ಹಾವೇರಿ: ಕೋವಿಡ್ 19 ನಿಯಂತ್ರಣಕ್ಕೆ ಹಾಕಿರುವ ಲಾಕ್ ಡೌನ್‌ನಿಂದ ಹಸಿವಿನಿಂದ ಯಾರೂ ಸಾಯಬಾರದು. ಜಿಲ್ಲಾಡಳಿತ ಪರಿಹಾರ ಕಾರ್ಯದಲ್ಲಿ ನಾವೆಲ್ಲ ಭಾಗಿಗಳಾಗುತ್ತೇವೆ ಎಂದು ಜಿಲ್ಲೆಯ ವಿವಿಧ ಮಠಾಧೀಶರು ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವಿವಿಧ ಮಠಾಧೀಶರು, ರೋಟರಿ, ಲಯನ್ಸ್, ರೆಡ್‌ಕ್ರಾಸ್ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಘಗಳ ಮುಖ್ಯಸ್ಥರ ಸಭೆಯಲ್ಲಿ ಮಠಾಧೀಶರು ಈ ಭರವಸೆ ನೀಡಿದರು. ಮಾರಕ ಕೋವಿಡ್ 19 ವೈರಸ್ ನಿಯಂತ್ರಣದಲ್ಲಿ ಹಾವೇರಿ ಹೆಸರು ಹಸಿರಾಗಿ ಉಳಿಯಲಿ ಎಂಬ ಕಾರಣಕ್ಕೆ ಜನರಿಗೆ ನೆರವು ಒದಗಿಸಲು ಜಿಲ್ಲಾಡಳಿತದೊಂದಿಗೆ ನಾವೆಲ್ಲರೂ ಭಾಗಿಗಳಾ ಗುತ್ತೇವೆ ಎಂದು ಮಠಾಧೀಶರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಹೇಳಿದರು.
ಎಲ್ಲರನ್ನು ಒಂದೆಡೆ ಸೇರಿಸಿ ಆಹಾರ ಪೊಟ್ಟಣ ವಿತರಿಸಿ ಫೋಟೋ ತೆಗೆಸಿಕೊಳ್ಳುವ ಬದಲು ಊಟಕ್ಕೆ ಅತ್ಯಗತ್ಯವಿರುವ ಆಹಾರ ಪೊಟ್ಟಣಗಳನ್ನು ಮನೆ ಮನೆಗೆ ತಲುಪಿಸಲಿ ಎಂದು ಸಭೆಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೆಲ ಮಠಾಧೀಶರು ಕೋವಿಡ್ 19 ಲಾಕ್‌ಡೌನ್ ನಿಯಮಗಳನ್ನು ಕಠಿಣವಾಗಿ ಅನುಷ್ಠಾನಕ್ಕೆ ತರಬೇಕು. ಗಡಿ ಭಾಗದಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್‌ಗಳನ್ನು ಬಿಗಿಗೊಳಿಸಬೇಕು. ಜನರಿಗೆ ಜಾಗೃತಿ ಮೂಡಿಸಬೇಕು. ಜಿಲ್ಲಾಡಳಿತದಿಂದ ನಮಗೆ ಪಾಸ್ ನೀಡಿದರೆ ಹಳ್ಳಿ ಹಳ್ಳಿಗೆ ತಿರುಗಿ ಜಾಗೃತಿ ಮೂಡಿಸುವುದಾಗಿ ಹೇಳಿದರು.
ಹುಕ್ಕೇರಿಮಠದ ಶ್ರೀಗಳು, ಹೊಸಮಠದ ಶ್ರೀಗಳು, ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು, ಹತ್ತಿಮತ್ತೂರ ವಿರಕ್ತಮಠದ ಶ್ರೀಗಳು, ದೊಡ್ಡಹುಣಸೆ ಕಲ್ಮಠದ ಸ್ವಾಮೀಜಿ, ಬೊಮ್ಮನಹಳ್ಳಿ ವಿರಕ್ತಮಠದ ಸ್ವಾಮೀಜಿ, ಶಿಗ್ಗಾವಿ ವಿರಕ್ತಮಠದ ಶ್ರೀಗಳು, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ತಿಪ್ಪಾಕೊಪ್ಪದ ಮಹಾಂತದೇವರು, ಕರ್ಜಗಿ ಗೌರಿಮಠದ ಸ್ವಾಮೀಜಿ, ಚೌಡದಾನಪುರದ ಚಿತ್ರಶೇಖರ ಒಡೆಯರ ಸ್ವಾಮೀಜಿ, ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು, ಅಕ್ಕಿಆಲೂರು ಶಿವಬಸವ ಸ್ವಾಮಿಗಳು, ಬಣ್ಣದಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮಿಗಳು, ಗುತ್ತಲ ಕಲ್ಮಠದ ಗುರುಸಿದ್ಧ ಮಹಾಸ್ವಾಮಿಗಳು, ಸವಣೂರಿನ ಕಲ್ಮಮಠದ ಮಹಾಂತಸ್ವಾಮಿಗಳು, ರಾಣೆಬೆನ್ನೂರು ಜೈನ ಶ್ವೇತಾಂಬರ ಸಂಘದ ಪ್ರಕಾಶ ಜೈನ, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಸಂಜೀವಕುಮಾರ, ರೋಟರಿ ಅಧ್ಯಕ್ಷ ಡಾ| ಶ್ರವಣ, ಕಾರ್ಯದರ್ಶಿ ಸುಜೇತ್‌ಕುಮಾರ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಬಿಜಿವಿಎಸ್ ಜಿಲ್ಲಾ ಸಂಚಾಲಕಿ ರೇಣುಕಾ, ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಇದ್ದರು.