ ಸಮ್ಮಾನಮೂರ್ತಿ ನಳಿನ್‌ ಕುಮಾರ್‌ ಕಟೀಲು ಅವರು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎತ್ತರಕ್ಕೇರಲು ಅವರ ಪರಿಶ್ರಮವೇ ಕಾರಣವಾಗಿದೆ. ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಸರಳತೆ, ವಿಶೇಷ ಪ್ರತಿಭೆಯಿಂದ ಸಚಿವರಾಗಿ ಆಯ್ಕೆಗೊಂಡಿದ್ದು ನಮಗೆಲ್ಲರಿಗೂ ಹೆಮ್ಮೆ, ಮರಾಠಿ ಮಣ್ಣಿನಲ್ಲಿ ಮೇಯರ್‌ ಸ್ಥಾನವನ್ನು ಅಲಂಕರಿಸಿದ ಪ್ರವೀಣ್‌ ಸಿ. ಶೆಟ್ಟಿ ಅವರು ಪರಿಸರದ ಎಲ್ಲಾ ಜಾತಿ, ಧರ್ಮಗಳ ಜತೆಗಿಟ್ಟಿರುವ ಪ್ರೀತಿ-ವಿಶ್ವಾಸವೇ ಕಾರಣವಾಗಿದೆ. ನೂತನ ನಿರ್ದೇಶಕರಾಗಿ ಆಯ್ಕೆಯಾದ ಹಾಗೂ ಸಮಾರಂಭದಲ್ಲಿ ಪಾಲ್ಗೊಂಡ ತುಳು-ಕನ್ನಡಿಗರನ್ನು ನಾನು ಅಭಿನಂದಿಸುತ್ತಿದ್ದೇನೆ ಎಂದು ನುಡಿದು ಶುಭಹಾರೈಸಿದರು.

ಐಕಳರ ಸಾಧನೆ ಐತಿಹಾಸಿಕ ದಾಖಲ: ಪದ್ಮನಾಭ ಎಸ್‌. ಪಯ್ಯಡೆ

ಬಹಿರಂಗ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು, ಸುಮಾರು 32 ವರ್ಷಗಳ ಇತಿಹಾಸ ಹೊಂದಿರುವ ಒಕ್ಕೂಟವು ನಿಂತ ನೀರಾಗಿಯೇ ಉಳಿದಿತ್ತು. ಐಕಳ ಹರೀಶ್‌ ಶೆಟ್ಟಿ ಅವರು ಅಧ್ಯಕ್ಷರಾದ ಬಳಿಕ ಹರಿಯುವ ನೀರಾಗಿ ಕಾರ್ಯಚಟುವಟಿಕೆಗಳಿಂದ ಜಾಗೃತವಾಗಿದೆ ಎಂದರು.

ಒಕ್ಕೂಟದ ಸಾಧನೆಯನ್ನು ವಿಶ್ವಕ್ಕೆ ತೋರಿಸಿದ ಕೀರ್ತಿ ಐಕಳ ಅವರದ್ದಾಗಿದೆ. ಓರ್ವ ಸಂಘಟನಾ ಚತುರರಾಗಿ, ಸಹೃದಯಿಯಾಗಿ, ಸಮಾಜ ಸೇವಕರಾಗಿ ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿರುವ ಅವರ ಸಾಧನೆ ಬಂಟ ಸಮಾಜದಲ್ಲೊಂದು ಪರಿವರ್ತನೆಯ ಕಾಲವಾಗಿದೆ ಎಂದರು.

Advertisement

ಇದೊಂದು ಐತಿಹಾಸಿಕ ದಾಖಲೆಯಾಗಿ ಸದಾಕಾಲ ಉಳಿಯಲಿದೆ ಎಂದು ನುಡಿದು ಪಯ್ಯಡೆ ಹಾರೈಸಿದರು.

ಅಭಿನಂದಿಸುತ್ತಿದ್ದೇನೆ

ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸದ ಗೋಪಾಲ್ ಶೆಟ್ಟಿ ಅವರು ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರು ಬಂಟ ರಾಜಕಾರಣಿಗಳನ್ನು ಹಾಗೂ ಅವರ ಸಾಧನೆಯನ್ನು ಗುರುತಿಸಿ ನೀಡಿರುವ ಸಮ್ಮಾನಕ್ಕೆ ಕೃತಜ್ಞನಾಗಿದ್ದೇನೆ. ಸಣ್ಣ ಪ್ರಾಯದಲ್ಲೇ ಅತೀ ಎತ್ತರದ ಸ್ಥಾನ ಪಡೆದು ಬಂಟರ ಕೀರ್ತಿಯನ್ನು ಹೆಚ್ಚಿಸಿದ ನಳಿನ್‌ ಕುಮಾರ್‌ ಕಟೀಲು, ಪ್ರವೀಣ್‌ ಸಿ. ಶೆಟ್ಟಿ ಹಾಗೂ ಸರಳ, ಸಹೃದಯಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭಿನಂದಿಸುತ್ತಿದ್ದೇನೆ ಎಂದರು.

ಹೆಸರು ಉಳಿಯಲಿ

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಆರ್ಗಾನಿಕ್‌ ಗ್ರೂಪ್‌ ಆಫ್‌ ಇಂಡಸ್ಟ್ರೀಸ್‌ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಆನಂದ ಎಂ. ಶೆಟ್ಟಿ ಅವರು ಮಾತನಾಡಿ, ಬಂಟ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ, ಆರೋಗ್ಯ, ಆಶ್ರಯ, ಆರ್ಥಿಕ ಸಹಾಯ ನೀಡುವ ಮೂಲಕ ಅವರನ್ನು ಮೇಲಕ್ಕೆತ್ತುವ ಪ್ರಯತ್ನದಲ್ಲಿ ತೊಡಗಿರುವ ಐಕಳ ಹರೀಶ್‌ ಶೆಟ್ಟಿ ಅವರ ಹೆಸರು ಸೂರ್ಯ-ಚಂದ್ರರಿರುವಷ್ಟು ಕಾಲ ಉಳಿಯಲಿ ಎಂದು ಹಾರೈಸಿದರು.

ಸಮಾಜದ ಋಣದಿಂದ ಮುಕ್ತರಾಗೋಣ

ಇನ್ನೋರ್ವ ಮುಖ್ಯ ಅತಿಥಿ ಎಂ. ಆರ್‌. ಜಿ. ಗ್ರೂಪ್‌ ಬೆಂಗಳೂರು ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ಸಂಪಾದನೆಯ ಒಂದು ಭಾಗವನ್ನು ಇಂತಹ ಉತ್ತಮ ಕಾರ್ಯಕ್ಕೆ ನೀಡಿ ಸಮಾಜದ ಋಣದಿಂದ ಮುಕ್ತರಾಗೋಣ. ಇಂದು ಒಂಬತ್ತು ಹೊಸ ಬಂಟರ ಭವನ ಸ್ಥಾಪಿಸಲು ಕಾರಣಕರ್ತರಾದವರನ್ನು ಸಮ್ಮಾನಿಸುವ ಭಾಗ್ಯ ನನಗೊದಗಿದೆ. ಈ ಒಂಬತ್ತು ಬಂಟರ ಭವನಗಳಿಗೆ ನಾದು ಆರ್ಥಿಕ ಸಹಾಯ ನೀಡಿದ್ದೇನೆ. ಆತ್ಮತೃಪ್ತಿಗೋಸ್ಕರ ಅಳಿಲ ಸೇವೆ ಮಾಡುತ್ತಿದ್ದೇನೆ ಎಂದರು.

ಸಹಾಯ ನೀಡುವುದು ನಮ್ಮ ಆದ್ಯ ಕರ್ತವ್ಯ

ಮುಖ್ಯ ಅತಿಥಿ ಕೃಷ್ಣ ಪ್ಯಾಲೇಸ್‌ನ ನಿರ್ದೇಶಕಿ ಉಮಾಕೃಷ್ಣ ಶೆಟ್ಟಿ ಮಾತನಾಡಿ, ಐಕಳ ಹರೀಶ್‌ ಅವರಂತಹ ಇನ್ನಷ್ಟು ಬಂಟರು ಹುಟ್ಟಿಬರಲೆಂದು ಹಾರೈಸಿ, ಆರ್ಥಿಕ ಸಂಕಷ್ಟದಲ್ಲಿರುವ ನಮ್ಮ ಬಂಧುಗಳಿಗೆ ಸಹಾಯ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಐಕಳ ಹರೀಶ್‌ ಶೆಟ್ಟಿ ಮತ್ತು ಅವರ ತಂಡದ ಪರಿಶ್ರಮ ಅಪಾರವಾಗಿದೆ ಎಂದರು.

ಸಮ್ಮಾನ

ಸಮಾರಂಭದಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಸಂಸದ ನಳಿನ್‌ ಕುಮಾರ್‌ ಕಟೀಲು, ಕರ್ನಾಟಕ ನೂತನ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಸಾಯಿ-ವಿರಾರ್‌ ನೂತನ ಮೇಯರ್‌ ಪ್ರವೀಣ್‌ ಸಿ. ಶೆಟ್ಟಿ ಅವರನ್ನು ಅತಿಥಿ-ಗಣ್ಯರೊಂದಿಗೆ ಒಕ್ಕೂಟದ ಪದಾಧಿಕಾರಿಗಳಾದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಉಳ್ತೂರು ಮೋಹನ್‌ದಾಸ್‌ ಶೆಟ್ಟಿ, ಸತೀಶ್‌ ಅಡಪ್ಪ ಸಂಕಬೈಲ್ ಅವರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರ, ಚಿನ್ನದ ತಟ್ಟೆ, ಪಾಂಚಜನ್ಯವನ್ನಿತ್ತು ಸಮ್ಮಾನಿಸಿದರು.

ನಳಿನ್‌ ಕುಮಾರ್‌ ಕಟೀಲ್ ಅವರನ್ನು ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಒಕ್ಕೂಟದ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಮೇಯರ್‌ ಪ್ರವೀಣ್‌ ಸಿ. ಶೆಟ್ಟಿ ಅವರನ್ನು ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಅವರು ಪರಿಚಯಿಸಿ, ಸಾಧನೆಗಳನ್ನು ವಿವರಿಸಿದರು.

ಒಕ್ಕೂಟದ ಆರಂಭದ ಬಳಿಕ ನೂತನ ಬಂಟರ ಸಂಘಗಳ ಹುಟ್ಟಿಗೆ ಕಾರಣಕರ್ತರಾದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನಕುರ್ಕಿಲ್ಬೆಟ್ಟು, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಎನ್‌. ವಿವೇಕ್‌ ಶೆಟ್ಟಿ ಅವರ ಅನುಪಸ್ಥಿತಿಯಲ್ಲಿ ಪದ್ಮನಾಭ ಎಸ್‌. ಪಯ್ಯಡೆ, ಮೈಸೂರು ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ, ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಬೈಂದೂರು ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ದಾವಣಗೆರೆ ಬಂಟರ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ, ಭದ್ರಾವತಿ ಬಂಟರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಹಾಗೂ ಸಂಘಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಭೋಜನದ ಪ್ರಾಯೋಜಕತ್ವವವನ್ನು ವಹಿಸಿದ್ದ ಡಾ| ಶಂಕರ್‌ ಶೆಟ್ಟಿ ವಿರಾರ್‌, ಶಶಿಧರ ಶೆಟ್ಟಿ ನಲಸೋಪರ, ಪಾಂಡು ಶೆಟ್ಟಿ ವಸಾಯಿ, ಹರೀಶ್‌ ಶೆಟ್ಟಿ ಗುರ್ಮೆ, ಜಯಂತ್‌ ಪಕ್ಕಳ ವಸಾಯಿ, ಮಂಜುನಾಥ್‌ ಶೆಟ್ಟಿ ವಸಾಯಿ, ಶಂಕರ ಆಳ್ವ ಕರ್ನೂರು, ರತ್ನಾಕರ ಶೆಟ್ಟಿ ಡ್ರೀಮ್‌ಲ್ಯಾಂಡ್‌ ಇವರನ್ನು ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಗೌರವಿಸಿದರು.

ನೃತ್ಯ ವೈವಿಧ್ಯ

ಪ್ರಾರಂಭದಲ್ಲಿ ಬಂಟರ ಸಂಘ ಪ್ರಾದೇಶಿಕ ಸಮಿತಿಗಳಿಂದ ನೃತ್ಯ ವೈವಿಧ್ಯ ನಡೆಯಿತು. ಬಂಟರ ಸಂಘ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ಕಾರ್ಯಕ್ರಮ ನಿರ್ವಹಿಸಿದರು. ಶೈಲಜಾ ಶೆಟ್ಟಿ ಪ್ರಾರ್ಥನೆಗೈದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ಸಭಾ ಕಾರ್ಯಕ್ರಮ ನಿರ್ವಹಿಸಿದರು.

ವೇದಿಕೆಯಲ್ಲಿ ಡಾ| ಪಿ. ವಿ. ಶೆಟ್ಟಿ, ಉಪೇಂದ್ರ ಶೆಟ್ಟಿ ಬೆಂಗಳೂರು, ಪ್ರಥ್ವಿರಾಜ್‌ ಶೆಟ್ಟಿ, ಜೆ. ಪಿ. ಶೆಟ್ಟಿ, ಸುಧಾಕರ ಶೆಟ್ಟಿ ಬೆಹರೇನ್‌, ಸುಧಾಕರ ಎಸ್‌. ಹೆಗ್ಡೆ, ರಘುರಾಮ ಶೆಟ್ಟಿ ಅವೆನ್ಯೂ, ಚಂದ್ರಹಾಸ್‌ ಕೆ. ಶೆಟ್ಟಿ, ಸಿಎ ಸಂಜೀವ ಶೆಟ್ಟಿ, ಪ್ರವೀಣ್‌ ಬಿ. ಶೆಟ್ಟಿ, ಮಹೇಶ್‌ ಎಸ್‌. ಶೆಟ್ಟಿ, ಗುಣಪಾಲ್ ಶೆಟ್ಟಿ ಐಕಳ, ಶರತ್‌ ವಿ. ಶೆಟ್ಟಿ, ಶಶಿಧರ ಶೆಟ್ಟಿ, ಹರೀಶ್‌ ಶೆಟ್ಟಿ ಗುರ್ಮೆ, ಪಾಂಡು ಎಲ್. ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ರತ್ನಾ ಪಿ. ಶೆಟ್ಟಿ, ಶಾಂತಾರಾಮ ಶೆಟ್ಟಿ ಸನ್‌ಸಿಟಿ, ಅಶೋಕ್‌ ಶೆಟ್ಟಿ ಮೆರಿಟ್, ಡಾ| ವಿರಾರ್‌ ಶಂಕರ್‌ ಶೆಟ್ಟಿ, ಶಿವರಾಮ ಬಿ. ಶೆಟ್ಟಿ ಸೂರತ್‌, ಸಂತೋಷ್‌ ಕುಮಾರ್‌ ಹೆಗ್ಡೆ, ಜಗನ್ನಾಥ ಶೆಟ್ಟಿ, ನಗರ ಸೇವಕ ಅರವಿಂದ ಶೆಟ್ಟಿ, ಕರುಣಾಕರ ಶೆಟ್ಟಿ ಡೊಂಬಿವಲಿ, ಮನೋಹರ್‌ ಶೆಟ್ಟಿ ತೋನ್ಸೆ, ಕೆ. ಸಿ. ರೈ ಜಪ್ಪಿನಮೊಗರು, ಆನಂದ ಶೆಟ್ಟಿ ಗೊಯೆಂಕಾ, ದಿನಕರ ಶೆಟ್ಟಿ ರಮಡಾ, ಸುನೀಲ್ ಶೆಟ್ಟಿ ಕುಂದಾಪುರ, ರಿತೇಶ್‌ ಶೆಟ್ಟಿ ಅಹ್ಮದಾಬಾದ್‌, ಸುರೇಶ್‌ ಶೆಟ್ಟಿ, ಭಾಸ್ಕರ್‌ ಶೆಟ್ಟಿ ಕಾಶೀಮಿರಾ, ಸಂಜೀವ ಎನ್‌. ಶೆಟ್ಟಿ ಸಿಬಿಡಿ, ರಘುನಾಥ್‌ ಶೆಟ್ಟಿ ಅಂಕಲೇಶ್ವರ್‌, ರತ್ನಾಕರ ಶೆಟ್ಟಿ, ಜಗನ್ನಾಥ ರೈ, ವಿಶ್ವನಾಥ ಶೆಟ್ಟಿ ವಸಾಯಿ ಇವರನ್ನು ಗೌರವಿಸಲಾಯಿತು. ಬಂಟ ಸಂಘ-ಸಂಸ್ಥೆಗಳ ಹಾಗೂ ವಿವಿಧ ಜಾತೀಯ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳನ್ನು ಗೌರವಿಸಲಾಯಿತು. ಸಮ್ಮಾನಿತರನ್ನು ತುಳು-ಕನ್ನಡ ಜಾತೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದರು. ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

 

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next